ADVERTISEMENT

ಯಡಿಯೂರಪ್ಪ ವಿರುದ್ಧ ದೂರು ನೀಡಿಲ್ಲ; ನಾನು ಕ್ಯಾಪ್ಟನ್‌ ಅಲ್ಲ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:06 IST
Last Updated 18 ಜನವರಿ 2021, 1:06 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ಹೊನ್ನಾಳಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ನಾನು ದೆಹಲಿ ವರಿಷ್ಠರಿಗೆ ದೂರು ನೀಡಿಲ್ಲ. ನನ್ನ ಬಳಿ ಯಾವ ಸಿ.ಡಿ ಕೂಡ ಇಲ್ಲ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯಿಸಿದರು.

‘ಎರಡು ಮೂರು ದಿನಗಳ ಹಿಂದೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಪ್ರಭಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ, ಹಾಗೂ ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡುವಲ್ಲಿ ಆದ ಅನ್ಯಾಯದ ಬಗ್ಗೆ ದೂರು ನೀಡಿದ್ದೇನೆ. ಆ ಭಾಗಗಳಿಗೆ ಸಾಮಾಜಿಕ ಅಸಮತೋಲನ ಉಂಟಾಗಿದ್ದು, ಅದನ್ನು ಸರಿಪಡಿಸುವಂತೆ ಹೇಳಿದ್ದೇನೆ ಹೊರತು ಯಡಿಯೂರಪ್ಪ ಅವರ ಮೇಲೆ ದೂರು ನೀಡಲು ಹೋಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಿ.ಎಂ. ವಿರುದ್ಧ ದೂರು ನೀಡಿದ್ದರೆ ಬಾಯಲ್ಲಿ ಹುಳ ಬೀಳಲಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ನಾನು ಮಾತನಾಡಿದ್ದರೆ, ನನ್ನ ಬಾಯಲ್ಲಿ ಹುಳ ಬೀಳಲಿ’ ಎಂದು ರೇಣುಕಾಚಾರ್ಯ ಹೇಳಿದರು.

ADVERTISEMENT

‘ನಾನು ಎಲ್ಲಾ ಶಾಸಕರೊಂದಿಗೆ ಸ್ನೇಹದಿಂದ ಇದ್ದೇನೆ. ನಾನು ಕ್ಯಾಪ್ಟನ್ ಅಲ್ಲ, ನಾಯಕನೂ ಅಲ್ಲ, ರೆಬೆಲ್ ಅಲ್ಲವೇ ಅಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೊಮ್ಮೆ ದೆಹಲಿಗೆ ಹೋಗಬೇಕಾದದ್ದು ಅನಿವಾರ್ಯ. ಈ ಬಗ್ಗೆ ಶಾಸಕರ ಸಭೆ ಮಾಡಬೇಕೋ ಬೇಡವೂ ಎಂಬುದನ್ನು ತೀರ್ಮಾನಿ ಸಲಾಗುವುದು. ಒಂದು ವೇಳೆ ಸಭೆ ಮಾಡಬೇಕು ಎಂದಾದರೆ ಅದರ ದಿನಾಂಕ ನಿಗದಿಪಡಿಸಲಾಗುವುದು ಎಂದರು.

‘ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ, ಆಗಿರುವ ವ್ಯತ್ಯಾಸಗಳನ್ನು ಸರಿ ಪಡಿಸುವಂತೆ ಮನವಿ ಮಾಡುತ್ತೇವೆ. ಸರ್ಕಾರವು ಬೆಂಗಳೂರು,ಬೆಳಗಾವಿಗೆ ಮಾತ್ರ ಸೀಮಿತ ವಾಗಬಾರದು. ಎರಡು ವರ್ಷ ಸಚಿವರಾಗಿರುವವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡುವೆ’ ಎಂದೂ ಅವರು ತಿಳಿಸಿದರು.

‘ರಾಜ್ಯದಲ್ಲಿ ಒಬ್ಬ ವ್ಯಕ್ತಿಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಮೋದಿಯವರ ವರ್ಚಸ್ಸು, ನಮ್ಮ ನಾಯಕರ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಯಾರು ರಾಜೀನಾಮೆ ಕೊಟ್ಟಿದ್ದಾರೋ ಅವರೇ ತಮ್ಮಿಂದ ಪಕ್ಷ ಅಧಿಕಾರಕ್ಕೆ ಬಂದಿದೆಯೇ ಎಂದು ಹೇಳಲಿ’ ಎಂದರು.

