ADVERTISEMENT

ಜಗಳೂರು | ಯೂರಿಯಾ‌‌ ರಸಗೊಬ್ಬರ ಕೊರತೆ: ತಹಶೀಲ್ದಾರ್ ಕಚೇರಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:53 IST
Last Updated 29 ಜುಲೈ 2025, 5:53 IST
ಯೂರಿಯಾ ರಸಗೊಬ್ಬರ ಪೂರೈಸಲು ಆಗ್ರಹಿಸಿ ಜಗಳೂರಿನಲ್ಲಿ ಸೋಮವಾರ ರೈತರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ‌ ನಡೆಸಿದರು
ಯೂರಿಯಾ ರಸಗೊಬ್ಬರ ಪೂರೈಸಲು ಆಗ್ರಹಿಸಿ ಜಗಳೂರಿನಲ್ಲಿ ಸೋಮವಾರ ರೈತರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ‌ ನಡೆಸಿದರು   

ಜಗಳೂರು: ಯೂರಿಯಾ ರಸಗೊಬ್ಬರ ಪೂರೈಕೆಗೆ ಆಗ್ರಹಿಸಿ ರೈತರು ಪಟ್ಟಣದಲ್ಲಿ ಸೋಮವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ‌ ನಡೆಸಿದರು.

ಒಂದು ವಾರದಿಂದ ತಾಲೂಕಿನಲ್ಲಿ ಯೂರಿಯಾಗಾಗಿ ರೈತರು ರಸಗೊಬ್ಬರ ಮಾರಾಟದ ಖಾಸಗಿ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ. ಶನಿವಾರ ಸುಮಾರು 200 ಟನ್ ಯೂರಿಯಾ ತಾಲ್ಲೂಕಿಗೆ ಪೂರೈಕೆ ಮಾಡಲಾಗಿತ್ತು. ಆದರೂ ಗೊಬ್ಬರ ಸಿಗದೆ ನೂರಾರು ರೈತರು ಬರಿಗೈಲಿ ಮರಳಿದ್ದರು.

‘ತಾಲ್ಲೂಕಿನಲ್ಲಿ ಉತ್ತಮ ಪ್ರಮಾಣದ ಮಳೆಯಾಗುತ್ತಿದ್ದು, ಸಕಾಲದಲ್ಲಿ ಅಗತ್ಯ ಯೂರಿಯಾ ಸಿಗದ ಕಾರಣ ಮೆಕ್ಕೆಜೋಳ ಬೆಳೆ ಬೆಳವಣಿಗೆ ಕುಂಠಿತವಾಗುತ್ತದೆ. ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿದ್ದಾರೆ. ಕೂಡಲೇ ಎಲ್ಲಾ ರೈತರಿಗೆ ಯೂರಿಯಾ ಪೂರೈಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಹಂತ ಹಂತವಾಗಿ ಯೂರಿಯಾ ಪೂರೈಸಲಾಗುವುದು. ರೈತರು ಅಗತ್ಯಕ್ಕಿಂತ ಹೆಚ್ಚುವರಿಯಾಗಿ ರಸಗೊಬ್ಬರ ಬಳಕೆಮಾಡುತ್ತಿದ್ದಾರೆ. ಮಿತವಾಗಿ ಬಳಸಬೇಕು. ರೈತರು ಸಹಕರಿಸಬೇಕು ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮನವಿ ಮಾಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಇದ್ದರು.

ಕರ್ನಾಟಕ ರಾಜ್ಯ ರೈತ ಸಂಘ (ವಾಸುದೇವ ಮೇಟಿ) ಬಣದ ತಾಲ್ಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ, ಮುಖಂಡರಾದ ಮಲ್ಲೇಶ್, ತಿಪ್ಪೇಸ್ವಾಮಿ, ಲೋಕೇಶ್ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.