ADVERTISEMENT

ಇರಲಿ ವಿವೇಕಾನಂದರ ಗುರಿ, ಬಸವಣ್ಣನ ವಿವೇಕ

ರಾಷ್ಟ್ರೀಯ ಮತದಾರರ ದಿನ, ಯುವ ದಿನ ಆಚರಣೆ ಉದ್ಘಾಟಿಸಿದ ಡಾ. ಎಂ.ಜಿ. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 14:16 IST
Last Updated 25 ಜನವರಿ 2020, 14:16 IST
ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಉದ್ಘಾಟಿಸಿದರು
ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಉದ್ಘಾಟಿಸಿದರು   

ದಾವಣಗೆರೆ: ಧರ್ಮದ ಅಸಾಮನ್ಯತೆಯನ್ನೂ ಅಸಮಾನತೆಯನ್ನೂ ಗುರುತಿಸಿದವರು ಸ್ವಾಮಿ ವಿವೇಕಾನಂದರು. ಸಮಾನತೆಯನ್ನೂ, ಸಾಮಾನ್ಯತೆಯನ್ನೂ ನೀಡಿದವರು ಬಸವಣ್ಣ. ಗುರಿ ತೋರಿಸದ ವಿವೇಕಾನಂದರನ್ನು ಮತ್ತು ಗುರಿ ಸಾಧಿಸುವ ದಾರಿಗೆ ಇರಬೇಕಾದ ವಿವೇಕ ತೋರಿದ ಬಸವಣ್ಣನನ್ನು ತಿಳಿಯಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

ಎ.ಆರ್‌.ಜಿ. ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು ಎ.ಆರ್‌.ಜಿ. ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಚಾರಸಂಕಿರಣ, ರಾಷ್ಟ್ರೀಯ ಮತದಾರರ ದಿನಾಚರಣೆ, ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರ ಪ್ರತಿನಿಧಿ, ಆದರ್ಶ, ದಾರಿದೀಪ ಆಗಿರುವ ವಿವೇಕಾನಂದರು ಧರ್ಮ ಅಂದರೆ ಪ್ರೀತಿ, ವಿಶ್ವಾಸ, ಘನತೆ, ಗೌರವ ಮುಂತಾದ ಎಲ್ಲ ಉತ್ತಮಗಳು ಒಳಗೊಂಡಿರುವುದು ಎಂದು ತಿಳಿದಿದ್ದರು. ಅಮೆರಿಕದ ಷಿಕಾಗೋದಲ್ಲಿ ತನ್ನ ವಿಚಾರ ಲಹರಿಯ ಮೂಲಕ ಹಿಂದೂ ಧರ್ಮವನ್ನು ಪಸರಿಸಿ ಪ್ರಸಿದ್ಧರಾದ ಬಳಿಕ ಅವರು ಭಾರತಕ್ಕೆ ಬಂದಾಗ ಅವರು ಗುರುತಿಸಿದ್ದು ಅಸಮಾನತೆಯನ್ನು, ಜನರ ಸಂಕಟವನ್ನು, ಹಸಿವನ್ನು ಎಂದು ವಿವರಿಸಿದರು.

ADVERTISEMENT

ಜ್ಞಾನ ಕೆಲವರಿಗಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ತಾನಷ್ಟೇ ಓದಬೇಕು, ಜ್ಞಾನಿಯಾಗಬೇಕು. ಬೇರೆಯವರು ಓದಿದರೆ, ಕೇಳಿದರೆ ಕಿವಿಗೆ ಸೀಸ ಹೊಯ್ಯಬೇಕು ಎಂದೆಲ್ಲ ನಿಯಮ ಇದ್ದ ಸಮಾಜ ಇದು. ನೂರು ವರ್ಷಗಳ ಹಿಂದೆ ಹೋದರೂ ವಿದ್ಯೆ ಎನ್ನುವುದು ಕೆಲವರಿಗಷ್ಟೇ ಸೀಮಿತವಾಗಿತ್ತು. 12ನೇ ಶತಮಾನದಲ್ಲಿಯೇ ಜ್ಞಾನದ ಸಮಾನತೆಯನ್ನು ತಂದು ಕೊಡಲು ಅನುಭವ ಮಂಟಪವನ್ನು ನಿರ್ಮಿಸಿದವರು ಬಸವಣ್ಣ. ಅಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸಣ್ಣ, ಗಂಗಾಂಬಿಕೆ, ನೀಲಾಂಬಿಕೆ ಇದ್ದ ಹಾಗೆಯೇ ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಹರಳಯ್ಯ, ಸಂಕವ್ವೆ ಕೂಡ ಇದ್ದರು ಎಂದು ತಿಳಿಸಿದರು.

ಅನುಭವ ಮಂಟಪಕ್ಕಿಂತಲೂ ಮುಖ್ಯವಾದ ಮಹಾಮನೆ ನಿರ್ಮಿಸಿರುವುದು ಬಸವಣ್ಣನ ಮಹತ್ಸಾಧನೆ. ನಾವು ಒಟ್ಟಿಗೆ ಕೂತು ಓದಬಹುದು. ಆದರೆ ಒಟ್ಟಿಗೆ ಕೂತು ಊಟ ಮಾಡಲಾರರು. ದುರ್ಯೋಧನ ಮತ್ತು ಕರ್ಣ ಒಂದೇ ಸಿಂಹಾಸನದಲ್ಲಿ ಕುಳಿತುಕೊಳ್ಳಬಲ್ಲ ಗೆಳೆಯರಾಗಿದ್ದರೂ ಒಟ್ಟಿಗೆ ಊಟ ಮಾಡುತ್ತಿರಲಿಲ್ಲ. ಕರ್ಣ ಯಾರ ಮಗ ಎಂಬುದು ಗೊತ್ತಾದ ಮೇಲಷ್ಟೇ ಅವರು ಒಟ್ಟಿಗೆ ಊಟ ಮಾಡಿದ್ದನ್ನು ಪಂಪ 10ನೇ ಶತಮಾನದಲ್ಲಿ ಬರೆದಿರುವುದನ್ನು ಕಂಡರೆ ಎಲ್ಲರೂ ಜತೆಗೆ ಕೂತು ಉಣ್ಣಬಲ್ಲ ಮಹಾಮನೆಯ ಮಹತ್ವ ಅರಿವಾಗಬಹುದು ಎಂದು ಹೇಳಿದರು.

ಇಬ್ಬರನ್ನೂ ಅಧ್ಯಯನ ಮಾಡುವ ಮೂಲಕ ಯುವ ಜನರು ಚಿಂತನೆಯ ದಾರಿ ಹಿಡಿಯಬೇಕು ಎಂದು ಸಲಹೆ ನೀಡಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎ.ಜಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ.ಎಸ್‌. ಬಸವರಾಜಪ್ಪ, ಶಿವಾನಂದ ಗುರೂಜಿ, ಡಾ. ಅನಿತಾ ದೊಡ್ಡಗೌಡರ್‌, ಡಾ. ಪ್ರಕಾಶ ಹಲಗೇರಿ ಉಪಸ್ಥಿತರಿದ್ದರು.

ಪ್ರೊ. ಅನಿತಾ ಕುಮಾರಿ ಸ್ವಾಗತಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜೆ.ಕೆ. ಮಲ್ಲಕಾರ್ಜುನಪ್ಪ, ನಾಗವೇಣಿ ಜೆ.ಎಸ್‌. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.