ADVERTISEMENT

ಅಂಗವಿಕಲರ ಹಣ ಸದ್ಭಳಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 8:45 IST
Last Updated 21 ಏಪ್ರಿಲ್ 2011, 8:45 IST

ಧಾರವಾಡ: ಅಂಗವಿಕಲರಲ್ಲಿ ಶಾಲೆ ಬಿಡುವ ಮಕ್ಕಳಿಲ್ಲ ಎಂದು ದೇಶದ ಶಿಕ್ಷಣ ಅಧಿಕಾರಿಗಳು ವರದಿ ನೀಡುತ್ತಿರುವುದು ಸರಿಯಲ್ಲ. ಇದರಿಂದ ಮಕ್ಕಳ ಬೆಳವಣಿಗೆಗೆ ತಡೆ ಉಂಟಾಗುತ್ತದೆ ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತ ಕೆ.ವಿ.ರಾಜಣ್ಣ ಹೇಳಿದರು. ಇಲ್ಲಿನ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಗವಿಕಲ ಮಕ್ಕಳ ಬಗ್ಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳು ಕೈಗೊಂಡಿರುವ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಮಾನವೀಯ ದೃಷ್ಟಿಯಿಂದ ನೋಡಿದಾಗ ಸರ್ಕಾರಕ್ಕೆ ತಪ್ಪು ವರದಿ ನೀಡುವ ಇಂಥ ಕ್ರಮ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಬೇಕಾಗುತ್ತದೆ. ಪ್ರತಿ ವರ್ಷ ಜಿಲ್ಲೆಗೆ ಒಂದು ಕೋಟಿ ರೂಪಾಯಿ ಅನುದಾನವನ್ನು ಅಂಗವಿಕಲ ಮಕ್ಕಳಿಗಾಗಿಯೇ ನಿಡಲಾಗುತ್ತಿದೆ. ಅವರ ಶಿಕ್ಷಣ, ವ್ಯಕ್ತಿತ್ವ ವಿಕಾಸ ಕುರಿತಂತೆ ಯಾವುದೇ ಸಭೆಗಳನ್ನು ಜರುಗಿಸಿಲ್ಲ. ಜರುಗಿಸಿದ್ದರೂ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕರೆದಿಲ್ಲ. ತಾಲ್ಲೂಕು ಮಟ್ಟದಲ್ಲಿ ಸಿಡಿಪಿಒಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದು ಅಸಮಾಧಾನದ ಸಂಗತಿಯಾಗಿದೆ ಎಂದು ಹೇಳಿದರು.

‘ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 3793, ಹೈಸ್ಕೂಲ್‌ಗಳಲ್ಲಿ 244 ಅಂಗವಿಕಲ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ದೈಹಿಕವಾಗಿ ಅಸಮರ್ಥರಿರುವ ಅಂಗವಿಕಲ ಮಕ್ಕಳಿಗೆ ಮನೆಯಲ್ಲಿಯೇ ಪಾಠ ಮಾಡಿಸಲು 313 ಸ್ವಯಂ ಸೇವಕ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಭಾಸ್ಕರ ಭಟ್ ಸಭೆಗೆ ತಿಳಿಸಿದರು.  ಜಿಲ್ಲೆಯಲ್ಲಿ ಕುಷ್ಠರೋಗ ತಡೆ ಕುರಿತಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎನ್.ಎಂ.ಅಂಗಡಿ ಮಾಹಿತಿ ನೀಡಿದರು.

ಸರ್ಕಾರ 2002ರಲ್ಲಿ ಸುತ್ತೋಲೆ ಹಾಗೂ ಮಾರ್ಗದರ್ಶಿ ಅಂಶಗಳನ್ನು ಜಾರಿ ಮಾಡಿದ್ದರೂ ತಾಲ್ಲೂಕು ಮಟ್ಟದಲ್ಲಿ ವೈದ್ಯಕೀಯ ಸಮಿತಿಗಳನ್ನು ರಚಿಸದಿರುವ ಬಗ್ಗೆ ಆಯುಕ್ತ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು. ‘2009ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರವಾಹ ಸಂದರ್ಭದಲ್ಲಿ ಮಾನಸಿಕ ರೋಗಗಳ ತಜ್ಞರ ಸಮಿತಿಗಳನ್ನು ರಚಿಸಿ ಪ್ರವಾಹದಿಂದ ಕಂಗೆಟ್ಟಿದ್ದ ಹಳ್ಳಿ ಜನಗಳಲ್ಲಿ ಮಾನಸಿಕ ಧೈರ್ಯ ತುಂಬಿ ಅವರೊಂದಿಗೆ ಸರ್ಕಾರ ಹಾಗೂ ಸಮಾಜದ ಅನೇಕ ಸಂಸ್ಥೆಗಳಿವೆ ಎಂಬ ಭಾವನೆ ಮೂಡಿಸುವ ಕೆಲಸ ಜಿಲ್ಲಾ ಆಡಳಿತ ಮಾಡಿತ್ತು’ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ದಿಲೀಪ, ಜಿಲ್ಲಾ ಪಂಚಾಯಿತಿ ಉಪಕಾಯದರ್ಶಿ ಎಸ್.ಬಿ.ಮುಳ್ಳೊಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸರೋಜಿನಿ ಕಡೇಮನಿ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಪುರದಾಳ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.