ADVERTISEMENT

‘ಇ– ಸಮಾವೇಶ: 2018’ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 10:05 IST
Last Updated 8 ಮಾರ್ಚ್ 2018, 10:05 IST

ಹುಬ್ಬಳ್ಳಿ: ನಗರದ ಬಿವಿಬಿ ಎಂಜಿನಿಯಿರಿಂಗ್ ಕಾಲೇಜಿನಲ್ಲಿ ಮಾ. 8ರಿಂದ 10ರ ವರೆಗೆ ‘ಇ– ಸಮಾವೇಶ: 2018’ (ಉದ್ಯಮ ಸಮ್ಮೇಳನ) ನಡೆಯಲಿದೆ. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಅವರು ಗುರುವಾರ ಬೆಳಿಗ್ಗೆ 9.30ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದಾರೆ.

‘ಕಾಲೇಜಿನ ಸಿಟಿಐಇ ಮತ್ತು ‘ಮೇಕ್‌ ಇನ್ ಬಿವಿಬಿ’ ಭಾಗವಾದ ‘ಇ– ಸಮ್ಮಿತ್‌’ನಲ್ಲಿ ದೇಶದ ಯಶಸ್ವಿ ಉದ್ಯಮಿಗಳು ಭಾಗವಹಿಸಿ, ಅವರು ಸಾಗಿ ಬಂದ ಹಾದಿಯನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲಿದ್ದಾರೆ. ಪ್ರತಿ ವರ್ಷ ಎರಡು ದಿನ ನಡೆಯುತ್ತಿದ್ದ ಸಮ್ಮೇಳನವನ್ನು ಈ ಸಲ ಮೂರು ದಿನ ಆಯೋಜಿಸಲಾಗಿದೆ’ ಎಂದು ಸಿಟಿಐಇ ನಿರ್ದೇಶಕ ನಿತಿನ್ ಕುಲಕರ್ಣಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೇಕ್‌ ಇನ್ ಬಿವಿಬಿ’ ತಂಡದ ಅಪೂರ್ವ ಜಿ.ಎಸ್., ‘ಮೊದಲ ದಿನ ಗೋಲಿ ವಡಾ ಪಾವ್‌ ಖ್ಯಾತಿಯ ವೆಂಕಟೇಶ ಐಯ್ಯರ್, ರಾಯಲ್ ಬ್ರದರ್ಸ್‌ನ ಅಭಿಷೇಕ್ ಚಂದ್ರಶೇಖರ್, ವೆಬ್‌ ಡ್ರಿಮ್ಸ್‌ನ ದೀಪಾಲಿ ಗೋಟಡ್ಕೆ ಹಾಗೂ ಐಡಿಯಾಸ್ ಆಫ್ ಇಂಪ್ಯಾಕ್ಟ್ ಇನೊವೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಗಿರೀಂದ್ರ ಕಸ್ಮಾಲಕರ್ ಅವರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ’ ಎಂದರು.

ADVERTISEMENT

‘ಮಾ. 9ರಂದು ಕಾಲ್ಪನಿಕ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕರಾದ ಅಪುಲ್ ನಹತಾ, ರೂಪ್ಸೆ ಮ್ಯಾಟ್ರೆಸ್ಸಸ್ ಪ್ರೈವೇಟ್ ಲಿಮಿಟೆಡ್‌ನ ರಾಮನಾಥ್ ಭಟ್ ಹಾಗೂ ಒಲೊಪಿ ಡಾಟ್‌ ಕಾಂ ಸಂಸ್ಥಾಪಕ ಧನಂಜಯ್ ಡಿ.ಜೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ’ ಎಂದರು.

‘ಮಾ. 10ರಂದು ಭಾರತದಲ್ಲಿ ಉದ್ಯಮಶೀಲತೆ ಪ್ರೋತ್ಸಾಹ ಕುರಿತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಮಾತನಾಡಲಿದ್ದಾರೆ. ಬಳಿಕ ಎಆರ್‌ಎಂ ಇಂಡಿಯಾ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗುರು ಗಣೇಶನ್ ಅವರು, ಯಶಸ್ವಿ ಉದ್ಯಮದ ಕುರಿತು ಮಾತನಾಡಲಿದ್ದಾರೆ’ ಎಂದು ತಿಳಿಸಿದರು.

‘ಮೇಕ್‌ ಇನ್ ಬಿವಿಬಿ’ ತಂಡದ ಮತ್ತೊಬ್ಬ ವಿದ್ಯಾರ್ಥಿ ಶುಭಾಂಗ್, ‘ವಿವಿಧ ಕಾಲೇಜುಗಳ ಒಟ್ಟು 50 ತಂಡಗಳು ನೋಂದಣಿ ಮಾಡಿಕೊಂಡಿವೆ. ಅತ್ಯುತ್ತಮ ಉದ್ಯಮ ಯೋಜನೆ ತಯಾರಿಸಿಕೊಂಡು ಬರುವ 10 ತಂಡಗಳಿಗೆ, ಯೋಜನೆಗೆ ಅನುಗುಣವಾಗಿ ಗರಿಷ್ಠ ₹ 1 ಲಕ್ಷದವರೆಗೆ ನಗದು ಬಹುಮಾನ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.