ADVERTISEMENT

ಸ್ವಾತಂತ್ರ್ಯ ಹೋರಾಟದ ನೆನಪು ಈ ಸ್ಮಾರಕ

‘ಕ್ವಿಟ್‌ ಇಂಡಿಯಾ’ ಚಳವಳಿಯಲ್ಲಿ ಹುತಾತ್ಮರಾದ 6 ಜನ ಹೋರಾಟಗಾರರು

ಚಂದ್ರಶೇಖರ ಆರ್‌.
Published 15 ಆಗಸ್ಟ್ 2020, 5:11 IST
Last Updated 15 ಆಗಸ್ಟ್ 2020, 5:11 IST
ದಾವಣಗೆರೆಯ ಮಹಾನಗರ ಪಾಲಿಕೆ ಎದುರು ಇರುವ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮಾರಕ
ದಾವಣಗೆರೆಯ ಮಹಾನಗರ ಪಾಲಿಕೆ ಎದುರು ಇರುವ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮಾರಕ   

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆ ಎದುರಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಯಾವುದು ಎಂದರೆ ಬಹುತೇಕರಿಗೆ ತಿಳಿದಿಲ್ಲ. ‘ಕ್ವಿಟ್‌ ಇಂಡಿಯಾ ಚಳವಳಿ’ಯಲ್ಲಿ ಹುತಾತ್ಮರಾದ 6 ಜನ ಹೋರಾಟಗಾರರ ನೆನಪಿಗಾಗಿ ಈ ಸ್ಮಾರಕ ನಿರ್ಮಿಸಲಾಗಿದೆ.

ದೂರದಿಂದ ನೋಡಿದರೆ ರಾಷ್ಟ್ರಲಾಂಛನವಿರಬೇಕು ಎಂದು ಸುಮ್ಮನಾದರೆ ಇದರೆ ಮಹತ್ವದ ಅರಿವು ಆಗದು. ಹತ್ತಿರ ಹೋಗಿ ನೋಡಿದರೆ ಆ ಲಾಂಛನದ ಕೆಳಗೆ ಹುತಾತ್ಮರಾದ ಹೋರಾಟಗಾರರ ಹೆಸರು ಕೆತ್ತಲಾಗಿದೆ. ಇದು ಬಿಟ್ಟರೆ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಜಿಲ್ಲೆಯಲ್ಲಿರುವ ಇಂತಹದೊಂದು ಸ್ವಾರಕವನ್ನು ಅಭಿವೃದ್ಧಿಪಡಿಸುವ ಯೋಚನೆ ಯಾರೂ ಮಾಡಿಲ್ಲ ಎಂಬುದು ಸ್ವಾತಂತ್ರ್ಯ ಹೋರಾಟಗಾರರ ಕೊರಗು.

ಹೋರಾಟದ ಕಿಚ್ಚು: 1942ರ ಆಗಸ್ಟ್‌ನಲ್ಲಿ ‘ಕ್ವಿಟ್‌ ಇಂಡಿಯಾ ಚಳವಳಿ’ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗಸ್ಟ್‌ 9ರಂದು ದಾವಣಗೆರೆಯಲ್ಲೂ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ದಂಗೆ ಎದ್ದು, ರೈಲು ಹಳಿ ಕೀಳಲು ಮುಂದಾಗಿದ್ದರು.ಹೋರಾಟಗಾರರ ಮೇಲೆ ಗೋಲಿಬಾರ್‌ ನಡೆಯಿತು. ನೂರಾರು ಜನರಿಗೆ ಗಾಯಗಳಾದವು. ಹತ್ತು ಜನರಿಗೆ ತೀವ್ರ ಗಾಯಗಳಾದವು. ಮಾಗಾನಹಳ್ಳಿ ಹನುಮಂತಪ್ಪ ಸ್ಥಳದಲ್ಲೇ ಹುತಾತ್ಮರಾದರು.ಹಳ್ಳೂರ ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ಲಿಂಗಪ್ಪಆಸ್ಪತ್ರೆಯಲ್ಲಿ ಮೃತಪಟ್ಟರು.

ADVERTISEMENT

ಗೋಲಿಬಾರ್‌ನಲ್ಲಿ ಜಿ.ಎಂ. ಕಲ್ಲಪ್ಪ, ಅಂದನೂರು, ಕೇದಾರಪ್ಪ ಹಾಗೂ ಸಿದ್ದಪ್ಪ ಕರೆಶಿವಪ್ಳರ ಅವರಿಗೆ ಗುಂಡೇಟುಗಳು ಬಿದ್ದಿದ್ದವು. ಆದರೆ ಇವರ ಹೋರಾಟದ ಕಿಚ್ಚಿಗೆ ಗುಂಡೇಟುಗಳು ಮಣಿದವು. ಅವರೆಲ್ಲರೂ ಬದುಕುಳಿದರು.

