ADVERTISEMENT

ದಾವಣಗೆರೆ: ಉಕ್ರೇನ್‌ನಿಂದ ಬಂದಿಳಿದ ಪ್ರಿಯಾಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 3:53 IST
Last Updated 2 ಮಾರ್ಚ್ 2022, 3:53 IST
ಉಕ್ರೇನ್‌ನಿಂದ ಕುಂದೂರಿಗೆ ಬಂದಿಳಿದ ವೈದ್ಯಕೀಯ ವಿದ್ಯಾರ್ಥಿನಿ ಪ್ರಿಯಾ ಅವರೊಂದಿಗೆ ಉಪವಿಭಾಗಾಧಿಕಾರಿ ಹುಲ್ಮಿನಿ ತಿಮ್ಮಣ್ಣ ಚರ್ಚಿಸಿದರು.
ಉಕ್ರೇನ್‌ನಿಂದ ಕುಂದೂರಿಗೆ ಬಂದಿಳಿದ ವೈದ್ಯಕೀಯ ವಿದ್ಯಾರ್ಥಿನಿ ಪ್ರಿಯಾ ಅವರೊಂದಿಗೆ ಉಪವಿಭಾಗಾಧಿಕಾರಿ ಹುಲ್ಮಿನಿ ತಿಮ್ಮಣ್ಣ ಚರ್ಚಿಸಿದರು.   

ಹೊನ್ನಾಳಿ: ವೈದ್ಯಕೀಯ ವ್ಯಾಸಂಗಕ್ಕೆ ಉಕ್ರೇನ್‌ಗೆ ತೆರಳಿದ್ದ ತಾಲ್ಲೂಕಿನ ಕುಂದೂರು ಗ್ರಾಮದ ಪ್ರಿಯಾ ತಾಯ್ನಾಡಿಗೆ ಮರಳಿದ್ದು, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ ಪ್ರಿಯಾ ಅವರನ್ನು ಸ್ವಾಗತಿಸಿದರು.

ಉಕ್ರೇನ್‌ನಿಂದ ನವದೆಹಲಿಗೆ ಬಂದಿಳಿದ ಪ್ರಿಯಾ, ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಶಿವಮೊಗ್ಗಕ್ಕೆ, ಬಳಿಕ ಕುಂದೂರು ಗ್ರಾಮದ ತಮ್ಮ ನಿವಾಸಕ್ಕೆ ಬಂದಿಳಿದರು. ಗ್ರಾಮಕ್ಕೆ ತೆರಳಿದ ತಿಮ್ಮಣ್ಣ ಅವರು ಪ್ರಿಯಾ ಅವರನ್ನು ಸ್ವಾಗತಿಸಿದರು.

ಅಲ್ಲಿನ ಪರಿಸ್ಥಿತಿಯನ್ನು ಪ್ರಿಯಾ ಆತಂಕದಿಂದಲೇ ಅನಿಸಿಕೆಗಳನ್ನು ಹಂಚಿಕೊಂಡರು‌ ಎಂದು ಹುಲ್ಮನಿ ತಿಮ್ಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಒಂದು ಕಡೆ ನಮ್ಮ ಕಾಲೇಜಿನಲ್ಲಿ ಪಾಠಗಳು ನಡೆಯುತ್ತಿವೆ, ಇನ್ನೊಂದು ಕಡೆ ಬಾಂಬ್ ದಾಳಿ ನಡೆಯುತ್ತಿದೆ. ಆದರೂ ಉಕ್ರೇನ್‌ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸ್ಪಷ್ಟ ನಿರ್ಧಾರಕ್ಕೆ ಬರಲು ಅಲ್ಲಿನ ಸರ್ಕಾರ ವಿಫಲವಾಗಿದ್ದರಿಂದ ಹೊರ ದೇಶಗಳಿಂದ ಶಿಕ್ಷಣಕ್ಕಾಗಿ ಬಂದಿರುವ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುವಂತಾಗಿದೆ ಎಂದರು’ ಎಂದು ತಿಮ್ಮಣ್ಣ ಹೇಳಿದರು

‘ಉಕ್ರೇನ್‌ ಬಿಟ್ಟು ಬನ್ನಿ ಎಂದು ನಮ್ಮ ದೇಶದ ಕಡೆಯಿಂದ ಸಂದೇಶ ನೀಡಿದ್ದಷ್ಟೇ ದೃಢವಾಗಿ ಅಲ್ಲಿನ ಸರ್ಕಾರ ಏನನ್ನು ಹೇಳಲು ಸಾಧ್ಯವಾಗಲಿಲ್ಲ’ ಎಂದು ಅವರು ಹೇಳಿದರು.

‘ಯುದ್ಧದ ವಾತಾವರಣ ಶಾಂತ ಸ್ಥಿತಿಗೆ ಬರುವವರೆಗೂ ಆನ್‍ಲೈನ್‌ನಲ್ಲಿಯೇ ಶಿಕ್ಷಣ ಪಡೆಯಿರಿ ಎಂದು ಪ್ರಿಯಾ ಅವರಿಗೆ ಧೈರ್ಯ ತುಂಬಿದ್ದೇನೆ’ ಎಂದರು.

‘ಪ್ರಿಯಾ ಅವರ ಸಂಬಂಧಿ ಹಾವೇರಿಯ ವಿದ್ಯಾರ್ಥಿಯೊಬ್ಬರು ಉಕ್ರೇನ್‌ನಲ್ಲಿ ಮೃತಪಟ್ಟ ಸುದ್ದಿ ತಿಳಿದು ಅವರು ಆತಂಕದಲ್ಲಿದ್ದರು’ ಎಂದರು.

ಕಂದಾಯ ಇಲಾಖೆಯ ಮಂಜುನಾಥ್ ಇಂಗಳಗೊಂದಿ, ರಮೇಶ್, ಪ್ರಿಯಾ ಅವರ ಮನೆಯವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.