ADVERTISEMENT

ಉಣಕಲ್‌–ಹೊಸೂರು ರಸ್ತೆಯಲ್ಲಿ ಹೆಚ್ಚಲಿದೆ ದಟ್ಟಣೆ !

ಮನೋಜ ಕುಮಾರ್ ಗುದ್ದಿ
Published 10 ಜೂನ್ 2017, 6:49 IST
Last Updated 10 ಜೂನ್ 2017, 6:49 IST
ನಿರ್ಮಾಣ ಹಂತದಲ್ಲಿರುವ ಹೊಸೂರು ಬಸ್‌ ನಿಲ್ದಾಣ
ನಿರ್ಮಾಣ ಹಂತದಲ್ಲಿರುವ ಹೊಸೂರು ಬಸ್‌ ನಿಲ್ದಾಣ   

ಹುಬ್ಬಳ್ಳಿ: ಎಲ್ಲವೂ ಅಂದುಕೊಂಡಂತೆ ಆದರೆ ಬರುವ ನವೆಂಬರ್ ವೇಳೆಗೆ ಹೊಸೂರು–ಉಣಕಲ್‌ ರಸ್ತೆಯಲ್ಲಿ ಅತ್ಯಾಧುನಿಕ ಬಸ್‌ ನಿಲ್ದಾಣ ಉದ್ಘಾಟನೆಯಾಗಲಿದೆ. ಇದರಿಂದಾಗಿ ಈ ರಸ್ತೆಯಲ್ಲಿ ನಿತ್ಯ ನೂರಾರು ಬಸ್‌ಗಳು ಸಂಚಾರವೂ ಆರಂಭಗೊಳ್ಳುವುದರಿಂದ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಲಿದೆ.

ಅದೇ ವೇಳೆಗೆ ತಾಲ್ಲೂಕು ಕೋರ್ಟ್‌ ಕೂಡಾ ಇಲ್ಲಿಗೇ ಸ್ಥಳಾಂತರಗೊಳ್ಳುವುದರಿಂದ ನೂರಾರು ವಕೀಲರು, ಕಕ್ಷಿದಾರರ ವಾಹನಗಳೂ ಇದೇ ರಸ್ತೆಗೆ ದಾಂಗುಡಿ ಇಡಲಿವೆ. ಜೊತೆಗೆ, ಗೋಕುಲ ರಸ್ತೆಯಿಂದ ಶಿರೂರು ಪಾರ್ಕ್‌ ಕಡೆಗೆ ಹೋಗುವವರು, ಇಲ್ಲಿನ ಶಕುಂತಲಾ ಆಸ್ಪತ್ರೆಗೆ ಬರುವ ರೋಗಿಗಳು, ಇಲ್ಲಿನ ಬಡಾವಣೆಗಳಿಗೆ ಬರುವವರೂ ಇದೇ ರಸ್ತೆಯನ್ನು ಉಪಯೋಗಿಸುವುದರಿಂದ ಹೊಸೂರಿನಿಂದ ಉಣಕಲ್‌ ಕ್ರಾಸ್‌ ಹಾಗೂ ಗೋಕುಲ ರಸ್ತೆಯಲ್ಲಿ ಎಷ್ಟೊಂದು ವಾಹನ ದಟ್ಟಣೆ ಇರುತ್ತದೋ ಅದೇ ರೀತಿ ಈ ರಸ್ತೆಯೂ ವಾಹನ ದಟ್ಟಣೆಯಿಂದ ತುಂಬಿ ತುಳುಕಲಿದೆ ಎಂಬ ಆತಂಕ ಇಲ್ಲಿನ ನಿವಾಸಿಗಳಿಗೆ ಎದುರಾಗಿದೆ.

15.16 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಈ ನಿಲ್ದಾಣವನ್ನು ಬಿಆರ್‌ಟಿಎಸ್ ಕಂಪೆನಿಯು ತನ್ನದೇ ವೆಚ್ಚದಲ್ಲಿ ನಿರ್ಮಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಿದೆ. ಇಲ್ಲಿಯವರೆಗೂ ಇದರ ಸ್ವರೂಪದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇರಲಿಲ್ಲ.

ADVERTISEMENT

ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಗುರುವಾರ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಸ್‌ ನಿಲ್ದಾಣವನ್ನು ಹಳೆ ಬಸ್‌ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎನ್ನುತ್ತಿದ್ದಂತೆ ಇಲ್ಲಿ ಮತ್ತೊಂದು ಪ್ರಮುಖ ನಿಲ್ದಾಣ ಬರುವ ವಿಚಾರ ಬಹಿರಂಗವಾಯಿತು.

ಮಹಿಳಾ ವಿದ್ಯಾಪೀಠದ ಎದುರಿನಲ್ಲಿ ಬಸ್‌ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂಬ ನಿರೀಕ್ಷೆ ಇಲ್ಲಿನ ನಾಗರಿಕರದ್ದಾಗಿತ್ತು. ಆದರೆ, ಬಿಆರ್‌ಟಿಎಸ್‌ ಬಸ್‌ ಮತ್ತು ಸಾರಿಗೆ ಸಂಸ್ಥೆಯ ನಗರ ಸಾರಿಗೆ ಬಸ್‌ಗಳ ಮೂಲಕ ಬರುವ ಪ್ರಯಾಣಿಕರೇ ಇಲ್ಲಿನ ರ್‍್ಯಾಂಪ್‌ ಬಳಸಿಕೊಂಡು ನಿಲ್ದಾಣದ ಒಳಗೆ ಬರಬೇಕೇ ಹೊರತು ಬಸ್ ಒಳಹೋಗಲು ಹಾಗೂ ಹೊರಹೋಗಲು ಅವಕಾಶ ಕಲ್ಪಿಸುತ್ತಿಲ್ಲ ಎಂದರು.

ಹೊಸೂರು–ಉಣಕಲ್‌ ರಸ್ತೆಯನ್ನೇ ಬಸ್‌ಗಳ ಆಗಮನ, ನಿರ್ಗಮನಕ್ಕಾಗಿ ಬಳಸಿಕೊಳ್ಳಲಾಗುವುದು ಎಂದೂ ಹೇಳಿದರು. ಬಸ್‌ಗಳ ಕಾರ್ಯಾಚರಣೆ ಆರಂಭವಾದ ನಂತರ ಉಂಟಾಗಬಹುದಾದ ವಾಹನ ದಟ್ಟಣೆಯ ಬಗ್ಗೆಯೂ ಅವರ ಬಳಿ ಹೆಚ್ಚಿನ ಮಾಹಿತಿ ಇರಲಿಲ್ಲ. ಬಸ್‌ ನಿಲ್ದಾಣ ಕಾರ್ಯಾರಂಭ ಮಾಡಿದ ಬಳಿಕ ಅಂತರರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಗೆ ತೆರಳುವ ಬಸ್‌ಗಳಷ್ಟೇ ಅಲ್ಲದೇ, ನಗರ ಸಾರಿಗೆ ಬಸ್‌ಗಳೂ ಇಲ್ಲಿಗೇ ಬರುತ್ತವೆ.

ಇವುಗಳ ಸಂಖ್ಯೆಯೇ ಅಂದಾಜು 300 ಆಗುತ್ತದೆ. ಪ್ರಯಾಣಿಕರನ್ನು ಇಳಿಸಲು, ಕರೆದೊಯ್ಯಲು ಬರುವ ದ್ವಿಚಕ್ರ ವಾಹನಗಳು ಹಾಗೂ ಬೈಕ್‌ಗಳ ಸಂಖ್ಯೆಯೂ ಸಾವಿರ ಮೀರುತ್ತದೆ. ಹೀಗಾದರೆ, ನಮಗೆ ಹಗಲು ರಾತ್ರಿ ವಾಹನಗಳ ಧ್ವನಿಯನ್ನೇ ಕೇಳಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಇದೇ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ ನಿವಾಸಿ ಸಿದ್ಧನಗೌಡ.

ಹೊಸ ಕೋರ್ಟ್ ಉದ್ಘಾಟನೆ: ಇದೇ ರಸ್ತೆಯಲ್ಲಿ ₹ 120 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೃಹತ್‌ ನ್ಯಾಯಾಲಯ ಸಂಕೀರ್ಣವು ಉದ್ಘಾಟನೆಗೆ ಸಿದ್ಧಗೊಂಡಿದ್ದು, ಅಂತಿಮ ಹಂತದ ಕಾಮಗಾರಿ ಮುಕ್ತಾಯವಾದ ಬಳಿಕ ಕಲಾಪಗಳು ನಡೆಯಲಿವೆ. ಕೋರ್ಟ್‌ ವೃತ್ತದಲ್ಲಿರುವ ಎಲ್ಲ ನ್ಯಾಯಾಲಯಗಳು ಇಲ್ಲಿಗೆ ಸ್ಥಳಾಂತರಗೊಳ್ಳಲಿವೆ. ಇದರಿಂದಾಗಿ ನ್ಯಾಯಾಲಯಕ್ಕೆ ಭೇಟಿ ನೀಡುವ ಕಕ್ಷಿದಾರರು, ವಕೀಲರ ವಾಹನಗಳೂ ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ಈ ರಸ್ತೆಯ ಮೇಲೆ ಇನ್ನಷ್ಟು ಒತ್ತಡ ಬೀಳಲಿದೆ. ಹೀಗಾಗಿ, ಗೋಕುಲ ರಸ್ತೆಯಲ್ಲಿರುವ 26 ಎಕರೆ ವಿಸ್ತೀರ್ಣದ ಬಸ್‌ ನಿಲ್ದಾಣದಲ್ಲೇ ಬಸ್‌ ಸಂಚಾರ ಮಾಡಬೇಕು ಎಂದು ಇಲ್ಲಿನ ನಿವಾಸಿ ಡಾ. ಎಂ.ಸಿ. ಸಿಂಧೂರ ಒತ್ತಾಯಿಸುತ್ತಾರೆ.

‘ರಸ್ತೆ ವಿಸ್ತರಣೆ ಮಾಡಿದರೆ ಅನುಕೂಲ’
ಹೊಸೂರು ಇಂಟರ್‌ಚೇಂಜ್‌ ಬಸ್‌ ಟರ್ಮಿನಸ್‌ ಅನ್ನು ಲೋಕಾರ್ಪಣೆ ಮಾಡಿದ ಬಳಿಕ ಹಳೆ ಬಸ್‌ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ. ನಗರ ಸಾರಿಗೆ ಬಸ್‌ಗಳ ಮೂಲಕ ಹೊಸೂರಿಗೆ ಬರುವ ಪ್ರಯಾಣಿಕರು ಇಲ್ಲಿಂದಲೇ ವಿವಿಧ ಊರುಗಳಿಗೆ ತೆರಳಬಹುದು. ಹೊಸೂರು–ಉಣಕಲ್‌ ರಸ್ತೆಯ ಮೂಲಕವೇ ನಮ್ಮ ಸಂಸ್ಥೆಯ ಎಲ್ಲ ವಾಹನಗಳು ಬಂದು ಹೋಗಲಿವೆ. ಇದಕ್ಕೆ ಪೂರಕವಾಗಿ ರಸ್ತೆ ವಿಸ್ತರಣೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ರಸ್ತೆ ವಿಸ್ತರಣೆಗೆ ಬೇಕು ₹ 170 ಕೋಟಿ’ !
ಸಾರಿಗೆ ಸಂಸ್ಥೆಯು ಹೊಸೂರು–ಉಣಕಲ್‌ ರಸ್ತೆ ವಿಸ್ತರಣೆಯಾಗಲಿದೆ ಎಂಬ ಆಶಾವಾದದಲ್ಲಿದೆ. ಆದರೆ, ಸದ್ಯಕ್ಕೆ ಇದು ಭಾರಿ ದುಬಾರಿಯ ಯೋಜನೆ ಎಂಬುದು ಮಹಾನಗರ ಪಾಲಿಕೆ ಅಧಿಕಾರಿಗಳ ಅಂಬೋಣ. ಹೀಗಾಗಿ, ಸದ್ಯಕ್ಕೆ ರಸ್ತೆ ವಿಸ್ತರಣೆ ಮಾಡದಿರಲು ಪಾಲಿಕೆ ನಿರ್ಧರಿಸಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ, ‘ನೂತನ ಸಮಗ್ರ ಯೋಜನಾ ವರದಿ (ಸಿಡಿಪಿ) ಪ್ರಕಾರ ರಸ್ತೆ ವಿಸ್ತರಣೆಗಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕಾದರೆ ಪರಿಹಾರ ನೀಡಲು ₹ 170 ಕೋಟಿ ಬೇಕಾಗುತ್ತದೆ. ಅಷ್ಟೊಂದು ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೇ, ಈಗಾಗಲೇ 60 ಅಡಿ ರಸ್ತೆ ಇರುವುದರಿಂದ ಇಲ್ಲಿನ ನಿವಾಸಿಗಳು ತಮ್ಮ ಆಸ್ತಿಯನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ’ ಎಂದರು.

ಅಂಕಿ–ಅಂಶ
₹52 ಕೋಟಿ ಹೊಸೂರು ಬಸ್‌ ನಿಲ್ದಾಣ ನಿರ್ಮಾಣ ವೆಚ್ಚ

15.16 ಎಕರೆ ನಿಲ್ದಾಣ ನಿರ್ಮಾಣ ಪ್ರದೇಶ

22 ಪ್ಲಾಟ್‌ಫಾರಂಗಳು

60 ಅಡಿ ಪ್ರಸ್ತುತ ರಸ್ತೆಯ ವಿಸ್ತೀರ್ಣ

* * 

ಬರುವ–ಹೋಗುವ ಬಸ್‌ಗಳು ಹೊಸೂರು ವಿಕಾಸ ನಗರ ಜಂಕ್ಷನ್‌ಗೇ ಹೋಗಬೇಕು. ಮೊದಲೇ ವಾಹನ ದಟ್ಟಣೆ ಎದುರಿಸುತ್ತಿರುವ ಈ ವೃತ್ತಕ್ಕೆ ಇನ್ನಷ್ಟು ಹೊರೆ ಬೀಳಲಿದೆ.
ಡಾ. ಎಂ.ಸಿ. ಸಿಂಧೂರ
ತಿಮ್ಮಸಾಗರ ಗುಡಿ ರಸ್ತೆ ನಿವಾಸಿ

* * 

ಬೆಳಗಾವಿ, ಗದಗ, ವಿಜಯಪುರ ಮತ್ತಿತರ ರೂಟ್‌ ಬಸ್‌ಗಳ ಸಂಚಾರ ಇಲ್ಲಿಂದಲೇ ಆರಂಭವಾಗುತ್ತದೆ. ಸರಾಸರಿ 1000 ಬಸ್‌ಗಳು ಬಂದು ಹೋಗಲಿವೆ
ವಿವೇಕಾನಂದ ವಿಶ್ವಜ್ಞ, ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.