ADVERTISEMENT

ಬಸವಾಪಟ್ಟಣ: ‘ಯಂತ್ರಶ್ರೀ’ ಪದ್ಧತಿಯಲ್ಲಿ ಕೃಷಿ ಕ್ರಾಂತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜಾರಿ

ಎನ್.ವಿ.ರಮೇಶ್
Published 31 ಮಾರ್ಚ್ 2021, 3:47 IST
Last Updated 31 ಮಾರ್ಚ್ 2021, 3:47 IST
ಬಸವಾಪಟ್ಟಣ ಸಮೀಪದ ಕತ್ತಲಗೆರೆ ರೈತರು ಯಾತ್ರೀಕೃತ ನಾಟಿಗಾಗಿ ಟ್ರೇಗಳಲ್ಲಿ ಭತ್ತದ ಸಸಿಗಳನ್ನು ಬೆಳೆಸಲು ಬೀಜಗಳನ್ನು ಹಾಕಿರುವುದು
ಬಸವಾಪಟ್ಟಣ ಸಮೀಪದ ಕತ್ತಲಗೆರೆ ರೈತರು ಯಾತ್ರೀಕೃತ ನಾಟಿಗಾಗಿ ಟ್ರೇಗಳಲ್ಲಿ ಭತ್ತದ ಸಸಿಗಳನ್ನು ಬೆಳೆಸಲು ಬೀಜಗಳನ್ನು ಹಾಕಿರುವುದು   

ಬಸವಾಪಟ್ಟಣ: ಬೇಸಾಯದ ಅಭಿವೃದ್ಧಿಗಾಗಿ ನಡೆಯುತ್ತಿರುವ ವಿವಿಧ ಕೃಷಿ ಪದ್ಧತಿಗೆ ಕಿರೀಟವಿಟ್ಟಂತೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯು ಗ್ರಾಮೀಣ ರೈತರಿಗಾಗಿ ಯಂತ್ರಶ್ರೀ ಕೃಷಿ ಪದ್ಧತಿಯನ್ನು ಈ ಭಾಗದ ನೀರಾವರಿ ಪ್ರದೇಶದಲ್ಲಿ ಅಳವಡಿಸಿದ್ದು, ಭಾರಿ ಯಶಸ್ಸು ಕಂಡಿದೆ.

ಕೃಷಿ ಕಾರ್ಮಿಕರ ಕೊರತೆ, ದುಬಾರಿ ಉತ್ಪಾದನಾ ವೆಚ್ಚದಿಂದ ನಷ್ಟ ಅನುಭವಿಸುತ್ತಿರುವ ರೈತರ ಪಾಲಿಗೆ ‘ಯಂತ್ರಶ್ರೀ’ ವರದಾನವಾಗಿದೆ.

ಭತ್ತವನ್ನು ಗದ್ದೆಗಳ ಮಡಿಗಳಲ್ಲಿ ಬೀಜ ಚೆಲ್ಲಿ ಸಸಿ ಬೆಳೆಸಿ ಕೂಲಿಕಾರರಿಂದ ನಾಟಿ ಮಾಡಿಸುವುದರೊಂದಿಗೆ ಕೈಯಿಂದಲೇ ಕಳೆ ಕೀಳುವ ದುಬಾರಿ ಪದ್ಧತಿಗೆ ‘ಯಂತ್ರಶ್ರೀ’ ಪದ್ಧತಿ ಇತಿಶ್ರೀ ಹಾಡುವ ದಿನಗಳು ದೂರವಿಲ್ಲ.

ADVERTISEMENT

ಪ್ಲಾಸ್ಟಿಕ್‌ ಟ್ರೇಗಳಲ್ಲಿ ತುಂಬಿದ ಮರಳು ಮಿಶ್ರಿತ ಕಪ್ಪುಮಣ್ಣಿನಲ್ಲಿ ಬೀಜಗಳನ್ನು ಹಾಕಿ ಸಸಿ ಬೆಳೆಸಿಕೊಂಡು, ಯಂತ್ರಗಳ ಮೂಲಕ ನಾಟಿ ಮಾಡಲಾಗುತ್ತದೆ. ನಂತರ ಭತ್ತದಲ್ಲಿನ ಕಳೆ ಕೀಳಲು ಕೈಯಿಂದಲೇ ನಡೆಸಬಹುದಾದ ವೀಡರ್‌ ಯಂತ್ರದಿಂದ ಕಳೆ ತೆಗೆದು ಯಂತ್ರದಿಂದಲೇ ಕೊಯ್ಲು ಮಾಡುವ ಈ ಪದ್ಧತಿ ಬಹು ಸುಲಭ ಹಾಗೂ ಕಡಿಮೆ ಖರ್ಚಿನಿಂದ ಕೂಡಿದೆ. ಸಂಸ್ಥೆಯ ಕೃಷಿ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶವನ್ನು ಈಗಾಗಲೇ ರೈತರು ಪಡೆದಿದ್ದಾರೆ. ರಾಜ್ಯದ ಸುಮಾರು100 ತಾಲ್ಲೂಕುಗಳಲ್ಲಿ ಈಗಾಗಲೇಈ ಪದ್ಧತಿಯನ್ನು ಪರಿಚಯಿಸಲಾಗಿದೆ.

ಈ ‘ಯಂತ್ರಶ್ರೀ’ ಪದ್ಧತಿಯನ್ನು ರಾಜ್ಯದಲ್ಲಿ ಜನಪ್ರಿಯಗೊಳಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಸುಮಾರು ₹30 ಕೋಟಿ ತೊಡಗಿಸಿದ್ದು, ಇದನ್ನು ಅಳವಡಿಸಿಕೊಂಡ ರೈತರು ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ.