‘ಚಳವಳಿಯಲ್ಲಿ ಪಾಲ್ಗೊಂಡ ಕೆಲವರು ಜೈಲು ಸೇರಿದರು. ಹಲವರು ಭೂಗತರಾದರು. ಹೋರಾಟದಲ್ಲಿ ಭಾಗಿಯಾಗಿ ರೈಲು ಕಂಬಿ ಕೀಳಲು ಹೋಗಿದ್ದೆ. ಜೈಲಿಗೂ ಕಳುಹಿಸಿದ್ದರು’ ಎಂದು ನೆನಪಿಸಿಕೊಂಡರು ಹಿರಿಯ ಸ್ವಾತಂತ್ರ್ಯಹೋರಾಟಗಾರ ಬಿ. ಮರುಳಸಿದ್ದಪ್ಪ.

‘ಬಳ್ಳಾರಿ ಸಿದ್ದಮ್ಮ, ಉಳ್ಳೇರ ನಾಗಪ್ಪ ಜೊತೆ ದಾವಣಗೆರೆಯ ಸುತ್ತ ಪ್ರಭಾತ್‌ಫೇರಿ ಮಾಡಿದ್ದೆವು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಇಲ್ಲಿನ ಜನರಲ್ಲೂ ಬಿತ್ತಿದ್ದೆವು. ಪರಕೀಯರ ಆಡಳಿತ ಬೇಡ. ನಮ್ಮವರ ಆಡಳಿತ ಬೇಕು ಎಂದು ಹೋರಾಟ ಮಾಡಿದ್ದೆವು. ಆದರೆ ಹೋರಾಟದ ಬಗ್ಗೆ ಇಂದಿನವರಿಗೆ ತಿಳಿದೇ ಇಲ್ಲ’ ಎಂದು ಅವರು ಬೇಸರಿಸಿದರು.

‘ಬಹುತೇಕರಿಗೆ ಪಾಲಿಕೆಯ ಬಳಿ ಇರುವ ಸ್ಮಾರಕದ ಬಗ್ಗೆ ತಿಳಿದಿಲ್ಲ. ಸ್ವಾತಂತ್ರ್ಯ ಹೋರಾಟಗಾರರನ್ನು ಯಾರೂ ಗುರುತಿಸುತ್ತಿಲ್ಲ. ಸೌಲಭ್ಯವೂ ಇಲ್ಲ. ಜನರು ಹೋರಾಟಗಾರರನ್ನು ಗುರುತಿಸುವಂತಾಗಬೇಕು. ಮುಂದಿನ ಪೀಳಿಗೆಗೆ ಅದರ ನೆನಪು ಇರುವಂತಹ ಕೆಲಸಗಳಾಗಬೇಕು’ ಎಂದು ಅವರು ಮಾತು ಸೇರಿಸಿದರು.

‘ಕ್ಷಿಟ್ ಇಂಡಿಯಾ ಚಳವಳಿ ಸಮಯದಲ್ಲಿ ಮಾಜಿಸ್ಟ್ರೇಟ್‌ರನ್ನು ತಡೆದು ಪ್ರತಿಭಟಿಸಿದ್ದೆವು. ಪೊಲೀಸರು ನಮ್ಮನ್ನು ಚಿತ್ರದುರ್ಗದ ಜೈಲಿಗೆ ಹಾಕಿದರು. ಅಲ್ಲಿ 10 ದಿನ ಇದ್ದೆವು. ಬಳಿಕ ಬೆಂಗಳೂರಿನ ಸೆಂಟ್ರಲ್‌ ಜೈಲಿಗೆ ಹಾಕಿದರು. ಅಲ್ಲಿ 15 ದಿನ ಕಳೆದ ಮೇಲೆ ನಮ್ಮನ್ನು ಬಿಟ್ಟರು. ಮೈಸೂರು ದಿವಾನರಾಗಿದ್ದ ಆರ್ಕಾಟ್‌ ರಾಮಸ್ವಾಮಿ ಮುದಲಿಯಾರ್‌ ಅವರೇ ಬಂದು ರೈಲಿನ ಟಿಕೆಟ್‌ ಕೊಡಿಸಿ ದಾವಣಗೆರೆಗೆ ಕಳುಹಿಸಿದರು’ ಎಂದು ನೆನ‍ಪಿಸಿಕೊಂಡರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ. ಸಿದ್ದರಾಮಪ್ಪ.

‘ಜಿಲ್ಲೆಯಲ್ಲಿರುವ ಹಲವುಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಆಗಸ್ಟ್‌ 15ರಂದು ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾಸಿದ್ದು ಬಿಟ್ಟರೆ ಅವರಿಗೆ ಯಾವುದೇ ಸೌಲಭ್ಯವೂ ಇಲ್ಲ. ಸ್ಮಾರಕದ ಅಭಿವೃದ್ಧಿ ಆಗಬೇಕು. ಮುಂದಿನ ಪೀಳಿಗೆಗೆ ದಾವಣಗೆರೆಯಲ್ಲೂ ಹೋರಾಟ ನಡೆದಿತ್ತು ಎಂದು ತಿಳಿದರೆ ಸಾಕು’ ಎಂದು ಅವರು
ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.