ADVERTISEMENT

ಜಾಗೃತಿಗಾಗಿ ‘ಮಕ್ಕಳೊಂದಿಗೆ ನಾವು’

ಅರಿವು ಮೂಡಿಸಲು ಜಾತ್ರೆಗಳಿಗೆ ತೆರಳಲಿರುವ ಅಧಿಕಾರಿಗಳು

ಬಾಲಕೃಷ್ಣ ಪಿ.ಎಚ್‌
Published 8 ಫೆಬ್ರುವರಿ 2020, 19:30 IST
Last Updated 8 ಫೆಬ್ರುವರಿ 2020, 19:30 IST
‘ಗುಡ್‌ಟಚ್‌, ಬ್ಯಾಡ್‌ಟಚ್‌’ ಫಲಕ
‘ಗುಡ್‌ಟಚ್‌, ಬ್ಯಾಡ್‌ಟಚ್‌’ ಫಲಕ   

ದಾವಣಗೆರೆ: ಮಕ್ಕಳ ದೌರ್ಜನ್ಯ ಮುಕ್ತ ಜಿಲ್ಲೆಯನ್ನಾಗಿ, ಅನಕ್ಷರಸ್ಥ ಮುಕ್ತ ಜಿಲ್ಲೆ, ಮಕ್ಕಳು ಎಲ್ಲ ಹಕ್ಕುಗಳನ್ನು ಪಡೆದ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಅದರ ಆರಂಭದ ಹಂತವಾಗಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಜಾತ್ರೆಗಳಿಗೆ, ಜನಸಂದಣಿ ಇರುವ ಪ್ರದೇಶಗಳಿಗೆ ಹೋಗಲಿದ್ದಾರೆ. ಅಲ್ಲೇ ಫಲಕಗಳನ್ನು ಹಾಕಿ ಅರಿವು ಮೂಡಿಸಲಿದ್ದಾರೆ.

ಫೆ.8 ಮತ್ತು 9ರಂದು ರಾಜನಹಳ್ಳಿಯಲ್ಲು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಈ ಜಾಗೃತಿ ಕಾರ್ಯಕ್ರಮ ಮೊದಲ ಬಾರಿಗೆ ಆರಂಭಗೊಳ್ಳಲಿದೆ. ಮಾರ್ಚ್‌ ಮೊದಲ ವಾರದಲ್ಲಿ ನಡೆಯುವ ದುರ್ಗಾಂಬಿಕಾ ಜಾತ್ರೆಯಲ್ಲಿ ಇದು ಮುಂದುವರಿಯಲಿದೆ. ಇಷ್ಟಕ್ಕೆ ಸೀಮಿತಗೊಳ್ಳದೆ. ಜಿಲ್ಲೆಯಲ್ಲಿ ಇರುವ 84 ಸರ್ಕಾರಿ, ಅರೆಸರ್ಕಾರಿ ಆಸ್ಪತ್ರೆಗಳಲ್ಲಿ, ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ, ಮದುವೆ ಮಂಟಪಗಳು, ಬಸ್‌ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಕೂಡ ಈ ಫಲಕಗಳನ್ನು ಹಾಕಿ ಮಕ್ಕಳ ಜನರನ್ನು ಜಾಗೃತಿಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳೊಂದಿಗೆ ನಾವು ಕಾರ್ಯಕ್ರಮವನ್ನು ನಾವೇ ರೂಪಿಸಿದ್ದೇವೆ. ಅದರ ಮೂಲಕ ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಜಾತ್ರೆಗಳಿಗೆ ಹೋಗಿ ಅರಿವು ಮೂಡಿಸುವುದು ಒಂದು ಆಗಿದೆ. ಪ್ಲಾಸ್ಟಿಕ್‌ ಬ್ಯಾನರ್‌ ಬಳಸುವಂತಿಲ್ಲ, ಬಟ್ಟೆ ಬ್ಯಾನರ್‌ ಬೇಗ ಹರಿದುಹೋಗುತ್ತದೆ. ಹಾಗಾಗಿ ಟಿನ್‌ಪ್ಲೇಟ್‌ಗಳಲ್ಲಿ ಬರೆಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಶೃತಿ ಎಚ್‌.ಎನ್‌. 

