ADVERTISEMENT

ತರಕಾರಿ ಉತ್ಪಾದನೆ ಕುಂಠಿತ, ದರವೂ ಇಳಿಕೆ

ಹಾಕಿದ ಬಂಡವಾಳಕ್ಕೆ ಸಿಗದ ಕನಿಷ್ಠ ಕೂಲಿ: ರೈತರು ಕಂಗಾಲು

ಚಂದ್ರಶೇಖರ ಆರ್‌.
Published 11 ಜುಲೈ 2020, 6:00 IST
Last Updated 11 ಜುಲೈ 2020, 6:00 IST
ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ಹಿರೇಕಾಯಿ ಬಳ್ಳಿಗೆ ಔಷಧ ಸಿಂಪಡಿಸುತ್ತಿರುವ ರೈತ ಮಂಜುನಾಥ್‌
ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ಹಿರೇಕಾಯಿ ಬಳ್ಳಿಗೆ ಔಷಧ ಸಿಂಪಡಿಸುತ್ತಿರುವ ರೈತ ಮಂಜುನಾಥ್‌   

ದಾವಣಗೆರೆ: ಕೊರೊನಾ ಸಂಕಷ್ಟದಿಂದ ಕಂಗಾಲಾಗಿದ್ದ ರೈತರಿಗೆ ಬೆಲೆ ಇಳಿಕೆ ಬಿಸಿ ಬರೆ ಎಳೆದಿದೆ.ತರಕಾರಿ ಬೆಳೆಗಳಲ್ಲಿ ಈ ಬಾರಿ ಉತ್ಪಾದನೆಯೂ ಕುಂಠಿತವಾಗಿದೆ. ಈಗ ಬೆಲೆ ಇಳಿಕೆ ಸಂಕಷ್ಟಕ್ಕೆ ದೂಡಿದೆ.

ಲಾಕ್‌ಡೌನ್‌ನಿಂದ ಬೆಳೆ ಮಾರಾಟ ಮಾಡಲು ಆಗದೆ ತೊಂದರೆ ಅನುಭವಿಸಿದ್ದ ರೈತರು ಇದ್ದ ಅಲ್ಪ ಸ್ವಲ್ಪ ಬೆಳೆಗೂ ಉತ್ತಮ ಬೆಲೆ ಸಿಗದೆ ನಷ್ಟ ಅನುಭವಿಸುವಂತಾಗಿದೆ.

ಕೆಲ ತರಕಾರಿಗಳಿಗೆ ಒಂದು ಕೆ.ಜಿಗೆ ₹ 3, ₹ 5, ₹ 6 ಕ್ಕೆ ವ್ಯಾಪಾರಿಗಳು ಖರೀದಿಸು ತ್ತಿದ್ದಾರೆ. ಇದರಿಂದ ಕೆಲ ರೈತರಿಗೆ ಕನಿಷ್ಠ ಖರ್ಚು ಸಹ ಸಿಗದಂತಾಗಿದೆ. ಸಾಂಬಾರು ಸೌತೆ, ಹಿರೇಕಾಯಿ, ಬೆಂಡೇಕಾಯಿ, ಅಲಸಂದೆ, ಬದನೆಕಾಯಿ ಸೇರಿ ಬಹುತೇಕ ಬೆಳೆಗಳಿಗೆ ಬೆಲೆ ಇಲ್ಲ. ಸಾಂಬಾರು ಸೌತೆ ಚೀಲವೊಂದಕ್ಕೆ ₹ 100ಕ್ಕೆ ಖರೀದಿಸುತ್ತಿದ್ದಾರೆ.

ADVERTISEMENT

ನ್ಯಾಮತಿ, ಹೊನ್ನಾಳಿ, ದಾವಣಗೆರೆ, ಜಗಳೂರು ಭಾಗದಲ್ಲಿ ಹೆಚ್ಚು ತರಕಾರಿ ಬೆಳೆಯಲಾಗುತ್ತದೆ. ನ್ಯಾಮತಿತಾಲ್ಲೂಕಿನಲ್ಲೇ ಅತಿ ಹೆಚ್ಚು ರೈತರು ತರಕಾರಿ ಬೆಳೆ ಅವಲಂಬಿಸಿದ್ದಾರೆ. ತಾಲ್ಲೂಕಿನ ಸುರಹೊನ್ನೆ, ಆರುಂಡಿ, ಫಲವನಹಳ್ಳಿ, ಕೋಡಿಕೊಪ್ಪ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತದೆ.

ವಾಹನದ ವ್ಯವಸ್ಥೆ, ಬಿತ್ತನೆ ಬೀಜ, ಕೃಷಿ ಸೇರಿ ಎಕರೆಗೆ ₹ 30 ಸಾವಿರಕ್ಕೂ ಅಧಿಕ ಖರ್ಚು ತಗುಲುತ್ತದೆ. ಒಂದಂಕಿಗೆ ದರ ಇಳಿದಿರುವುದರಿಂದ ಕೂಲಿಯೂ ಹುಟ್ಟದೇ ರೈತರು ಕಂಗಾಲಾಗಿದ್ದಾರೆ.

