ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರ ಸ್ಥಾಪನೆಗೆ ಚಿಂತನೆ

ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 6:42 IST
Last Updated 26 ಆಗಸ್ಟ್ 2019, 6:42 IST
ದಾವಣಗೆರೆಯಲ್ಲಿ ತಾಲ್ಲೂಕು ಉಪ್ಪಾರ ಸಂಘ ಆಯೋಜಿಸಿದ್ದ ಉಪ್ಪಾರ ವಿದ್ಯಾರ್ಥಿನಿಲಯದ ನೂತನ ಕೊಠಡಿಗಳ ಉದ್ಘಾಟನೆಯನ್ನು ಪುರುಷೋತ್ತಮಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ತಾಲ್ಲೂಕು ಉಪ್ಪಾರ ಸಂಘ ಆಯೋಜಿಸಿದ್ದ ಉಪ್ಪಾರ ವಿದ್ಯಾರ್ಥಿನಿಲಯದ ನೂತನ ಕೊಠಡಿಗಳ ಉದ್ಘಾಟನೆಯನ್ನು ಪುರುಷೋತ್ತಮಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ವಿದ್ಯಾರ್ಥಿಗಳು ಶಿಕ್ಷಣ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಯನ್ನು ಎದುರಿಸಬೇಕಿದ್ದು, ಯಶಸ್ಸು ಪಡೆಯಬೇಕಾದರೆ ಭಗೀರಥ ಪ್ರಯತ್ನ, ಸಂಕಲ್ಪ ಶಕ್ತಿ ಹಾಗೂ ಗುರಿ ಇಟ್ಟುಕೊಳ್ಳಬೇಕು. ಅವಕಾಶಗಳನ್ನು ಬಳಸಿಕೊಂಡು ಉನ್ನತ ಅಧಿಕಾರಕ್ಕೆ ಏರಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

ದಾವಣಗೆರೆ ತಾಲ್ಲೂಕು ಉಪ್ಪಾರ ಸಂಘದಿಂದ ಉಪ್ಪಾರ ವಿದ್ಯಾರ್ಥಿನಿಲಯದ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಸಾಧನೆ ಮಾಡಬೇಕಾದರೆ ಗುರು ಹಿಂದೆ ಇರಬೇಕು. ಗುರಿ ಮುಂದೆ ಇರಬೇಕು. ಸಾಧನೆ ಮಾಡಿದವರು ಮಾತ್ರ ಸಮಾಜದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಹೇಳಿದರು.

‘ಉಪ್ಪಾರ ಸಮಾಜದ ವಿದ್ಯಾರ್ಥಿಗಳು ಐಎಎಸ್‌, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಉನ್ನತ ಹುದ್ದೆಗಳಿಗೆ ಸೇರಿಸುವ ನಿಟ್ಟಿನಲ್ಲಿ ‍ಸಮಾಜ ಪ್ರೋತ್ಸಾಹ ನೀಡುತ್ತಿದೆ. ₹5 ಲಕ್ಷ ಅನುದಾನದಲ್ಲಿ ಈ ವಿದ್ಯಾರ್ಥಿನಿಲಯದಲ್ಲಿ ಕುಡಿಯುವ ನೀರು, ಗ್ರಂಥಾಲಯ ಆರಂಭಿಸಿದ್ದೇವೆ. ಸಮಾಜದಿಂದ ಬೆಂಗಳೂರಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ ಮಾಡಿ ಅದರಿಂದ ಬರುವ ಆದಾಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ಕೇಂದ್ರ ಆಯೋಜಿಸಲು ಚಿಂತಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಮುಂದುವರೆದ ಸಮಾಜಗಳು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಜೊತೆಗೆ ಎಲ್ಲಾ ಸೌಲಭ್ಯ ನೀಡುವ ಮೂಲಕ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಸಿ ಸಾಧನೆಗೆ ಬೆನ್ನು ತಟ್ಟುವ ಕೆಲಸ ಮಾಡುತ್ತಿವೆ. ಉಪ್ಪಾರ ಸಮಾಜದಲ್ಲೂ ಈ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಪೋಷಕರು ಪ್ರೋತ್ಸಾಹ ನೀಡಬೇಕು. ಇಂದಿನ ದಿನಗಳಲ್ಲಿ ಕೇವಲ ಗಂಡು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಹೆಣ್ಣು ಮಕ್ಕಳಿಗೆ ಸಿಗುತ್ತಿಲ್ಲ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಹೆಚ್ಚಿನ ಅಂಕ ಪಡೆಯುತ್ತಿದ್ದು, ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೂ ಅವಕಾಶ ಕಲ್ಪಿಸೋಣ’ ಎಂದರು.

‘ಉಪ್ಪಾರ ಸಮಾಜದವರು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿರಬಾದರು. ಇದು ಒಳ್ಳೆಯದಲ್ಲ. ನೀವು ಯಾವುದೇ ಪಕ್ಷದಲ್ಲಿ ಇರಲಿ ನೀವು ಬೆಳೆಯುವುದರ ಜೊತೆಗೆ ಸಮಾಜವನ್ನು ಬೆಳೆಸಬೇಕು. ಮುಂದುವರೆದ ಸಮಾಜಗಳು ಯಾವುದೇ ಪಕ್ಷದಲ್ಲಿದ್ದರೂ ಸಮಾಜದ ವಿಷಯಕ್ಕೆ ಬಂದಾಗ ಒಗ್ಗಟ್ಟಾಗುತ್ತಾರೆ. ಅದು ನಮ್ಮಲ್ಲೂ ಆಗಬೇಕು’ ಎಂದು ಕಿವಿಮಾತು ಹೇಳಿದರು.

ನೆರೆ ಸಂತ್ರಸ್ತರಿಗೆ ಸಹಾಯ: ‘ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಮಾಜದಿಂದ ₹1 ಲಕ್ಷ ನೆರವು ನೀಡಿದ್ದು, ದವಸಧಾನ್ಯ, ಬಟ್ಟೆ ಎಲ್ಲವರನ್ನೂ ವಿತರಿಸಿದ್ದೇವೆ. ಇಂತಹ ಮಳೆ ಬರಬಾರದಿತ್ತು. ಆದರೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಸಲಹೆ ನೀಡಿದರು.

ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ: ಕಾರ್ಯಕ್ರಮಕ್ಕೆ ಗೈರಾದ ಜನಪ್ರತಿನಿಧಿಗಳ ವಿರುದ್ಧ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಾಗೂ ರಾಜ್ಯ ಉಪ್ಪಾರ ಸಂಘದ ಗೌರವಾಧ್ಯಕ್ಷ ಎಸ್‌. ಬಸವರಾಜಪ್ಪ ತುರ್ಚಘಟ್ಟ ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ಸಮಾಜದವರೇ ಆದ ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸೇರಿ ಅನೇಕ ನಾಯಕರು ಸಮಾಜವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದು ನೋವಿನ ಸಂಗತಿ. ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಬರಬೇಕು. ಅನುದಾನ ಕೊಡುವುದರ ಜೊತೆಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಹೇಳಬೇಕು. ಸಮಾಜವನ್ನು ಕಡೆಗಣಿಸಬೇಡಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರೇವಣ್ಣ, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಚ್‌. ತಿಪ್ಪಣ್ಣ ತುರ್ಚಘಟ್ಟ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಸ್‌. ಮಂಜುನಾಥ್, ವೈ.ಟಿ. ಗುರುಪ್ರಸಾದ್‌, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.