‘ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ, ನಲ್ಕುದುರೆ, ಚಿರಡೋಣಿ, ಸಂಗಾಹಳ್ಳಿ, ಬೆಳಲಗೆರೆ, ಅಶೋಕನಗರ ಕ್ಯಾಂಪ್‌, ನವಿಲೆಹಾಳು ಸೇರಿದಂತೆ ಸುಮಾರು 700 ಎಕರೆ ಪ್ರದೇಶದಲ್ಲಿ ಯಂತ್ರಶ್ರೀ ಪದ್ಧತಿಯನ್ನು ರೈತರು ಅಳವಡಿಸಿಕೊಂಡಿದ್ದಾರೆ. ಇದರೊಂದಿಗೆ ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆದರೆ ಜನತೆಗೆ ವಿಷರಹಿತ ಶುದ್ಧ ಭತ್ತವನ್ನು ಒದಗಿಸಬಹುದಾಗಿದೆ. ಒಂದು ಗಂಟೆಯಲ್ಲಿ ಒಂದು ಎಕರೆ ಗದ್ದೆಯನ್ನು ಯಂತ್ರದ ಮೂಲಕ ನಾಟಿ ಮಾಡಬಹುದು. ಅದೇ ರೀತಿ ವೀಡರ್‌ಗಳಿಂದ ಸುಲಭವಾಗಿ ಕಳೆಯನ್ನೂ ತೆಗೆಯಬಹುದು’ ಎನ್ನುತ್ತಾರೆ ಈ ಸಂಸ್ಥೆಯ ಕೃಷಿ ಅಧಿಕಾರಿ ರಾಕೇಶ್‌ ಪವಾರ್‌.

‘ಈ ಪದ್ಧತಿಯಲ್ಲಿ ರೋಗಬಾಧೆ ಕಡಿಮೆಯಾಗಿದ್ದು, ಎಕರೆಗೆ 35ರಿಂದ 40 ಕ್ವಿಂಟಲ್‌ ಇಳುವರಿ ಪಡೆಯಬಹುದು. ಮುಖ್ಯವಾಗಿನಾಟಿ ಹಾಗೂ ಕಳೆ ಕೀಳಲು ಕೂಲಿಕಾರರ ಮೇಲಿನ ಅವಲಂಬನೆ ಇಲ್ಲವಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗಿದೆ’ ಎನ್ನುತ್ತಾರೆ ಕತ್ತಲಗೆರೆಯ ರೈತರಾದ ಶೇಖರಪ್ಪ, ಕೊಟ್ರೇಶಪ್ಪ ಮತ್ತು ವಿಕಾಸ್‌.

‘ಸಾವಯವ ಗೊಬ್ಬರದೊಂದಿಗೆ ಅಲ್ಪ ಪ್ರಮಾಣದ ರಾಸಾಯನಿಕ ಗೊಬ್ಬರವನ್ನೂನಾವು ಉಪಯೋಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ರೈತರು ಈ ಯಂತ್ರಶ್ರೀ ಪದ್ಧತಿ ಯನ್ನು ಸಂಪೂರ್ಣವಾಗಿ ಅವಲಂಬಿಸಲಿದ್ದೇವೆ’ ಎನ್ನುತ್ತಾರೆ ಅಶೋಕನಗರ ಕ್ಯಾಂಪ್‌ನ ರೈತರಾದ ಭೋಗೇಶ್ವರರಾವ್‌, ಶ್ರೀನಿವಾಸರಾವ್‌ ಮತ್ತು ಸುಧಾಕರ್‌.

‘ನಮ್ಮ ಸಂಸ್ಥೆಯಲ್ಲಿ ರೈತರಿಗಾಗಿ ಭತ್ತದ ನಾಟಿ ಯಂತ್ರಗಳು, ವೀಡರ್‌ಗಳು, ಟ್ರಾಕ್ಟರ್‌ಗಳು,
ಕಲ್ಟಿವೇಟರ್‌ಗಳು, ರೋಟಾವೇಟರ್‌ಗಳು ಮುಂತಾದ ಯಂತ್ರಗಳನ್ನು ಕಡಿಮೆ ದರದಲ್ಲಿ ರೈತರಿಗೆ ಬಾಡಿಗೆಗೆ ನೀಡಲಾಗುತ್ತಿದ್ದು, ರೈತರು ಪ್ರತಿ ಗ್ರಾಮದಲ್ಲಿರುವ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು’ ಎನ್ನುತ್ತಾರೆ ಸಂಸ್ಥೆಯ ಜಿಲ್ಲಾ ನಿರ್ದೇಶಕ ಜಯಂತ್‌ಪೂಜಾರ್‌.

‘ರೈತರು ಈ ಯೋಜನೆಯನ್ನು ಉತ್ತಮವಾಗಿ ಬಳಸಿಕೊಂಡು ಕೃಷಿ ಉತ್ಪನ್ನಗಳನ್ನು ಹೆಚ್ಚಾಗಿ ಬೆಳೆಯುವುದರೊಂದಿಗೆ ದೇಶದ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು’ ಎನ್ನುತ್ತಾರೆ ತಾಲ್ಲೂಕು ಯೋಜನಾಧಿಕಾರಿಗಳಾದ ರವಿಚಂದ್ರ ಮತ್ತು ಮಾಲತಿ ದಿನೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.