ADVERTISEMENT

ಕೃಷಿ ಇಲಾಖೆಯಿಂದ ರೈತರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:02 IST
Last Updated 10 ಜೂನ್ 2025, 14:02 IST
ಬಸವಾಪಟ್ಟಣ ಸಮೀಪದ ಗುಡ್ಡದ ಬೆನಕನಹಳ್ಳಿಯಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ತರಬೇತಿ ಅಡಿಯಲ್ಲಿ ಮೆಕ್ಕೆ ಜೋಳದ ಯಾಂತ್ರೀಕೃತ ಬಿತ್ತನೆಗೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಚಾಲನೆ ನೀಡಿದರು
ಬಸವಾಪಟ್ಟಣ ಸಮೀಪದ ಗುಡ್ಡದ ಬೆನಕನಹಳ್ಳಿಯಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ತರಬೇತಿ ಅಡಿಯಲ್ಲಿ ಮೆಕ್ಕೆ ಜೋಳದ ಯಾಂತ್ರೀಕೃತ ಬಿತ್ತನೆಗೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಚಾಲನೆ ನೀಡಿದರು   

ಬಸವಾಪಟ್ಟಣ: ಕೇಂದ್ರ ಸರ್ಕಾರದ ಆಹಾರ ಭದ್ರತಾ ತರಬೇತಿ ಯೋಜನೆ ಅಂಗವಾಗಿ ರೈತರಿಗೆ ಯಾಂತ್ರೀಕೃತ ಬಿತ್ತನೆಯ ಬಗ್ಗೆ ಮಂಗಳವಾರ ಸಮೀಪದ ಗುಡ್ಡದ ಬೆನಕನಹಳ್ಳಿಯಲ್ಲಿ ತರಬೇತಿ ನೀಡಲಾಯಿತು.

ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಬಿ.ಎಲ್‌.ಅವಿನಾಶ್‌ ಮಾತನಾಡಿ, ‘ಈ ಯೋಜನೆಯಡಿ ಗುಡ್ಡದ ಬೆನಕನಹಳ್ಳಿಯ 25 ಹೆಕ್ಟೇರ್‌ ಕೃಷಿಭೂಮಿಯಲ್ಲಿ ಈ ವರ್ಷ ಯಾಂತ್ರೀಕೃತ ಬಿತ್ತನೆ ಮಾಡಲಾಗುವುದು. ಸಮಗ್ರ ಬೆಳೆ ನಿರ್ವಹಣೆ ಬಗ್ಗೆ ರೈತರಿಗೆ ತರಬೇತಿ ನೀಡಿ ವಿಶೇಷ ತಾಂತ್ರಿಕತೆಯ ಅಡಿಯಲ್ಲಿ ಮೆಕ್ಕೆಜೋಳ ಬೆಳೆಯಲು ಮಾರ್ಗದರ್ಶನ ನೀಡಲಾಗುವುದು’ ಎಂದು ತಿಳಿಸಿದರು. 

‘ಮೆಕ್ಕೆಜೋಳದ ಫಸಲು ಭೂಮಿಯ ಒಳ ಭಾಗದ 15 ಸೆಂ.ಮೀ ಆಳದಿಂದ ತನಗೆ ಅಗತ್ಯವಾದ ಪೋಷಕಾಂಶವನ್ನು ಪಡೆಯುತ್ತದೆ. ಅಲ್ಲದೇ ಬೆಳೆ ರೋಗ ನಿರೋಧಕ ಶಕ್ತಿಯನ್ನು ಪಡೆಯುವುದರೊಂದಿಗೆ ಎಕರೆಗೆ 25ರಿಂದ 30 ಕ್ವಿಂಟಲ್‌ ಇಳುವರಿ ನಿರೀಕ್ಷಿಸಲಾಗಿದೆ. ಜೂನ್‌ 15ರ ಒಳಗೆ ಎಲ್ಲ ಕಡೆ ಮೆಕ್ಕೆಜೋಳದ ಬಿತ್ತನೆ ಮಾಡಿದರೆ ಸಸಿಯ ಕಾಂಡ ಪ್ರಬಲವಾಗಿ ಲದ್ದಿ ಹುಳುಗಳ ಬಾಧೆಯನ್ನು ಎದುರಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಇದೇ ಯೋಜನೆ ಅಡಿಯಲ್ಲಿ ನಮ್ಮ ಕೇಂದ್ರ ವ್ಯಾಪ್ತಿಯ ನಿಲೋಗಲ್‌ನಲ್ಲಿ 10 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯನ್ನು ನಾಟಿಪದ್ಧತಿಯ ಮೂಲಕ ಬೆಳೆಯಲು ಸಿದ್ಧತೆ ನಡೆಸಲಾಗಿದೆ. ಪ್ಲಾಸ್ಟಿಕ್‌ ಚೀಲದಲ್ಲಿ ಫಲವತ್ತಾದ ಮಣ್ಣನ್ನು ಭರ್ತಿ ಮಾಡಿ ತೊಗರಿ ಬೀಜಗಳನ್ನು ಹಾಕಿ ನೀರುಣಿಸಬೇಕು. ನಂತರ 12ರಿಂದ 20 ದಿನಗಳ ಒಳಗೆ ತೊಗರಿ ಸಸಿಗಳನ್ನು 60/30 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಹೀಗೆ ಬೆಳೆಸಿದ ತೊಗರಿ ಫಸಲು 30 ಸೆಂ.ಮೀ. ನೆಲದ ಆಳದಿಂದ ತನಗೆ ಅಗತ್ಯವಾದ ಪೋಷಕಾಂಶವನ್ನು ಬಳಸಿಕೊಳ್ಳುತ್ತದೆ. ಈ ಪದ್ಧತಿಯ ಬೆಳೆಯಲ್ಲಿ ಎಕರೆಗೆ 5ರಿಂದ 8 ಕ್ವಿಂಟಲ್‌ ಇಳುವರಿ ಪಡೆಯಬಹುದು’ ಎಂದು ಅವಿನಾಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.