ADVERTISEMENT

ಕೊಳೆಗೇರಿ ಮನೆಗಳ ನಿರ್ಮಾಣಕ್ಕೆ ಗ್ರಹಣ

ಒಂದು ಮನೆ ನಿರ್ಮಾಣಕ್ಕೆ ₹6.20 ಲಕ್ಷ l ವೆಚ್ಚ ಅಗತ್ಯ ಅನುದಾನದ ಕೊರತೆ

ಡಿ.ಕೆ.ಬಸವರಾಜು
Published 24 ಫೆಬ್ರುವರಿ 2020, 9:48 IST
Last Updated 24 ಫೆಬ್ರುವರಿ 2020, 9:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರುಯೋಜನೆಯಡಿ 4,023 ಫಲಾನುಭವಿಗಳನ್ನು ಗುರುತಿಸಿದ್ದು, ಅಗತ್ಯವಿರುವಷ್ಟು ಅನುದಾನ ಬಿಡುಗಡೆಯಾಗದೇ ಇರುವುದರಿಂದ ಮನೆಗಳ ನಿರ್ಮಾಣ ಆರಂಭವಾಗಿಲ್ಲ.

ಈಗಿನ ದರಪಟ್ಟಿಯ ಪ್ರಕಾರ ಒಂದು ಮನೆ ನಿರ್ಮಾಣಕ್ಕೆ ₹6.20 ಲಕ್ಷ ವೆಚ್ಚವಾಗುತ್ತಿದೆ. ಆದರೆ ಸರ್ಕಾರಗಳು 2006-07ನೇ ಸಾಲಿನಲ್ಲಿ ನೀಡುತ್ತಿದ್ದ ಅನುದಾನವನ್ನೇ ಈಗಲೂ ನೀಡುತ್ತಿವೆ. ಇದರಿಂದಾಗಿ ಮನೆ ನಿರ್ಮಾಣ ದುಬಾರಿ ಆಗಿರುವುದರಿಂದ ಕೊಳೆಗೇರಿನಿವಾಸಿಗಳ ಮನೆಗಳಿಗೆ ಗ್ರಹಣ ಹಿಡಿದಿದೆ.

ಸಮಸ್ಯೆ ಏನು? ‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ 2018-19ನೇ ಸಾಲಿನಲ್ಲಿ 28 ಕೊಳೆಗೇರಿಗಳನ್ನು ಗುರುತಿಸಿದ್ದು, ಮನೆಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದೆ. ಟೆಂಡರ್ ಪ್ರಕ್ರಿಯೆ ತಯಾರಾಗಿದೆ. ಆದರೆ ಒಂದು ಮನೆ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ₹4.90 ಲಕ್ಷ ಅನುದಾನ ನೀಡುತ್ತಿದ್ದು, ಈಗ ಕಟ್ಟಡ ಸಾಮಗ್ರಿಗಳು ದುಬಾರಿಯಾಗಿರುವುದರಿಂದ ಇದು ಸಾಲುತ್ತಿಲ್ಲ’ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ಎಸ್‌.ಡಿ. ಪಾಟೀಲ್ ಹೇಳುತ್ತಾರೆ.

