ADVERTISEMENT

ಮೃತಪಟ್ಟವರ ಉಂಗುರ, ವಾಚ್‌ ನೋಡಿ ಭಾವುಕರಾದರು

ವಾರಸುದಾರರ ಕೈಸೇರಿದ ವಸ್ತುಗಳು

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:50 IST
Last Updated 21 ಜನವರಿ 2021, 2:50 IST
ಧಾರವಾಡದಲ್ಲಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ವಸ್ತುಗಳನ್ನು ಅವರ ಕುಟುಂಬದ ಸದಸ್ಯರಿಗೆ ದಾನಮ್ಮ ದೇವಿ ದೇವಸ್ಥಾನದ ಬಳಿ ಒಪ್ಪಿಸಲಾಯಿತು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಧಾರವಾಡದಲ್ಲಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ವಸ್ತುಗಳನ್ನು ಅವರ ಕುಟುಂಬದ ಸದಸ್ಯರಿಗೆ ದಾನಮ್ಮ ದೇವಿ ದೇವಸ್ಥಾನದ ಬಳಿ ಒಪ್ಪಿಸಲಾಯಿತು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಧಾರವಾಡದ ಇಟ್ಟಿಗಟ್ಟಿಯ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ದಾವಣಗೆರೆಯ ಮಹಿಳೆಯರ ಒಡವೆ ಸೇರಿ ಹಲವು ವಸ್ತುಗಳನ್ನು ಅವರ ವಾರಸುದಾರರಿಗೆ ತಲುಪಿಸಲಾಯಿತು.

ಅಪಘಾತದಲ್ಲಿ ಗಾಯಗೊಂಡಿದ್ದ ಆಶಾ ಜಗದೀಶ್ ಬೇತೂರ್ ಅವರ ಸಂಬಂಧಿಕರಾದ ವಿಜಯ್‌ಕುಮಾರ್ ದೇವರಮನಿ ಅವರು ವ್ಯಾನಿಟಿ ಬ್ಯಾಗ್‌ಗಳು ಹಾಗೂ ಆಭರಣಗಳನ್ನು ಹಾಗೂ ಹುಬ್ಬಳ್ಳಿಯ ಬಿಳಿಚೋಡು ಉಮೇಶ್ ಅವರು ಕಾರಿನಲ್ಲಿ ಬಟ್ಟೆ ಹಾಗೂ ಬ್ಯಾಗ್‌ಗಳನ್ನು ತೆಗೆದುಕೊಂಡು ಬಂದರು.

ದಾವಣಗೆರೆಯ ದೊಡ್ಡಪೇಟೆಯ ಬಸವೇಶ್ವರ ಮತ್ತು ದಾನ‌ಮ್ಮ ದೇವಾಲಯದಲ್ಲಿ ಪೊಲೀಸರು ಹಾಗೂ ದೇವಾಲಯದ ಟ್ರಸ್ಟಿಗಳ ಸಮ್ಮುಖದಲ್ಲಿ ಮೃತರ ಮಕ್ಕಳು, ಪತಿಯಂದಿರು ಹಾಗೂ ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟವರ‌ ವಾಚ್‌ಗಳು, ಬಂಗಾರದ ಆಭರಣಗಳು, ಉಂಗುರ, ವ್ಯಾನಿಟಿ ಬ್ಯಾಗ್‌ಗಳು, ಮೊಬೈಲ್‌ಗಳನ್ನು ನೋಡಿ ಭಾವುಕರಾದರು. ಕೆಲ ಚೈನುಗಳು ಅರ್ಧಕ್ಕೆ ಕಟ್ ಆಗಿದ್ದವು. ಕಿವಿಯೋಲೆಗಳು ಒಂದು ಇದ್ದರೆ ಮತ್ತೊಂದು ಇಲ್ಲದಂತೆ ಆಗಿದ್ದವು.ಬ್ಯಾಗ್‌ನೊಳಗೆ ಇಟ್ಟಿದ ಕೆಲ ಮೊಬೈಲ್‌ಗಳು ಸುರಕ್ಷಿತವಾಗಿದ್ದವು. ಕೆಲವು ಜಜ್ಜಿ ಹೋಗಿದ್ದವು.

ADVERTISEMENT

ಕೆಟಿಜೆ ನಗರ ಠಾಣೆಯ ಎಸ್‌ಐ ವೀರೇಶ್ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿಫೋಟೊ ಜೊತೆಗೆ ತೆಗೆದುಕೊಂಡ ಹೋದ ವಸ್ತುಗಳನ್ನು ದಾಖಲಿಸಿಕೊಂಡರು.

‘ಧಾರವಾಡದಲ್ಲೇ ನೆಲೆಸಿರುವ ವಿಜಯ್‌ಕುಮಾರ್ ಅವರ ಮನೆಯಲ್ಲೇ ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದಕ್ಕೂ ಮೊದಲೇ ಅಪಘಾತವಾಗಿತ್ತು. ಅಪಘಾತದಲ್ಲಿ ಗಾಯಗೊಂಡಿರುವ ಆಶಾ ಜಗದೀಶ್ ಅವರು ವಿಜಯ್‌ಕುಮಾರ್ ದೇವರಮನಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು’ ಎಂದು ಆಶಾ ಅವರ ಮೈದುನ ಬೇತೂರು ರಾಜೇಶ್ ಅವರು ಮಾಹಿತಿ ನೀಡಿದರು.

ವಿಜಯ್‌ಕುಮಾರ್ ಅವರು ಸ್ನೇಹಿತರೊಂದಿಗೆ ಸ್ಥಳಕ್ಕೆ ಹೋದರು. ಅಪಘಾತ ನೋಡಿ ಆಘಾತಗೊಂಡಿದ್ದರು. ಧಾರವಾಡ ಎಸ್‌ಪಿ ಅವರು ಸ್ಥಳದಲ್ಲಿದ್ದು, ಗಾಯಗೊಂಡವರನ್ನು ಮೊದಲು ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದ ಮೇಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರು ಇಲ್ಲಿಗೆ ಬರುವುದು ಕಷ್ಟ ಎಂದು ತಿಳಿದು ನಾನೇ ದಾವಣಗೆರೆಗೆ ತೆಗೆದುಕೊಂಡು ಬಂದೆ.ಅಲ್ಲಿ ಇದ್ದ ವಸ್ತುಗಳಲ್ಲಿ ರಾಜೇಶ್ವರಿ ಬಂದಮ್ಮನವರ್‌ ಅವರ ಮಾಂಗಲ್ಯ ಸರವನ್ನು ಅಪಘಾತವಾದ ದಿನವೇ ಕೊಟ್ಟು ಕಳುಹಿಸಲಾಗಿತ್ತು. ಆದರೆ ವಾಪಸ್ ತರಿಸಿ ಪೊಲೀಸರ ಸಮ್ಮುಖದಲ್ಲಿ ನೀಡಲಾಯಿತು’ ಎಂದು ವಿಜಯ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.