ADVERTISEMENT

ಅಮೃತಸೇನರಿಂದ ಸಲ್ಲೇಖನ ವ್ರತ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 6:00 IST
Last Updated 10 ಜನವರಿ 2014, 6:00 IST

ಧಾರವಾಡ: ‘ನಮ್ಮ ಜೀವ  ಭೂಮಿ­ಯ ಮೇಲೆ ಯಾವ ಕಾರಣಕ್ಕಾಗಿ ಹುಟ್ಟಿದೆ ಎಂಬುದನ್ನು ನಾವು ಆತ್ಮ­ವಿಮ­ರ್ಶೆ ಮಾಡಿ­ಕೊಳ್ಳುವ ಅಗತ್ಯವಿದೆ’ ಎಂದು ಆಚಾರ್ಯ ಅಮೃತಸೇನ ಮಹಾ­­ರಾಜರು ಹೇಳಿದರು.

ಇಲ್ಲಿನ ಹೊಸಯಲ್ಲಾಪುರದಲ್ಲಿರುವ ಆದಿನಾಥ ದಿಗಂಬರ ಜೈನ ಬಸದಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಮೃತ­ಸೇನ ಮಹಾರಾಜರ ನಿಯಮ ಸಲ್ಲೇಖನ ವೃತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಇಂದು ನಾವು ದಿನನಿತ್ಯ ಒತ್ತಡದ ಬದುಕನ್ನು ಸಾಗಿಸುತ್ತಿದ್ದೇವೆ. ಮರಣ ಹೊಂದು­ವಾಗ ನಾವು ಇಲ್ಲಿಂದ ಏನನ್ನೂ ತೆಗೆದುಕೊಂಡು ಹೋಗು­ವು­ದಿಲ್ಲ. ವ್ಯಾಮೋಹ ಎಂಬುದು ನಮಗೆ ಅಂಟಿಕೊಂಡುಬಿಟ್ಟಿದೆ. ನಮ್ಮ ಜೀವದ ಬಗ್ಗೆ ನಮಗೆ ಸಂಸ್ಕಾರ ಇರಬೇಕು. ನಮ್ಮ ಆತ್ಮಶುದ್ಧಿಗೋಸ್ಕರ ಏತಕ್ಕಾಗಿ ನಾವು ಭೂಮಿಯ ಮೇಲೆ ಹುಟ್ಟಿದ್ದೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಿ­ಕೊಳ್ಳ­ಬೇಕು’ ಎಂದರು.

‘ಒಬ್ಬ ಶಿಕ್ಷಕರ ಹತ್ತಿರ ಒಬ್ಬ ವಿದ್ಯಾರ್ಥಿ­­ಯನ್ನು ನೀಡಿದರೆ, ಆತ ಉತ್ತಮ ಸಂಸ್ಕಾರವನ್ನು ಕಲಿಯುತ್ತಾನೆ. ರೈತನ ಕೈಗೆ ಭೂಮಿಯನ್ನು ನೀಡಿದರೆ ಆತ ಹೊಲವನ್ನು ಸ್ವಚ್ಛಗೊಳಿಸಿ ಅಲ್ಲಿ ಉತ್ತಮ ಫಸಲನ್ನು ಪಡೆಯುತ್ತಾನೆ. ಅದೇ ರೀತಿ ಒಬ್ಬ ಕುಂಬಾರನಿಗೆ ಮಣ್ಣನ್ನು ಕೊಟ್ಟರೆ ಆತ ಒಳ್ಳೆಯ ಗಡಿಗೆ­ಯನ್ನು ಮಾಡುತ್ತಾನೆ. ಈ ರೀತಿಯಾಗಿ ಒಂದೊಂದು ವಸ್ತುಗಳು ಉತ್ತಮ ಸಂಸ್ಕಾರ­ವನ್ನು ಪಡೆದು­ಕೊಳ್ಳುತ್ತವೆ. ಅದೇ ರೀತಿ ನಾವು ದೇವರ ಅನು­ಗ್ರಹದಿಂದ ಉತ್ತಮ ಸಂಸ್ಕಾರ ಪಡೆ­ಯುವಂತಾಗಬೇಕು. ಇದರ ಮೂಲಕ ನಮ್ಮ ಜೀವನವನ್ನು ನಾವು ಸಾರ್ಥಕ­ಪಡಿಸಿಕೊಳ್ಳಬೇಕು. ಅಂದಾಗ ನಮಗೆ ಜೀವನದ ಬೆಲೆ ಗೊತ್ತಾಗುತ್ತದೆ’ ಎಂದು ತಿಳಿಸಿದರು.

ನಿಜಾನಂದ ಮಹಾರಾಜ ಮಾತ­ನಾಡಿ, ‘ಮದುವೆ ಹಾಗೂ ಶಿಕ್ಷೆ ಎಂಬ ಶಬ್ದಗಳ ಮಧ್ಯೆ ಸಾಕಷ್ಟು ಅಂತರವಿದೆ. ಈ ಎರಡೂ ಶಬ್ದಗಳಲ್ಲಿ ಒಂದು ಸರಳ ಹಾಗೂ ಇನ್ನೊಂದು ಕಠಿಣವಾಗಿದೆ. ಈ ರೀತಿಯಾದಂತ ಸರಳ ಸಂದೇಶವನ್ನು ಸಾರುವುದೇ ಧರ್ಮದ ತತ್ವವಾಗಿದೆ. ಈ ಜೀವಕ್ಕೆ ಮೋಕ್ಷ ದೊರಕಬೇಕಾದರೆ ಬಸ್ತಿ ಹಾಗೂ ಮಂದಿರಗಳಲ್ಲಿ ಧ್ಯಾನಾಸಕ್ತ­ರಾಗಬೇಕು. ಆಸೆ, ಆಕಾಂಕ್ಷೆಗಳನ್ನು ನಾವು ತ್ಯೆಜಿಸಬೇಕು’ ಎಂದು ಅವರು ತಿಳಿಸಿದರು.

ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಗುಣಧರನಂದಿ ಸ್ವಾಮೀಜಿ. ಹು–ಡಾ ಮಾಜಿ ಅಧ್ಯಕ್ಷ ದತ್ತಾ ಡೋರ್ಲೆ, ಜಿನೇಂದ್ರ ಪ್ರಸಾದ್‌ ಇತರರು ಇದ್ದರು.

ಸಲ್ಲೇಖನ ವೃತ

ದಿಗಂಬರ ಪಂಥದ ಮುನಿಗಳು ದಿನೇ ದಿನೇ ಆಹಾರ, ನೀರು ತ್ಯಾಗ ಮಾಡುತ್ತಾ ದೇಹಾರ್ಪಣೆ ಮಾಡುವ ಪ್ರಕ್ರಿಯೆಯೇ ಸಲ್ಲೇಖನ ವೃತ.  ಈ ವೃತ ಸ್ವೀಕರಿಸಿದ ಮುನಿ­ಗಳು ಕ್ರಮೇಣ ಅನ್ನ, ನೀರು ಬಿಡುತ್ತಾ ದಿನ ಕಳೆಯುತ್ತಾರೆ. ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ತೇರ­ದಾಳದಲ್ಲಿ ಮುನಿಯೊಬ್ಬರು ಸಲ್ಲೇ­ಖನ ವೃತ ಸ್ವೀಕರಿಸಿದ್ದರು. 22 ದಿನಗಳ ನಂತರ ದೇಹಾಂತ್ಯ­ವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT