ADVERTISEMENT

ಇತಿಹಾಸ ಸೃಷ್ಟಿಸಿದ ವ್ಯಕ್ತಿ ಎಸ್‌ಪಿಬಿ: ಚಿಂದೋಡಿ ಬಂಗಾರೇಶ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 4:08 IST
Last Updated 26 ಸೆಪ್ಟೆಂಬರ್ 2021, 4:08 IST
ಸ್ವರ ಸಾಮ್ರಾಟ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಕೃತಿಯನ್ನು ಜಿಲ್ಲೆ ಸಮಾಚಾರ ಪತ್ರಿಕಾ ಬಳಗದಿಂದ ಶನಿವಾರ ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆ ಮಾಡಲಾಯಿತು
ಸ್ವರ ಸಾಮ್ರಾಟ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಕೃತಿಯನ್ನು ಜಿಲ್ಲೆ ಸಮಾಚಾರ ಪತ್ರಿಕಾ ಬಳಗದಿಂದ ಶನಿವಾರ ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆ ಮಾಡಲಾಯಿತು   

ದಾವಣಗೆರೆ: ಇತಿಹಾಸದ ಅರಿವಿಲ್ಲದವರು ಇತಿಹಾಸ ಸೃಷ್ಟಿ ಮಾಡಲಾರರು. ಸಂಗೀತಲೋಕದಲ್ಲಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಇತಿಹಾಸವನ್ನು ಸೃಷ್ಟಿ ಮಾಡಿದವರು ಎಂದು ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್ ತಿಳಿಸಿದರು.

ಹಿರಿಯ ಪತ್ರಕರ್ತ ವಿ. ಹನುಮಂತಪ್ಪ ‘ರಚಿಸಿರುವ ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಪುಸ್ತಕ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.

‘5 ದಶಕಗಳ ಹಿಂದೆ ನಾನು ರೈತರ ಮಕ್ಕಳು ಎಂಬ ಚಿತ್ರ ಮಾಡಿದಾಗ ಅದರಲ್ಲಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಜಾನಕಿ ಅವರನ್ನು ಹಾಡಿಸಬೇಕು ಎಂದು ನಿರ್ಧರಿಸಿ ಹಠ ಹಿಡಿದು ಹಾಡಿಸಿದ್ದೆ. ನಮ್ಮ ಗೆಳೆತನಕ್ಕೆ 50 ವರ್ಷ ಕಳೆದಿದೆ. ಈ ಮಧ್ಯೆ ನಾನು ಮಾಡಿದ ಪಂಚಾಕ್ಷರಿ ಗವಾಯಿ ಚಿತ್ರದ ಕೊನೇ ಹಾಡನ್ನು ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಅಂದು ಒಂದು ಹಾಡಿಗೆ ಬೆಳಿಗ್ಗಿನಿಂದ ಸಂಜೆವರೆಗೆ ಸಮಯ ತಗೊಂಡಿದ್ದರು. ಅದೇ ಹಾಡಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು’ ಎಂದು ನೆನಪಿಸಿಕೊಂಡರು.

ADVERTISEMENT

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿ. ಹಲಸೆ, ‘ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಸಂಗೀತಗಾರರಿಗೆ, ನೃತ್ಯಗಾರರಿಗೆ ರಾಜಾಶ್ರಯ ಸಿಗುತ್ತಿತ್ತು. ರಾಜ ಪ್ರಭುತ್ವಗಳು ಕೊನೆಗೊಂಡ ಮೇಲೂ ಸಂಗೀತ ‍ಪರಂಪರೆ ಮುಂದುವರಿಯಿತು. ಈ ಆಧುನಿಕ ಸಂಗೀತಕಾರರಲ್ಲಿ ಕೇಸರಿ, ಸುಬ್ಬುಲಕ್ಷ್ಮಿ, ಗಂಗೂಬಾಯಿ ಹಾನಗಲ್‌, ಅಬ್ದುಲ್‌
ಕರೀಂಖಾನ್‌, ಲತಾ ಮಂಗೇಷ್ಕರ್‌, ಆಶಾ ಬೋಂಸ್ಲೆ, ಎ.ಆರ್. ರೆಹಮಾನ್‌ ಮುಂತಾದ ಹಲವರು ಇದ್ದಾರೆ. ಈ ಪಟ್ಟಿಯಲ್ಲಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಕೂಡಾ ಇದ್ದಾರೆ’ ಎಂದು ಹೇಳಿದರು.

ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ‘ಭಾರತದ ಇತಿಹಾಸ ಪ್ರತೀಕವಾಗಿ ಬಾಲು ಇದ್ದರು. ಹಾಡಿನ ಮೂಲಕ ಜೀವಂವಾಗಿದ್ದರು. ಒಬ್ಬ ಗಾಯಕ, ಸೆಲೆಬ್ರಿಟಿ ಯಾಗಿ ಹೇಗೆ ಇರಬೇಕು ಎಂಬುದಕ್ಕೆ ಬಾಲಸುಬ್ರಹ್ಮಣ್ಯಂ
ಮಾದರಿಯಾಗಿದ್ದಾರೆ’ ಎಂದರು.

ಹಿಮೋಫೀಲಿಯಾ ಸೊಸೈಟಿ ಸಂಸ್ಥಾಪಕ ಡಾ. ಸುರೇಶ್ ಹನಗವಾಡಿ, ಸಾಹಿತಿ ಡಾ. ಆನಂದ ಋಗ್ವೇದಿ, ಡಾ. ಈಶ್ವರಶರ್ಮ, ಕೃತಿಕಾರ ವಿ. ಹನುಮಂತಪ್ಪ,‌ ಎಂ.ಬಿ. ಕಾಲೇಜು ನಿರ್ದೇಶಕ ಡಾ.ಜಿ.ಎನ್.ಎಚ್. ಕುಮಾರ್, ಜಿಲ್ಲೆ ಸಮಾಚಾರ ಬಳಗದ ಗೌರವಾಧ್ಯಕ್ಷ ಎನ್.ಟಿ. ಎರ‍್ರಿಸ್ವಾಮಿ, ಹಿರಿಯ ವಕೀಲ ರಾಮಚಂದ್ರ ಕಲಾಲ್ ಅವರೂ ಇದ್ದರು. ರವಿ ಆರುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತಾ ರಾಘವೇಂದ್ರ ಪ್ರಾರ್ಥಿಸಿದರು. ಆನಂದ ತೀರ್ಥಾಚಾರ್ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ್‌ ಶೆಣೈ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.