ADVERTISEMENT

ಅಕ್ರಮ ಅದಿರು ರಫ್ತು ಪ್ರಕರಣ ಮುಕ್ತಾಯಕ್ಕೆ ಸರ್ಕಾರವೇ ಹೊಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 6:29 IST
Last Updated 27 ಅಕ್ಟೋಬರ್ 2017, 6:29 IST

ಧಾರವಾಡ: ‘ಅದಿರು ಅಕ್ರಮ ರಫ್ತು ಪ್ರಕರಣದ ತನಿಖೆ ನಡೆಸಿದ ಸಿಬಿಐ, ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ ಪ್ರಕರಣ ಮುಕ್ತಾಯಗೊಳಿಸಿರುವುದಕ್ಕೆ ಎಚ್‌.ಕೆ.ಪಾಟೀಲ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ವೈಫಲವ್ಯವೇ ಕಾರಣ’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಆರೋಪಿಸಿದರು.

’ಹಿಂದಿನ ಸರ್ಕಾರದಲ್ಲಿನ ಗಣಿ ಅಕ್ರಮಗಳ ಕುರಿತು ವೀರಾವೇಶದ ಮಾತುಗಳನ್ನಾಡಿದ್ದ ಸಿದ್ದರಾಮಯ್ಯ, ಪಾರದರ್ಶಕ ಆಡಳಿತ ನೀಡುವುದಾಗಿ ಬೆಂಗಳೂರಿನಿಂದ ಬಳ್ಳಾರಿ ವರೆಗೂ ಪಾದಯಾತ್ರೆ ನಡೆಸಿದ್ದರು. ಆದರೆ, ಅಧಿಕಾರ ಸಿಕ್ಕ ನಂತರ ಅಕ್ರಮ ಗಣಿಗಾರಿಕೆಯ ವಿಷಯವನ್ನೇ ಪ್ರಸ್ತಾಪಿಸದೆ ಜಾಣ ಮೌನಕ್ಕೆ ಶರಣಾಗಿದ್ದಾರೆ’ ಎಂದು ಆರೋಪಿಸಿದರು.

‘ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ ಹೆಗ್ಡೆ ಅವರು ನೀಡಿದ್ದ ವರದಿ ಇದ್ದರೂ ಅದನ್ನು ಪರಿಗಣಿಸದೆ, ತನಿಖಾ ಸಂಸ್ಥೆಗೆ ಸೂಕ್ತ ದಾಖಲೆ ನೀಡದೆ ಪ್ರಕರಣ ಮುಚ್ಚಿ ಹೋಗುವಂತೆ ಮಾಡಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ಯಾಬಿನೆಟ್ ಉಪಸಮಿತಿ ಮುಖ್ಯಸ್ಥ ಎಚ್‌.ಕೆ.ಪಾಟೀಲ್ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷವೇ ನೇರ ಹೊಣೆ. ಕೊಟ್ಟ ಭರವಸೆಯನ್ನು ಈಡೇರಿಸದ ಕಾಂಗ್ರೆಸ್ ಸರ್ಕಾರಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮಾಡಿದ ಗತಿಯನ್ನೇ ಮತದಾರರು ಮಾಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘₹12,228 ಕೋಟಿ ಮೌಲ್ಯದ ಮೂರು ಕೋಟಿ ಮೆಟ್ರಿಕ್‌ ಟನ್‌ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದ ಸಿಬಿಐ, ನ್ಯಾ. ಸಂತೋಷ್ ಹೆಗ್ಡೆ ಹಾಗೂ ತನಿಖಾ ಸಂಸ್ಥೆ ಮುಖ್ಯಸ್ಥ ಡಾ. ಯು.ವಿ.ಸಿಂಗ್‌ ನೀಡಿದ ವರದಿಯನ್ನು ಕನಿಷ್ಠ ಗಣನೆಗೂ ತೆಗೆದುಕೊಳ್ಳದೆ ಪ್ರಕರಣ ಮುಕ್ತಾಯಕ್ಕೆ ಪತ್ರ ಬರೆದಿದೆ. ಬಿ–ಶ್ರೇಣಿ ಗಣಿಗಾರಿಕೆಯಲ್ಲಿ 72 ಗಣಿ ಕಂಪೆನಿಗಳಿಂದ ಅಕ್ರಮವಾಗಿ ರಫ್ತಾಗಿರುವ ಅದಿರಿನ ಸಾವಿರಾರು ಕೋಟಿ ರೂಪಾಯಿ ವಸೂಲಾಗದೆ ಬಾಕಿ ಉಳಿದಿದೆ.

ನೈಸರ್ಗಿಕ ಸಂಪತ್ತು, ಕುಡಿಯುವ ನೀರು, ಸ್ಥಳಿಯರ ಬದುಕು ಮೂರಾಬಟ್ಟೆಯಾಗಿದ್ದರೂ, ಕನಿಷ್ಠ ಪಕ್ಷ ಕಾಳಜಿಯನ್ನೂ ಈ ಸರ್ಕಾರ ತೋರದಿರುವುದು ಬೇಸರದ ಸಂಗತಿ. ಜನರೇ ಇವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

‘ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿರುವುದು ಸ್ವಾಗತಾರ್ಹ. ರಿಯಲ್‌ಎಸ್ಟೇಟ್ ದಂದೆ ನಡೆಸುತ್ತಾ ಈ ಹುದ್ದೆ ಏರಿರುವ ಲಕ್ಷ್ಮಣ ಅವರಿಂದ ರಾಜ್ಯ ಸರ್ಕಾರ ತಕ್ಷಣ ರಾಜೀನಾಮೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಜನ ಸಂಗ್ರಾಮ ಪರಿಷತ್‌ ವತಿಯಿಂದ ನೂತನವಾಗಿ ಆಯ್ಕೆಯಾದ ರಾಜ್ಯ ಮಟ್ಟದ ಪದಾಧಿಕಾರಿಗಳಿಗೆ ರಾಯಚೂರಿನಲ್ಲಿ ನ. 4 ಹಾಗೂ 5ರಂದು ಬರಲಿರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ಎಸ್‌.ಆರ್‌.ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.