ADVERTISEMENT

‘ಪ್ರಸಕ್ತ ದಿನಗಳ ದರಪಟ್ಟಿ ಪ್ರಕಾರ ಅಂದಾಜು ವೆಚ್ಚ ₹6.20 ಲಕ್ಷ ತಗುಲುತ್ತದೆ. ಆದರೆ ಈಗ ಪರಿಶಿಷ್ಟ ಜಾತಿ ಹಾಗೂ ಪಂಗಡದ ಒಬ್ಬ ಫಲಾನುಭವಿಗೆ ₹3.50 ಲಕ್ಷ ಹಾಗೂ ಇತರೆ ವರ್ಗದವರಿಗೆ ₹2.70 ಲಕ್ಷ ಬರುತ್ತಿದೆ. ಇವುಗಳ ನಡುವಿನ ವ್ಯತ್ಯಾಸದ ವೆಚ್ಚವನ್ನು ಭರಿಸಲು ಅವಕಾಶವಿಲ್ಲ. ಕೊಳೆಗೇರಿ ನಿವಾಸಿಗಳಿಗೆ ಬ್ಯಾಂಕ್‍ನವರು ಸಾಲ ಕೊಡಲು ಅವರ ಬಳಿ ಯಾವುದೇ ಅಧಿಕೃತ ದಾಖಲಾತಿ ಇರುವುದಿಲ್ಲ. ಆದ್ದರಿಂದ ಸರ್ಕಾರ ನೀಡುತ್ತಿರುವ ಅನುದಾನವನ್ನು ₹5 ಲಕ್ಷಕ್ಕೆ ಹೆಚ್ಚಿಸಿದರೆ ಹೇಗೋ ನಿರ್ವಹಿಸಬಹುದು’ ಎಂಬುದು ಅವರ ಅಭಿಪ್ರಾಯ.

‘ಪ್ರವಾಹದ ಸಂದರ್ಭದಲ್ಲಿ ಒಂದು ಮನೆ ನಿರ್ಮಾಣಕ್ಕೆ ₹5 ಲಕ್ಷ ಬೇಕಾಗುತ್ತದೆ ಎಂಬುದನ್ನು ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದಾರೆ. ಕಾರ್ಮಿಕರ ಕೂಲಿ ಹಾಗೂ ಮನೆ ಕಟ್ಟಲು ಬೇಕಾದ ಸಲಕರಣೆಗಳ ವೆಚ್ಚ ದುಬಾರಿಯಾಗಿರುವುದರಿಂದ ಇಷ್ಟು ಹಣ ಬೇಕಾಗುತ್ತದೆ’ ಎಂದು ಹೇಳುತ್ತಾರೆ.

ಗುಣಮಟ್ಟದ ಮನೆ:‘ಮಂಡಳಿಯಿಂದ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಮನೆ ನಿರ್ಮಾಣ ಮಾಡುತ್ತೇವೆ. ಆರ್‌ಸಿಸಿ ಫುಟಿಂಗ್ ಜೊತೆಗೆ ಫಿಲ್ಲರ್, ಕಾಲಂ, ಸಜ್ಜಾ, ಲಿಂಟ್ಲ್‌, ಆರ್‌ಸಿಸಿ ಪ್ಲಿಂಥ್ ಬೀಮ್, ರೂಫ್ ಬೀಮ್, ಸ್ಲ್ಯಾಬ್‌ಗಳನ್ನು ಬಳಸಿ ಮನೆ ನಿರ್ಮಿಸುತ್ತಿದ್ದು, ಫಲಾನುಭವಿಗಳು ಮನೆಯ ಮೇಲೆ ಆರ್‌ಸಿಸಿ ಕಟ್ಟಬಹುದು’ ಎಂದು ಮಂಡಳಿಯ ಸಹಾಯಕ ಎಂಜಿನಿಯರ್ ಆನಂದಪ್ಪ ಹೇಳುತ್ತಾರೆ.

ಮನೆಗಳ ನಿರ್ಮಾಣಕ್ಕೆ ಮಂಡಳಿಯಿಂದ ಡಿಪಿಆರ್ ಸಲ್ಲಿಸಲಾಗಿದೆ. ಒಂದು ಮನೆ ನಿರ್ಮಾಣಕ್ಕೆ ಸರ್ಕಾರ ಕನಿಷ್ಠ ₹5 ಲಕ್ಷ ಹಣ ನೀಡಬೇಕು. ಈ ಬಾರಿಯ ಬಜೆಟ್‌ನಲ್ಲಿ ಹಣ ನಿರೀಕ್ಷೆ ಮಾಡುತ್ತಿದ್ದೇವೆ.

- ಎಸ್‌.ಡಿ.ಪಾಟೀಲ್, ಎಇಇ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.