ADVERTISEMENT

ಅರಳಿದ ಕಮಲ, ಮುರಿದ ಕೈ

ಜಿಲ್ಲೆಯ ಇಬ್ಬರೂ ಸಚಿವರು ಪರಾಭವ; ತೆನೆ ಇಳಿಸಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 16 ಮೇ 2018, 6:34 IST
Last Updated 16 ಮೇ 2018, 6:34 IST

ಧಾರವಾಡ: ಜಿಲ್ಲೆಯ ಇಬ್ಬರು ಸಚಿವರಿಗೆ ಸೋಲಾಗಿರುವುದು ಕಾಂಗ್ರೆಸ್‌ ಮರ್ಮಾಘಾತ ಉಂಟು ಮಾಡಿದ್ದರೆ, ಇಬ್ಬರು ಶಾಸಕರ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಬಿಜೆಪಿಯ ಕಮಲ ಅರಳಿದೆ. ಜೆಡಿಎಸ್‌ನ ಏಕೈಕ ಶಾಸಕ ಸೋತಿರುವುದು ತೆನೆ ಹೊತ್ತ ಮಹಿಳೆಯ ಹೊರೆ ಇಳಿದಿದೆ.

ಲಿಂಗಾಯತ ಪ್ರತ್ಯೇಕ ಧರ್ಮದ ಮೂಲಕ ರಾಜ್ಯದಾದ್ಯಂತ ಸದ್ದು ಮಾಡಿದ್ದ ಧಾರವಾಡ ಕ್ಷೇತ್ರದ ವಿನಯ ಕುಲಕರ್ಣಿ, ಗಣಿ ನಾಡು ಬಳ್ಳಾರಿ ಜಿಲ್ಲೆಯಿಂದ ಬಂದು ಎರಡು ಬಾರಿ ಗೆಲುವು ಸಾಧಿಸಿದ್ದ ಕಲಘಟಗಿ ಕ್ಷೇತ್ರದ ಸಂತೋಷ ಲಾಡ್ ಸೋತಿರುವುದರಿಂದ ಕಾಂಗ್ರೆಸ್‌ ಮುಖಂಡರೇ ಅಚ್ಚರಿಗೆ ದೂಡಿದೆ. ಅವರಿಬ್ಬರನ್ನು ಸೋಲಿಸಿರುವ ಸಿ.ಎಂ. ನಿಂಬಣ್ಣವರ ಹಾಗೂ ಅಮೃತ ದೇಸಾಯಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಸಚಿವರಿಬ್ಬರ ಸೋಲಿನ ಅಂತರ 20 ಸಾವಿರ ಆಸು–ಪಾಸಿನಲ್ಲಿದ್ದರೆ, ಶಿವಳ್ಳಿ ಕೇವಲ 634 ಮತಗಳಿಂದ ಪ್ರಯಾಸದ ಗೆಲುವು ಸಾಧಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ನ ನಾಲ್ಕು ಶಾಸಕರಿದ್ದ ಸಂಖ್ಯೆ ಈಗ ಎರಡಕ್ಕೆ ಇಳಿದಿದೆ. ಸಚಿವರಿಬ್ಬರು ಸೋತಿದ್ದರೂ ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ ಹಾಗೂ ಹು–ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಗೆಲುವು ಸಾಧಿಸಿ ಕಾಂಗ್ರೆಸ್‌ನ ಮಾನ ಕಾಪಾಡಿದ್ದಾರೆ.

ಹು–ಧಾ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಅವರ ಫಲಿತಾಂಶ ತಾಂತ್ರಿಕ ಕಾರಣದಿಂದ ಪ್ರಕಟವಾಗಿಲ್ಲ.  ಹು–ಧಾ ಪಶ್ಚಿಮ ಕ್ಷೇತ್ರ ಶಾಸಕ ಅರವಿಂದ ಬೆಲ್ಲದ ಮರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಸೋತಿದ್ದ ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಮರಳಿ ಗೆಲುವು ಸಾಧಿಸಿದ್ದು, ಶಂಕರ ಪಾಟೀಲ ಮುನೇನಕೊಪ್ಪ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್‌ನ ಏಕೈಕ ಶಾಸಕ ಎನ್‌.ಎಚ್‌. ಕೋನರಡ್ಡಿ ಅವರ ಸೋಲಿನೊಂದಿಗೆ ಆ ಪಕ್ಷ ಜಿಲ್ಲೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಉಳಿದಂತೆ ಪಕ್ಷೇತರರು ಗೆಲುವಿನ ಸಮೀಪವೂ ಸುಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.