ADVERTISEMENT

ಇಂದಿನಿಂದ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 8:55 IST
Last Updated 1 ಅಕ್ಟೋಬರ್ 2011, 8:55 IST

ಹುಬ್ಬಳ್ಳಿ: ನಗರದ ಇಂದಿರಾ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಇದೇ ಒಂದರಿಂದ ಮೂರರವರೆಗೆ ನಡೆಯಲಿದೆ.

ಐದು ಸಾವಿರಕ್ಕೂ ಮಿಕ್ಕಿ ಹೂವಿನ ಕುಂಡಗಳು ಪ್ರದರ್ಶನದಲ್ಲಿರುತ್ತವೆ. ಧಾರವಾಡ ಪಾಲಿಕೆಯಿಂದ 900, ಧಾರವಾಡದ ಟೈವಾಕ್ ಕಂಪೆನಿಯಿಂದ 500, ಧಾರವಾಡದ ಸುಮಾರು 100ಕ್ಕೂ ಅಧಿಕ ಮನೆಗಳ ಹೂವಿನ ಕುಂಡಗಳು ಪ್ರದರ್ಶನದಲ್ಲಿರುತ್ತವೆ.
 
ಎಸ್‌ಡಿಎಂ ಕಾಲೇಜಿನಿಂದ 500 ಕುಂಡಗಳಲ್ಲದೇ ಹುಬ್ಬಳ್ಳಿಯ ಪಾಲಿಕೆ ವತಿಯಿಂದ 1500, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಿಂದ 300, ನಗರದ ಕಾಡಸಿದ್ಧೇಶ್ವರ ಕಾಲೇಜಿನಿಂದ 150, ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಿಂದ 150, ಹುಬ್ಬಳ್ಳಿಯ 20ಕ್ಕೂ ಅಧಿಕ ಮನೆಗಳವರು ಕುಂಡಗಳ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

`ಇದು ಕೇವಲ ಪ್ರದರ್ಶನವಲ್ಲ. ಸ್ಪರ್ಧೆ ಕೂಡಾ. ಹೀಗಾಗಿ ಈ ಬಾರಿ 5600ಕ್ಕಿಂತ ಹೆಚ್ಚು ಕುಂಡಗಳು ಬಂದಿವೆ. ಇದರಲ್ಲಿ ಹೂಗಿಡಗಳು, ಅಲಂಕಾರಿಕ ಗಿಡಗಳು, ಅಂದವಾದ ಜೋಡಣೆ ಹಾಗೂ ವಿವಿಧ ಜಾತಿಯ ಕೊಯ್ದಿಟ್ಟ ಹೂಗಳ ವಿಭಾಗಗಳಿರುತ್ತವೆ. ತರಕಾರಿ ವಿಭಾಗದಲ್ಲಿ ವಿವಿಧ ತರಕಾರಿ ಹಾಗೂ ಗೆಡ್ಡೆ ತರಕಾರಿ ಇರುತ್ತದೆ~ ಎಂದು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಕಾರ್ಯದರ್ಶಿ ಎ.ಎಸ್. ಕವಿತಾ `ಪ್ರಜಾವಾಣಿ~ಗೆ ತಿಳಿಸಿದರು.

`ಹಾಪ್‌ಕಾಮ್ಸ ವತಿಯಿಂದ ತರಕಾರಿ ಹಾಗೂ ಹಣ್ಣುಗಳ ಮೂಲಕ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಜೊತೆಗೆ ರೈತರು ಬೆಳೆದ ಹೂವು, ಹಣ್ಣು ಹಾಗೂ ತರಕಾರಿಗಳ ಪ್ರದರ್ಶನ ಕೂಡಾ ಏರ್ಪಡಿಸಲಾಗಿದೆ.
 
ಈ ವರ್ಷ ಹೂಗುಚ್ಛ ತಯಾರಿಕೆ ಸ್ಪರ್ಧೆ ಕೂಡಾ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಮಧ್ಯಾಹ್ನ 12 ಗಂಟೆಯಿಂದ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಶನಿವಾರ ಸಂಜೆ ನಾಲ್ಕು ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ~ ಎಂದು ಅವರು ವಿವರಿಸಿದರು.

`ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ಪಾಲಿಕೆ, ಕೃಷಿ ಇಲಾಖೆ, ಹಾಪ್‌ಕಾಮ್ಸ  ಮತ್ತು ಖಾದಿ ಗ್ರಾಮೋದ್ಯೋಗ ಸಂಸ್ಥೆ ಆಶ್ರಯದಲ್ಲಿ ಈ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಅಧ್ಯಕ್ಷ ಎ.ಜಿ. ದೇಶಪಾಂಡೆ ಹೇಳಿದರು.

`10 ಅಡಿ ಎತ್ತರ ಹಾಗೂ ಐದಡಿ ಅಗಲದ ಹೂದಾನಿಯನ್ನು ತಯಾರಿಸಲಾಗುತ್ತಿದೆ. ಇದನ್ನು ಗುಲಾಬಿ, ಡೇರೆ, ಜರ್ಬೆರಾ, ಚೆಂಡು ಹೂವು, ಚಿಂತಾಮಣಿ ಚೆಂಡು ಹೂವು, ಸೇವಂತಿಗೆ ಮೊದಲಾದ ಹೂವುಗಳಿಂದ ಅಲಂಕರಿಸಲಾಗುತ್ತದೆ. ಇದರ ಮುಂದೆ ಮಹಾತ್ಮಾ ಗಾಂಧೀಜಿಯ ಪುಟ್ಟ ಮೂರ್ತಿ ಇಟ್ಟು ಹೂವಿನಿಂದ ಅಲಂಕರಿಸಲಾಗುತ್ತದೆ. ಇದು ಈ ಬಾರಿಯ ವಿಶೇಷ~ ಎಂದು ದೇಶಪಾಂಡೆ ಹೆಮ್ಮೆಯಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.