ADVERTISEMENT

ಪೊಲೀಸ್‍ ಠಾಣೆ ಮೆಟ್ಟಿಲೇರಿದ ಯುಜಿಡಿ ಕಾಮಗಾರಿ ಅವ್ಯವಸ್ಥೆ

ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 14:37 IST
Last Updated 14 ಡಿಸೆಂಬರ್ 2018, 14:37 IST
ಹರಿಹರದ ಮಹಾತ್ಮ ಗಾಂಧಿ ವೃತ್ತದ ರಸ್ತೆಯ ಕಾಮಗಾರಿ ನಡೆಯುತ್ತಿರುವುದು
ಹರಿಹರದ ಮಹಾತ್ಮ ಗಾಂಧಿ ವೃತ್ತದ ರಸ್ತೆಯ ಕಾಮಗಾರಿ ನಡೆಯುತ್ತಿರುವುದು   

ಹರಿಹರ: ಜಲಸಿರಿ ಹಾಗೂ ಯುಜಿಡಿ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ದುರಸ್ತಿ ಮಾಡದೇ, ನಿರ್ಲಕ್ಷ್ಯ ತೋರಿದ ನಗರಸಭೆ, ಕೆಯುಐಡಿಎಫ್‍ಸಿ ಹಾಗೂ ಕೆಎಂಆರ್‍ಪಿ ಅಧಿಕಾರಿಗಳ ವಿರುದ್ಧ ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ ಪೊಲೀಸ್‍ ಠಾಣೆಗೆ ದೂರು ನೀಡುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ನಗರದ ಮೂಲಕ ಹಾದು ಹೋಗಿರುವ ಹೊಸಪೇಟೆ-ಮಂಗಳೂರು ಮತ್ತು ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಕಾಮಗಾರಿಯ ಪೈಪ್‍ಲೈನ್‍ ಅಳವಡಿಕೆಗೆ ಕಾಲುವೆಗಳನ್ನು ತೋಡಿದ್ದಾರೆ. ಕಾಮಗಾರಿ ಮುನ್ನ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಜತೆಗೆ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ರಸ್ತೆಯ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಸಂಚಾರ ಯೋಗ್ಯವಾಗಿದ್ದ ಹೆದ್ದಾರಿಗಳಲ್ಲಿ ರಾತ್ರೋ ರಾತ್ರಿ ಕಾಮಗಾರಿಗಾಗಿ ಹತ್ತಾರು ಅಡಿ ಆಳದ, ಮೂರ್ನಾಲ್ಕು ಅಡಿ ಅಗಲದ ಗುಂಡಿ ತೆಗೆದು ಪೈಪ್ ಅಳವಡಿಸುತ್ತಾರೆ. ನಂತರ ಕಾಲುವೆಗಳನ್ನು ದುರಸ್ತಿ ಮಾಡದೇ ಕೇವಲ ಮಣ್ಣು ತುಂಬಿ ಗುತ್ತಿಗೆದಾರರು ಅಧಿಕಾರಿಗಳು ನಾಪತ್ತೆಯಾಗುತ್ತಾರೆ. ಸದರಿ ರಸ್ತೆಯನ್ನು ಮುಂಚಿನ ಸ್ಥಿತಿಗೆ ಬರುವಂತೆ ಡಾಂಬರೀಕರಣ ಮಾಡದ್ದರಿಂದ ವಾಹನ, ಜನರ ಸಂಚಾರಕ್ಕೆ ತೊಂದರೆಯಾಗುತ್ತದೆ. ಅಪಘಾತಗಳು ನಡೆದು ಪ್ರಾಣ ಹಾನಿಯೂ ಆಗುತ್ತಿರುತ್ತದೆ. ಇಂತಹ ಘಟನೆಗಳು ನಡೆದಾಗ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ ಎಂಬುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ದೂರು.

ADVERTISEMENT

ಲೋಕೋಪಯೋಗಿ ಇಲಾಖೆಯ ದೂರಿನ ಅನ್ವಯ ಸಿಪಿಐ ಗುರುನಾಥ್‍, ವಿಚಾರಣೆ ನಡೆಸಿ, ಕೆಯುಐಡಿಎಫ್‍ಸಿ ಹಾಗೂ ಕೆಎಂಆರ್‍ಪಿ ಅಧಿಕಾರಿಗಳನ್ನು ಠಾಣೆಗೆ ಕರೆಯಿಸಿ ರಸ್ತೆ ದುರಸ್ತಿ ಮಾಡುವಂತೆ ತಾಕೀತು ಮಾಡಿದರು.

ಪೊಲೀಸ್‍ ಠಾಣೆಯಲ್ಲಿ ನಡೆದ ವಿದ್ಯಮಾನದ ನಂತರ ಎಚ್ಚೆತ್ತ ಅಧಿಕಾರಿಗಳುಮೂರು ತಿಂಗಳ ಹಿಂದೆ ನಡೆದ ಕಾಮಗಾರಿಯಿಮದ ಹಾಳಾಗಿದ್ದ ಬೀರೂರು-ಸಮ್ಮಸಗಿ ರಸ್ತೆಯ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.

ರಾಜ್ಯ ಹೆದ್ದಾರಿಯ ಜತೆಗೆ ನಗರದ ಬಹುತೇಕ ಎಲ್ಲಾ ಬಡಾವಣೆಯ ರಸ್ತೆಗಳು ಯುಜಿಡಿ ಹಾಗೂ ಜಲಸಿರಿ ಯೋಜನೆಯಿಂದ ಹಾಳಾಗಿದ್ದು, ಅವುಗಳನ್ನು ಕೂಡ ಅಧಿಕಾರಿಗಳು ದುರಸ್ತಿಗೊಳಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.