ADVERTISEMENT

‘ಒತ್ತಡಕ್ಕೆ ಮಣಿಯದೇ ಸಾಮಾಜಿಕ ನ್ಯಾಯದಡಿ ಕೆಲಸ ನಿರ್ವಹಿಸಿ’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 16:14 IST
Last Updated 21 ಅಕ್ಟೋಬರ್ 2020, 16:14 IST
ದಾವಣಗರೆಯಲ್ಲಿ ನಡೆದ ಪಿಡಿಒಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಸಾಬಪ್ಪ ಉದ್ಘಾಟಿಸಿದರು
ದಾವಣಗರೆಯಲ್ಲಿ ನಡೆದ ಪಿಡಿಒಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಸಾಬಪ್ಪ ಉದ್ಘಾಟಿಸಿದರು   

ದಾವಣಗೆರೆ: ಬಡತನ ನಿರ್ಮೂಲನೆಗಾಗಿ ಇರುವ ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸಲು ಸಾಮಾಜಿಕ ನ್ಯಾಯದಡಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ರಾಜ್ಯಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಸಾಬಪ್ಪ ಹೇಳಿದರು.

ನಗರದ ಹಳೇಕೋರ್ಟ್ ಸಂಭಾಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕಿನ ಪಿಡಿಒಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಮಕ್ಕಳು ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ವಿದ್ಯೆ ಒದಗಿಸಬೇಕು. ಕೆಲವು ಬಡಜನರಿಗೆ ವೈದ್ಯಕೀಯ ವೆಚ್ಚ ಭರಿಸಲಾಗುತ್ತಿಲ್ಲ. ಅವರಿಗೆ ಸಹಾಯ ಮಾಡಬೇಕು. ಬಾಲ್ಯವಿವಾಹ, ದೇವದಾಸಿ ಪದ್ದತಿ ನಿರ್ಮೂಲನೆ ಮಾಡಬೇಕು. ವಸತಿರಹಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಇದೆಲ್ಲ ಎಲ್ಲ ಇಲಾಖೆಗಳ ಕರ್ತವ್ಯ ಎಂದು ತಿಳಿಸಿದರು.

ADVERTISEMENT

ಗ್ರಾಮ ಮಟ್ಟದಲ್ಲಿ ರಾಜಕೀಯ ಒತ್ತಡಗಳಿಂದ ಕೆಲವು ಫಲಾನುಭವಿ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ. ಪಿಡಿಒಗಳು ಸರಿಯಾಗಿ ಅಧ್ಯಯನ ಮಾಡಿ ಸೌಲಭ್ಯ ವಂಚಿತರಿಗೆ ಯೋಜನೆ ತಲುಪಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಅರುಣಕುಮಾರ್ ಎಲ್.ಎಚ್. ಮಾತನಾಡಿ, ‘ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಒಂದು ನ್ಯಾಯಲಯವಿದ್ದಂತೆ ಈ ಪ್ರಾಧಿಕಾರದಲ್ಲಿ ವಕೀಲರ ಅವಶ್ಯಕತೆ ಇಲ್ಲ ನೊಂದವರು ಅರ್ಜಿ ನೀಡಿ ಯಾವುದೇ ಶುಲ್ಕವಿಲ್ಲದೆ ಇಲ್ಲಿಯೂ ಕೂಡ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಸ್ತುತವಾಗಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಜತೆಗೆ ದೇವದಾಸಿ ಪದ್ಧತಿಯಂಥ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಪ್ರಯತ್ನಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.