‘ನನಗೆ ಸಚಿವ ಸ್ಥಾನ ನೀಡಿ ಎಂದು ಎಲ್ಲಿಯೂ ಕೇಳಿಲ್ಲ. ಮುಂದೆಯೂ ಕೇಳುವುದಿಲ್ಲ. ಹಿರಿಯ ಶಾಸಕರಿಗೆ ನೋವುಂಟಾಗಿದ್ದು ಅದನ್ನು ಸರಿಪಡಿಸುವಂತೆ ನಾಲ್ಕು ಗೋಡೆಗಳ ಮಧ್ಯೆ, ಪಕ್ಷದ ಇತಿಮಿತಿಯೊಳಗೆ ಚರ್ಚೆ ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ನನ್ನ ಬಳಿ ಯಾವುದೇ ಸಿ ಡಿ ಇಲ್ಲ. ಇದೆಲ್ಲ ಸುಳ್ಳು. ಯಡಿಯೂರಪ್ಪನವರು ಸಮರ್ಥರಾಗಿದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ಕಟೀಲ್ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಈ ಚರ್ಚೆ ಅಪ್ರಸ್ತುತ’ ಎಂದು ಹೇಳಿದರು.

ರಮೇಶ್ ಜಾರಕಿಹೊಳಿಗೆ ಟಾಂಗ್: ‘ನನ್ನ ಆತ್ಮೀಯ ಸ್ನೇಹಿತರಾದ ರಮೇಶ್ ಜಾರಕಿಹೊಳಿಯವರು ಯೋಗೇಶ್ವರ ಅವರ ಕುರಿತು ₹ 9 ಕೋಟಿ ಖರ್ಚು ಮಾಡಿದ್ದಾರೆ, ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ, ಎಂ.ಟಿ.ಬಿ ನಾಗರಾಜ್ ಅವರಿಂದ ಸಾಲ ಪಡೆದಿದ್ದಾರೆ, ಮನೆ ಅಡ ಇಟ್ಟಿದ್ದಾರೆ ಎಂದೆಲ್ಲ ಹೇಳಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಪತ್ನಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಅಭ್ಯರ್ಥಿಯನ್ನು ಹಿಂದಕ್ಕೆ ತೆಗೆಸಿದರು. ಯಾವ ತಾಲ್ಲೂಕಿನಲ್ಲಿ ಪಕ್ಷ ನೆಲ ಕಚ್ಚಿದೆಯೋ ಅವರ ಬಗ್ಗೆ ಏಕೆ ಮಾತನಾಡುತ್ತಾರೋ ನನಗೆ ಗೊತ್ತಿಲ್ಲ’ ಎಂದು ರೇಣುಕಾಚಾರ್ಯ ಖಾರವಾಗಿ ಹೇಳಿದರು.

‘ರಮೇಶಣ್ಣನಿಗೆ ಬಯಸಿದ ಖಾತೆ ಸಿಕ್ಕಿದೆ. ಇದೆಲ್ಲ ನಿನಗೇಕಣ್ಣ? ಒಬ್ಬ ವ್ಯಕ್ತಿಯನ್ನು ವೈಭವೀಕರಿಸುವುದು ಬೇಡ. ರಮೇಶ್ ಜಾರಕಿಹೊಳಿಯವರು ಹೇಳಿದ್ದೆಲ್ಲ ಸುಳ್ಳು’ ಎಂದರು. ‌

‘ಯೋಗೇಶ್ವರ್ ಅವರು ಮನೆಯನ್ನೂ ಅಡ ಇಟ್ಟಿಲ್ಲ, ಏನೂ ಇಲ್ಲ. ಈ ಬಗ್ಗೆ ನಮ್ಮ ಸ್ನೇಹಿತರೂ ನನ್ನ ಬಳಿ ಹೇಳಿದ್ದಾರೆ. ಆದರೆ ಇದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅಷ್ಟೆ. ಅವ್ಯವಹಾರ ಮಾಡಿ, ಜನರಿಗೆ ಮೋಸ ಮಾಡಿದ ಆ ವ್ಯಕ್ತಿಯ ಬಗ್ಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ವರಿಷ್ಠರಿಗೆ ಏನು ತಿಳಿಸಬೇಕೋ ಅದನ್ನು ತಿಳಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.