ADVERTISEMENT

ಅಕ್ರಮ ಗಣಿಗಾರಿಕೆ: ಸಿಬಿಐ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 9:05 IST
Last Updated 19 ಸೆಪ್ಟೆಂಬರ್ 2011, 9:05 IST

ಧಾರವಾಡ: ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ಸುಪ್ರೀಂ ಕೋರ್ಟ್ ಮಾರ್ಗದರ್ಶನದಲ್ಲಿ ಸಿಬಿಐಗೆ ವಹಿಸುವಂತೆ ಜನ ಸಂಗ್ರಾಮ ಪರಿಷತ್ ಮುಖಂಡ ಎಸ್.ಆರ್.ಹಿರೇಮಠ ಆಗ್ರಹಿಸಿದರು.

ನಗರದ ಮುರುಘಾಮಠದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಜನಜಾಗೃತಿ ಕಾರ್ಯಕ್ರಮ `ಜನ ಸಂಗ್ರಾಮ~ದಲ್ಲಿ ಅವರು ಮಾತನಾಡಿದರು.

ಗಣಿ ಅಕ್ರಮಗಳು ಗಂಭೀರ ಸ್ವರೂಪದಾಗಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸುವುದು ಅಗತ್ಯವಾಗಿದೆ ಎಂದು ಅವರು ನುಡಿದರು.

ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ ಅವರು ನೀಡಿದ ದ್ವಿತೀಯ ವರದಿಯಿಂದ ಇಡೀ ರಾಜ್ಯದ ರಾಜಕೀಯವೇ ಬುಡಮೇಲಾಗಿದೆ ಎಂದ ಅವರು, ಡಾ.ಯು.ವಿ. ಸಿಂಗ್ ವರದಿಯನ್ವಯ ಗಣಿ ಅಕ್ರಮದಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳು ಹಾಗೂ 700 ಅಧಿಕಾರಿಗಳಿಗೆ ಕಠಿಣ ಶಿಕ್ಷೆ  ನೀಡಬೇಕು. ಗಣಿ ಧಣಿಗಳ ಅಕ್ರಮ ಸಂಪತ್ತನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಖನಿಜ ಸಂಪತ್ತು ಲೂಟಿ ಮಾಡುವ ವರಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಲೂಟಿ ನಿರಂತರ ಮುಂದು ವರಿಯುತ್ತದೆ ಎಂದರು.

ಜನರು ಸಂಘಟನೆಗೊಂಡು ಹೋರಾಟಕ್ಕೆ ಇಳಿಯಬೇಕು ಎಂದು ಸಲಹೆ ನೀಡಿದರು. ಎಸ್.ಆರ್. ಹಿರೇಮಠ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಶ್ಲಾಘಿಸಿದರು.

ಡಿ.ಎಸ್.ಕಲ್ಮಠ, ಬಿ.ಎಂ.ಹನಸಿ, ಎಫ್.ಬಿ. ಹಬೀಬ, ಬಸವರಾಜ ಗೊಡಚಿ, ಗೌಸ್‌ಮೊದ್ದೀನ್ ಹಂಚಿನ ಮನಿ, ಎಂ.ಡಿ.ಪಾಟೀಲ, ಶ್ರೀಕಾಂತ ಹುಲಮನಿ, ಕಿರಣ ಹಿರೇಮಠ, ಈರಪ್ಪ ಪೂಜಾರ ಹಾಗೂ ಇತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.