ADVERTISEMENT

ದಾವಣಗೆರೆ: ಅಮೃತ ಸರೋವರಗಳ ರಕ್ಷಣೆಗೆ ‘ಸ್ವಚ್ಛತೆಯ ಪ್ರತಿಜ್ಞೆ’

125 ಅಮೃತ ಸರೋವರಗಳಲ್ಲಿ ತಿರಂಗಾ ಯಾತ್ರೆ* ಹುತಾತ್ಮರ ಶಿಲಾಫಲಕ ಅನಾವರಣ

ಡಿ.ಕೆ.ಬಸವರಾಜು
Published 9 ಆಗಸ್ಟ್ 2023, 7:13 IST
Last Updated 9 ಆಗಸ್ಟ್ 2023, 7:13 IST
ದಾವಣಗೆರೆಯ ಜಿಲ್ಲೆಯ ಗ್ರಾಮವೊಂದರಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಅಭಿವೃದ್ಧಿ ಪಡಿಸಿರುವ ಅಮೃತ ಸರೋವರ.
ದಾವಣಗೆರೆಯ ಜಿಲ್ಲೆಯ ಗ್ರಾಮವೊಂದರಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಅಭಿವೃದ್ಧಿ ಪಡಿಸಿರುವ ಅಮೃತ ಸರೋವರ.   

ದಾವಣಗೆರೆ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ 125 ಹಳ್ಳಿಗಳಲ್ಲಿ ನಿರ್ಮಾಣಗೊಂಡಿರುವ  ಅಮೃತ ಸರೋವರಗಳ ದಡಗಳಲ್ಲಿ ಈ ಬಾರಿಯ ಸ್ವಾತಂತ್ಯ್ಯದ ರಂಗು ಮೈದಳೆಯಲಿದೆ.

76ನೇ ಸ್ವಾತಂತ್ರ್ಯೋತ್ಸವ ದಿವಸವಾದ ಆಗಸ್ಟ್ 15ರಂದು ಕೆರೆಗಳ ದಡಗಳಲ್ಲಿ ತಿರಂಗಗಳು ಹಾರುವುದರ ಜೊತೆಗೆ  ಗ್ರಾಮಗಳಲ್ಲಿ ತಿರಂಗಾ ಯಾತ್ರೆ ಸಂಚರಿಸಲಿದೆ. ಅಮೃತ ಕೆರೆಗಳ ಸುತ್ತಮುತ್ತ ನೀರಿನ ಸ್ವಚ್ಛತೆಯನ್ನು ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಸಮುದಾಯದ ಸದಸ್ಯರಿಂದ ‘ಸ್ವಚ್ಛತೆಯ ಪ್ರತಿಜ್ಞೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಒಂದು ಎಕರೆಗಿಂತ ಹೆಚ್ಚು ವಿಸ್ತೀರ್ಣ ಇರುವ 125 ಕೆರೆಗಳನ್ನು ಪುನಶ್ಚೇತನ ಹಾಗೂ ಅಭಿವೃದ್ಧಿಪಡಿಸಿದ್ದು, ಅಲ್ಲಿ ಹುತಾತ್ಮರ ಶಿಲಾಫಲಕಗಳನ್ನು ನೆಡಲು ತೀರ್ಮಾನಿಸಲಾಗಿದೆ.

ADVERTISEMENT

‘ಕೆರೆಗಳಲ್ಲಿ ನೀರಿನ ಶೇಖರಣೆ ಜೊತೆಗೆ ಅವುಗಳು ಅತಿಕ್ರಮಣ ಮಾಡದಂತೆ ಅವುಗಳನ್ನು ಸಂರಕ್ಷಿಸುವ ಬಗ್ಗೆಯೂ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈಗಾಗಲೇ ಕೆರೆಗಳ ಹೂಳೆತ್ತಿ, ಬಂಡ್ ನಿರ್ಮಿಸಿ ಅವುಗಳ ಸುತ್ತಲು ಗಿಡ ನೆಡಲಾಗಿದೆ. ನಾವು ಆಯ್ಕೆ ಮಾಡಿಕೊಂಡಿರುವ ಹೆಚ್ಚಿನ ಕೆರೆಗಳಲ್ಲಿ ನೀರು ಬಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಮೃತ ಸರೋವರಗಳ ದಡದಲ್ಲಿ ಸ್ಥಳೀಯ ಸ್ವಾತಂತ್ರ್ಯ ಹೋರಾಟರಾರರು, ಅವರ ಕುಟುಂಬದವರು, ಹುತಾತ್ಮರ ಕುಟುಂಬಸ್ಥರು, ಪ್ರಶಸ್ತಿ ಪುರಸ್ಕೃತರಿಂದ ತ್ರಿವರ್ಣ ಧ್ವಜವನ್ನು ನೆರವೇರಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ನಿರ್ದೇಶನ ನೀಡಲಾಗಿದೆ. ನೀರಿನ ಸಂರಕ್ಷಣೆ ಜೊತೆಗೆ, ಬಾವುಟ ಹಾರಿಸುವುದರಿಂದ ದೇಶಕ್ಕೆ ಗೌರವ ಸೂಚಿಸುವ ಉದ್ದೇಶವಿದೆ’ ಎಂದು ಹೇಳಿದರು.

‘ಚುನಾಯಿತ ಪ್ರತಿನಿಧಿಗಳು, ಯುವಕರು ಹಾಗೂ ಕೆರೆ ಬಳಕೆದಾರರ ಸಂಘ (ಯೂಸರ್ಸ್ ಗ್ರೂಪ್‌) ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳ ನೇತೃತ್ವದಲ್ಲಿ ವಿವಿಧ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ ’ ಎಂದು ತಿಳಿಸಿದರು.

ದಾವಣಗೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಮೃತ ಸರೋವರದ ದಡದಲ್ಲಿ ಕಳೆದ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಕಂಡ ದೃಶ್ಯ (ಸಂಗ್ರಹ ಚಿತ್ರ)

ವಿವಿಧ ಕಾರ್ಯಕ್ರಮಗಳು: ‘ಮಕ್ಕಳಿಗೆ ಅಮೃತ ಸರೋವರದ ತಾಣಗಳಲ್ಲಿ ಚಿತ್ರಕಲೆ, ಘೋಷಣೆ ಬರೆಯುವುದು, ರಂಗೋಲಿ, ಭಾಷಣ ಇತ್ಯಾದಿ ಚಟುವಟಿಕೆಯನ್ನು ಕೈಗೊಳ್ಳುವುದರ ಜೊತೆಗೆ ಗ್ರಾಮೀಣ ಕ್ರೀಡೆಗಳಾದ ಖೊ ಖೋ, ಲಗೋರಿ, ಹಗ್ಗ ಜಗ್ಗಾಟ, ಹಗ್ಗ ಜಿಗಿತ (ರೋಪ್ ಜಂಪಿಂಗ್), ಕುಂಟ ಓಟ, ಕುರ್ಚಿ ಓಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ’ ಎಂದು ಹೇಳಿದರು.

ಅಮೃತ ಸರೋವರದ ಸ್ಥಳಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ಅವುಗಳ ಆರೈಕೆ ಮಾಡುವುದು. ’ಮೆರಾ ಅಮೃತ್ ಸರೋವರ್’ ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಕಾರ್ಯಕ್ರಮದ ವಿವರದ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲು ಅವಕಾಶವಿದೆ.

ಆ.15ರಂದು ಜಿಲ್ಲೆಯ 125 ಅಮೃತ ಸರೋವರಗಳಲ್ಲಿ ಎಲ್ಲೆಡೆ ಏಕರೂಪದ ಶಿಲಾಫಲಕ ನಿರ್ಮಿಸಲು ಆಯಾ ಭಾಗದಲ್ಲಿರುವ ವೀರ ಹುತಾತ್ಮರ ಹೆಸರುಗಳನ್ನು ಸಂಗ್ರಹಿಸುವ ಕಾರ್ಯವೂ ನಡೆದಿದೆ.
ಸುರೇಶ್ ಇಟ್ನಾಳ್ ಸಿಇಒ ಜಿಲ್ಲಾ ಪಂಚಾಯಿತಿ

ಹುತಾತ್ಮರ ಶಿಲಾಫಲಕ (ಸ್ಮಾರಕ) ಅನಾವರಣ

‘ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರು ರಕ್ಷಣಾ ಸಿಬ್ಬಂದಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಧಿಕಾರಿಗಳು–ಸಿಬ್ಬಂದಿ ರಾಜ್ಯ ಪೊಲೀಸರು ಸೇರಿದಂತೆ ಪ್ರಾಣ ತ್ಯಾಗ ಮಾಡಿದ ವೀರರ ಹೆಸರನ್ನು ಶಿಲಾಫಲಕದಲ್ಲಿ ಬರೆದು ಅಮೃತ ಸರೋವರಗಳ ದಡದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು ಒಂದು ವೇಳೆ ಸರೋವರ ವ್ಯಾಪ್ತಿಯ ಪಂಚಾಯಿತಿಯಲ್ಲಿ ವೀರರು ಲಭ್ಯವಿಲ್ಲದಿದ್ದರೆ ಸಾಮಾನ್ಯ ಸಮರ್ಪಣಾ ಶಿಲಾಫಲಕ ನಿರ್ಮಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತರು ನಿರ್ದೇಶನ ನೀಡಿದ್ದಾರೆ. ರಾಜ್ಯದಾದ್ಯಂತ ಏಕರೂಪದ ಶಿಲಾನ್ಯಾಸದ ವಿನ್ಯಾಸವನ್ನೂ ಎಲ್ಲ ಜಿಲ್ಲಾ ಪಂಚಾಯಿತಿಗಳಿಗೆ ಕಳುಹಿಸಿದ್ದು ಶಿಲಾಫಲಕದ ವಿನ್ಯಾಸವನ್ನು ಮೂರು ವಿಭಾಗಗಳು ಮಾಡುವಂತೆ ತಿಳಿಸಲಾಗಿದೆ. ಮೊದಲನೇ ಭಾಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಲೋಗೋ ಅದರ ಕೆಳಗಡೆ ಗ್ರಾಮ ಪಂಚಾಯಿತಿ ಹೆಸರು ಇಲ್ಲವೇ ಸ್ಥಳದ ಹೆಸರು ದಿನಾಂಕ ನಮೂದಿಸಲು ಅವಕಾಶವಿದೆ. ಮಾತೃಭೂಮಿಗಾಗಿ ಪ್ರತಿದಿನ ಪ್ರತಿಕ್ಷಣ ಜೀವನದ ಪ್ರತಿ ಕಣವೂ ಬದುಕುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಅರ್ಪಿಸುವ ನಿಜವಾದ ಗೌರವ- ಪ್ರಧಾನ ಮಂತ್ರಿಗಳು ಎಂಬ ಉಕ್ತಿ ಬರೆಸಲು ತಿಳಿಸಲಾಗಿದೆ. ಮೂರನೇ ಭಾಗದಲ್ಲಿ ಸ್ಥಳೀಯ ವೀರರ ಹೆಸರು ಬರೆಸಬೇಕು. ವೀರರು ಲಭ್ಯವಿಲ್ಲದಿದ್ದರೆ  ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು ಎಂಬ ಬರಹ ಬರೆಸಲು ನಿರ್ದೇಶನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.