ADVERTISEMENT

ಆಮ್ಲಜನಕ ವಿತರಣೆಯಲ್ಲಿ ಜಿಲ್ಲೆಗೆ ಪ್ರಥಮ ಪ್ರಾಶಸ್ತ್ಯ

ಹರಿಹರದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2021, 9:10 IST
Last Updated 13 ಮೇ 2021, 9:10 IST
ಹರಿಹರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ದಿ ಸದರನ್‍ ಗ್ಯಾಸ್‍ ಏಜೆನ್ಸಿಗೆ ಬುಧವಾರ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹರಿಹರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ದಿ ಸದರನ್‍ ಗ್ಯಾಸ್‍ ಏಜೆನ್ಸಿಗೆ ಬುಧವಾರ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಹರಿಹರ: ಆಮ್ಲಜನಕವಿತರಣೆ ಹಾಗೂ ಪೂರೈಕೆಯಲ್ಲಿ ದಾವಣೆಗೆರೆ ಜಿಲ್ಲೆಗೆ ಪ್ರಥಮ ಪ್ರಾಶಸ್ತ್ಯ. ನಂತರ ಬೇಡಿಕೆ ಆಧಾರದ ಮೇಲೆ ಇತರೆ ಜಿಲ್ಲೆಗಳಿಗೆ ಪೂರೈಸಬೇಕು ಎಂದು ಏಜೆನ್ಸಿ ಮಾಲೀಕರಿಗೆ ಹಾಗೂ ಅಧಿಕಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

ಹರಿಹರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ದಿ ಸದರನ್‍ ಗ್ಯಾಸ್‍ ಏಜೆನ್ಸಿಗೆ ಬುಧವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ರಾಜ್ಯಕ್ಕೆ ಆಮ್ಲಜನಕ ಪೂರೈಕೆ ಹೊಣೆ ಹೊತ್ತಿರುವ ಸಚಿವ ಜಗದೀಶ್ ಶೆಟ್ಟರ್‌ ಅವರೊಂದಿಗೆ ಚರ್ಚೆ ನಡೆಸಿ, ಜಿಲ್ಲೆಗೆ ಅಗತ್ಯವಾದ ಆಮ್ಲಜನಕ ಪೂರೈಸುವಂತೆ ಮನವಿ ಸಲ್ಲಿಸಲಾಗಿದೆ. ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಜಿಲ್ಲೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನಿತ್ಯ 23 ಕೆ.ಎಲ್‌ ಆಮ್ಲಜನಕ ಅಗತ್ಯವಿದೆ. ಆದರೆ, 17.5 ಕೆ.ಎಲ್. ಪೂರೈಕೆಯಾಗುತ್ತಿದೆ. ಹೆಚ್ಚುವರಿ ಆಮ್ಲಜನಕ ಬೇಡಿಕೆಯ ಪೂರೈಕೆಗೆ ಸರ್ಕಾರದಿಂದ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ’ ಎಂದರು.

ವೆಂಟಿಲೇಟರ್‌ ನಿರ್ವಹಣೆ ಮತ್ತು ನರ್ಸ್‍ಗಳಿಗೆ ಮೇ 10ರಂದು ಸಂದರ್ಶನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. 17 ವೆಂಟಿಲೇಟರ್‌ ನಿರ್ವಾಹಕರು ಹಾಗೂ 30 ನರ್ಸ್‍ಗಳನ್ನು ಕೋವಿಡ್‍ ಕಾರ್ಯಕ್ಕೆ ನೇಮಕ ಮಾಡಲಾಗಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಗೆ ಇಬ್ಬರು ನಿರ್ವಾಹಕರನ್ನು ನಿಯೋಜಿಸಲಾಗುವುದು. ಜಿಲ್ಲೆಗೆ 50 ಹೆಚ್ಚುವರಿ ‘ಡಿ’ ದರ್ಜೆ ನೌಕರರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕಿನ ಕೋವಿಡ್‍ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಬಂಧಿಕರು ಊಟ ನೀಡುವ ನೆಪದಲ್ಲಿ ಅನಗತ್ಯವಾಗಿ ಭೇಟಿ ನೀಡುವುದು ಹಾಗೂ ಮನೆಗಳಲ್ಲಿ ಪ್ರತ್ಯೇಕ ವಾಸದಲ್ಲಿರುವ ಸೋಂಕಿತರು ನಿಯಮಗಳನ್ನು ಪಾಲಿಸದಿರುವುದು ಸೋಂಕಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಸೋಂಕಿತರ ಸಂಪರ್ಕಕ್ಕೆ ಬರುವ ಸಾರ್ವಜನಿಕರು ಮುಂಜಾಗ್ರತಾ ಕ್ರಮ ವಹಿಸುವ ಮೂಲಕ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಸೋಂಕಿತರ ಔಷಧೋಪಚಾರಕ್ಕೆ ಅಗತ್ಯವಾದ ಔಷಧ ಹಾಗೂ ಲಸಿಕೆಗಳು ತಲುಪಿದ್ದು, ಗುರುವಾರದಿಂದ ಎಲ್ಲಾ ವ್ಯವಸ್ಥೆಗಳು ಸರಿಯಾಗಲಿವೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಡಿಎಚ್‍ಒ ನಾಗರಾಜ್‌, ತಾಲ್ಲೂಕು ಪಂಚಾಯಿತಿ ಇಒ ಜಿ.ಡಿ.ಗಂಗಾಧರನ್‌, ಸಿಪಿಐ ಸತೀಶ್‍ ಕುಮಾರ್‌, ಪಿಎಸ್‍ಐ ಸುನೀಲ್‍ ಕುಮಾರ್‌ ತೇಲಿ, ನಗರಸಭೆ ಸದಸ್ಯ ರಜನಿಕಾಂತ್‌, ಮುಖಂಡ ಚಂದ್ರಶೇಖರ್‌ ಪೂಜಾರ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.