ಉತ್ಪಾದನೆ ಕುಂಠಿತ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ಪಾದನೆಯೂ ಕುಂಠಿತವಾಗಿದೆ.ಜಿಲ್ಲೆಯಲ್ಲಿ ಈ ಬಾರಿ 8,996 ಹೆಕ್ಟೇರ್‌ನಲ್ಲಿ ತರಕಾರಿ ಬೆಳೆ ಬಿತ್ತನೆಯಾಗಿದೆ. ಇದು ಕಳೆದ ಬಾರಿಗಿಂತ ಕಡಿಮೆ. ಆದರೂ ಬೆಲೆ ಇಲ್ಲ.

ಮದುವೆ, ಸಮಾರಂಭ ಸ್ಥಗಿತ‌ ತಂದ ಸಂಕಷ್ಟ: ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಎಲ್ಲಿಯೂ ಸಭೆ, ಮದುವೆ, ಸಮಾರಂಭಗಳು ನಡೆಯುತ್ತಿಲ್ಲ. ಇದು ತರಕಾರಿಗಳ ಬೆಲೆ ಇಳಿಕೆಗೆ ನೇರ ಕಾರಣವಾಗಿದೆ. ಮದುವೆ, ಸಮಾರಂಭಗಳಿಗೆ ತರಕಾರಿ ಹೆಚ್ಚು ಪೂರೈಕೆಯಾಗುತ್ತಿತ್ತು.ಅಲ್ಲದೇ ಹೋಟೆಲ್‌ಗೆ ಪೂರೈಕೆಯಾಗುತ್ತಿತ್ತು. ಈಗ ಹೋಟೆಲ್‌ಗಳಿಗೆ ಜನರು ಬರದ ಕಾರಣ ತರಕಾರಿ ಖರೀದಿ ಇಲ್ಲ. ದೇವಸ್ಥಾನಗಳಲ್ಲೂ ಊಟದ ವ್ಯವಸ್ಥೆ ನಿಂತಿರುವ ಕಾರಣ ತರಕಾರಿಯನ್ನು ಕೇಳುವವರಿಲ್ಲದಂತಾಗಿದೆ.

ಕೊರೊನಾ ಸಂಕಷ್ಟಕ್ಕೂ ಮೊದಲು ಮಂಗಳೂರು, ಉಡುಪಿ ಸೇರಿ ರಾಜ್ಯದ ಕೆಲ ಜಿಲ್ಲೆಗಳಿಗೆ ಇಲ್ಲಿಂದ ಹೆಚ್ಚು ತರಕಾರಿ ಪೂರೈಕೆಯಾಗುತ್ತಿತ್ತು. ಆದರೆ, ಈಗ ಅಲ್ಲಿನ ವ್ಯಾಪಾರಿಗಳು ಬರುತ್ತಿಲ್ಲ.

‘12 ಎಕರೆಯಲ್ಲಿ ತರಕಾರಿ ಬೆಳೆ ಬೆಳೆದಿದ್ದೆ. ಬೆಲೆಯೇ ಇಲ್ಲ. ಸೌತೆ ₹ 2, ಬದನೆ ₹ 3, ಎಲೆಕೋಸು ₹ 6 ಹೀಗೆ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಎಕರೆಗೆ ₹ 30 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಈಗ ದರ ಇಲ್ಲದ ಕಾರಣ ಕನಿಷ್ಠ ಖರ್ಚಿನ ಹಣವೂ ಬರುತ್ತಿಲ್ಲ. ಬೀಜಕ್ಕಾಗಿ ಸಿಕ್ಕಷ್ಟು ಸಿಗಲಿ ಎಂದು ಮಾರಾಟ ಮಾಡಿದ್ದೇನೆ’ ಎಂದು ಆರುಂಡಿಯ ರೈತ ನಾಗರಾಜ್ ಟಿ.ಎಸ್‌.‌‌ ಬೇಸರದಿಂದಲೇ ಹೇಳಿದರು.

‘ರೈತರಿಂದ ಕಡಿಮೆಗೆ ಖರೀದಿಸುವ ವ್ಯಾಪಾರಿಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ರೈತರ ಶ್ರಮಕ್ಕೆ ಬೆಲೆ ಇಲ್ಲ. ಹೊಲದಿಂದ ಮಾರುಕಟ್ಟೆಗೆ ಸಾಗಿಸಲು ಚೀಲವೊಂದಕ್ಕೆ ₹ 90 ತಗಲುತ್ತದೆ. ಆದರೆ, ₹ 100 ದರ ಇದ್ದರೆ ಏನು ಮಾಡುವುದು’ ಎಂದರು ರೈತ ಮಂಜುನಾಥ್‌ ಯರೇಕಟ್ಟೆ.

‘ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡುತ್ತಿಲ್ಲ. ಕಳೆದ ಬಾರಿಯ ಬೆಳೆನಷ್ಟ ಪರಿಹಾರವೂ ಸಿಕ್ಕಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಬಾರಿಯ ಬೆಳೆನಷ್ಟ ಪರಿಹಾರ ಇನ್ನೂ ಬಂದಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂಬುದು ರೈತರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.