ADVERTISEMENT

ಗುಡ್‌ ಟಚ್, ಬ್ಯಾಡ್‌ ಟಚ್‌ ಬಗ್ಗೆ ಮಾಹಿತಿ ನೀಡುವ ‘ಮಕ್ಕಳೇ ಚಿತ್ರ ನೋಡಿ ಅರಿತುಕೊಳ್ಳಿ’, ಪೋಕ್ಸೊ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ,
ದತ್ತು ಪ್ರಕ್ರಿಯೆಗೆ ಒಳಪಡಿಸದೇ ಮಗುವನ್ನು ತೆಗೆದುಕೊಂಡರೆ ಅಥವಾ ಮಾರಾಟ ಮಾಡಿದರೆ ಇರುವ ಶಿಕ್ಷೆಗಳ ಬಗ್ಗೆ ಈ ಫಲಕಗಳು ಬೆಳಕು ಚೆಲ್ಲಲಿವೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ. ಬಸವರಾಜಯ್ಯ, ಬಾಲಭವನ ಅಧೀಕ್ಷಕ ಮಹಾಂತಸ್ವಾಮಿ, ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಎದುರಿಸುವುದು ಹೇಗೆ? ಎಂಬ ಆತ್ಮಸ್ಥೈರ್ಯ ತುಂಬುವ, ಪರೀಕ್ಷೆ  ಕಾರ್ಯಕ್ರಮಗಳನ್ನು ‘ಮಕ್ಕಳೊಂದಿಗೆ ನಾವು’ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದಲ್ಲದೇ ಎಸ್ಸೆಸ್ಸೆಲ್ಸಿ ಹೊರತು ಪಡಿಸಿ ಉಳಿದ ಮಕ್ಕಳಿಗೆ ವಿಶೇಷ ಪಾಲನೆ ಯೋಜನೆ, ಪ್ರಾಯೋಜಕತ್ವ, ಪೋಷಕತ್ವ ಯೋಜನೆಗಳ ಬಗ್ಗೆ, ಮಕ್ಕಳ ಹಕ್ಕುಗಳು, ಅದರ ಲಾಭಗಳು, ಅದನ್ನು ಪಡೆಯುವ ವಿಧಾನಗಳ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮಕ್ಕಳಿಗೆ ಗುಡ್‌ಟಚ್‌, ಬ್ಯಾಡ್‌ಟಚ್‌ ಬಗ್ಗೆ ತಿಳಿಸುವ, ಅದನ್ನು ಹೇಗೆ ವಿರೋಧಿಸಬೇಕು? ಪಾಲಕರು, ಇಲಾಖೆಗೆ ಮಾಹಿತಿ ನೀಡುವುದು ಹೇಗೆ? ಬ್ಯಾಡ್‌ಟಚ್‌ಗೆ ಶಿಕ್ಷೆ ಏನು ಎಂಬುದನ್ನು ತಿಳಿಸುವ ‘ಕೋಮಲಿ’ ಎಂಬ ವಿಡಿಯೊ ಪ್ರದರ್ಶನವನ್ನು 8 ಮತ್ತು 9ನೇ ತರಗತಿಯ ಮಕ್ಕಳಿಗೆ ಏರ್ಪಡಿಸಲಾಗುವುದು ಎಂದು ಶೃತಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 27 ವಿಶೇಷ ಪೊಲೀಸ್‌ ಘಟಕಗಳಿವೆ. ಈ ವಿಶೇಷ ಘಟಕಗಳು ಮಕ್ಕಳಿಗೆ ಹೇಗೆ ನೆರವಾಗಬೇಕು ಎಂಬ ಬಗ್ಗೆ ಫಲಕಗಳನ್ನು ಮಾಡಿ ಈ 27 ಪೊಲೀಸ್‌ ವಿಶೇಷ ಘಟಕಗಳಿರುವ ಠಾಣೆಗಳಲ್ಲಿ ಪ್ರದರ್ಶಿಸಲಾಗುತ್ತದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.