ADVERTISEMENT

ಜೀವನದಲ್ಲಿ ಮಾಧ್ಯಮಗಳ ಪಾತ್ರ ಅಪಾರ: ಮಮತಾ ಹೊಸಗೌಡರ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 4:42 IST
Last Updated 2 ಜುಲೈ 2021, 4:42 IST
ದಾವಣಗೆರೆ ಮಂಡಿಪೇಟೆ ಬಳಿಯ ಹರ್ಡೇಕರ್ ಮಂಜಪ್ಪ ಸರ್ಕಲ್‍ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಉದ್ಘಾಟಿಸಿದರು
ದಾವಣಗೆರೆ ಮಂಡಿಪೇಟೆ ಬಳಿಯ ಹರ್ಡೇಕರ್ ಮಂಜಪ್ಪ ಸರ್ಕಲ್‍ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಉದ್ಘಾಟಿಸಿದರು   

ದಾವಣಗೆರೆ: ಪತ್ರಿಕೆಗಳು ಜೀವನದ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಈಗಲೂ ಎಲ್ಲರ ಬದುಕಿನ ಅಂಗವಾಗಿ ಮಾಧ್ಯಮಗಳಿವೆ. ಇನ್ನಷ್ಟು ವಿನೂತನವಾಗಿ, ಹೊಸ ವಿಚಾರಗಳೊಂದಿಗೆ ಮಾಧ್ಯಮಗಳು ಜನರಿಗೆ ತಲುಪುವಂತಾಗಬೇಕು ಎಂದು ಕಂದಾಯ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಹೇಳಿದರು.

ನಗರದ ಮಂಡಿಪೇಟೆ ಬಳಿಯ ಹರ್ಡೇಕರ್ ಮಂಜಪ್ಪ ಸರ್ಕಲ್‍ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಬದಲಾದ ಈ ಸಂದರ್ಭದಲ್ಲಿ ಮೊಬೈಲ್, ಟಿವಿ ಮೂಲಕ ಬಹಳ ವೇಗವಾಗಿ ಸುದ್ದಿಗಳು ತಲುಪುತ್ತವೆ. ಟಿವಿ, ಕಂಪ್ಯೂಟರ್, ಮೊಬೈಲ್ ಬಂದ ಮೇಲೆ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಆದರೆ ಪತ್ರಿಕೆಗಳ ಮಹತ್ವ ಯಾವತ್ತೂ ಕಡಿಮೆಯಾಗುವುದಿಲ್ಲ. ಪತ್ರಿಕೆಗಳು ಮನರಂಜನೆಗಾಗಿ, ವಿಷಯ ಸಂಗ್ರಹಣೆಗಾಗಿ ಅಲ್ಲ. ಜೀವನ ನಿರೂಪಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಜ್ಞಾನಾರ್ಜನೆಗಾಗಿ ಪತ್ರಿಕೆಗಳನ್ನು ಓದಬೇಕು. ಯುವ ಪೀಳಿಗೆಯನ್ನು ಪತ್ರಿಕೆ ಓದುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದ್ದರು. ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಲು, ಜನರಲ್ಲಿ ಕಿಚ್ಚನ್ನು ಹಚ್ಚಲು ಪತ್ರಿಕೆಗಳು ಕಾರಣವಾದವು. 1841ರಲ್ಲಿ ಕರ್ನಾಟಕಕ್ಕೆ ಮುದ್ರಣ ಯಂತ್ರ ಬಂತು. ಬಾಷಲ್ ಮಿಷನ್‌ನವರು ಮಂಗಳೂರು ಸಮಾಚಾರ ಎಂಬ ಪತ್ರಿಕೆಯನ್ನು 1843ರ ಜುಲೈ1ರಂದು ಆರಂಭಿಸಿದರು ಎಂದು ನೆನಪಿಸಿಕೊಂಡರು.

ಹರ್ಡೇಕರ್ ಮಂಜಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮೇಯರ್ ಎಸ್.ಟಿ.ವೀರೇಶ್, ‘ಪತ್ರಕರ್ತರಿಗೆ ಸಂಕಷ್ಟದಲ್ಲಿ ಸಹಾಯವಾಗಲು ಮಹಾನಗರ ಪಾಲಿಕೆಯಿಂದ ₹ 10 ಲಕ್ಷ ನಿಧಿಯನ್ನು ಬಜೆಟ್‍ನಲ್ಲಿ ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳವನ್ನು ನೀಡಿದರೆ ಪತ್ರಿಕಾ ಭವನವನ್ನು ಕಾರ್ಯ ರೂಪಕ್ಕೆ ತರಲಾಗುವುದು. ನಿರ್ಮಾಣಕ್ಕೆ ಸಹಾಯ ನೀಡಲಾಗುವುದು’ ಎಂದು
ತಿಳಿಸಿದರು.

ಸಂಘದ ಅಧ್ಯಕ್ಷ ವೀರಪ್ಪ ಎಂ.ಭಾವಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಬ್ಲಿಕ್ ಟಿವಿ ವರದಿಗಾರ ಪುನೀತ ಅಪ್ತಿ, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ಇ.ಎಂ.ಮಂಜುನಾಥ, ಖಜಾಂಚಿ ಮಂಜಪ್ಪ ಮಾಗನೂರು, ಎಚ್.ಎಂ.ಪಿ. ಕುಮಾರ, ಎಚ್.ಬಿ. ಮಂಜುನಾಥ, ಬಾ.ಮ. ಬಸವರಾಜಯ್ಯ, ವಿವೇಕಾನಂದ ಬದ್ದಿ, ಸತೀಶ ಮಡಿವಾಳರ, ಜಿ.ಎಸ್. ವೀರೇಶ, ವಿ.ಬಸವರಾಜಯ್ಯ, ಸತೀಶ, ವಿ.ಅನಿಲ್ ಕುಮಾರ, ತಿಪ್ಪೇಸ್ವಾಮಿ, ಅಣ್ಣೇಶ, ಚನ್ನವೀರಯ್ಯ ಚನ್ನಬಸವ ಶೀಲವಂತ್, ವಿಜಯಕುಮಾರ ಜೈನ್, ವಾರ್ತಾ ಇಲಾಖೆಯ ಬಿ.ಎಸ್. ಬಸವರಾಜ, ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.