ADVERTISEMENT

ಉತ್ತರ ಪತ್ರಿಕೆ ಹಗರಣ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:16 IST
Last Updated 17 ಡಿಸೆಂಬರ್ 2012, 6:16 IST

ಧಾರವಾಡ: ಪರೀಕ್ಷಾ ಸಮಯ ಮುಗಿದ ಬಳಿಕವೂ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಂದ ಬರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆಯ ಪೊಲೀಸರು ಕರ್ನಾಟಕ ವಿ.ವಿ.ಯ ಪರೀಕ್ಷಾ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಿ.ಕಾಂ. ತೃತೀಯ ಸೆಮಿಸ್ಟರ್‌ನ ಕೆಲ ವಿದ್ಯಾರ್ಥಿ ಗಳಿಂದ ತಲಾ 10 ಸಾವಿರ ರೂಪಾಯಿಗಳನ್ನು ಪಡೆದು ಉತ್ತರ ಪತ್ರಿಕೆಗಳನ್ನು ನೀಡುತ್ತಿದ್ದ ಪ್ರಕರಣ, ಶನಿವಾರ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ ಇಡೀ ವಿ.ವಿ.ಯೇ ಬೆಚ್ಚಿ ಬಿದ್ದಿತ್ತು.

ಅಕಾಡೆಮಿಕ್ ಕೌನ್ಸಿಲ್ ಸಭೆ ನಡೆಯುತ್ತಿದ್ದ ವೇಳೆಯಲ್ಲಿಯೇ ಈ ಪ್ರಕರಣದ ಮಾಹಿತಿ ಪಡೆದ ಕುಲಪತಿಗಳು ಸೂಕ್ತ ನಿರ್ಣಯ ಕೈಗೊಳ್ಳುವಂತೆ ಮೌಲ್ಯಮಾಪನ ಕುಲಸಚಿವ ಡಾ.ಕೆ.ಆರ್.ದುರ್ಗಾದಾಸ್ ಅವರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಶನಿವಾರ ಸಂಜೆಯೇ ದುರ್ಗಾದಾಸ್, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಮನವಿ ಮಾಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪರೀಕ್ಷಾ ವಿಭಾಗದ ಡಿಕೋಡಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಸಿಬ್ಬಂದಿ ಬಸವನಗರದ ಪ್ರದೀಪ ಹಾಗೂ ಶ್ರೀನಗರದ ಸಂದೀಪ್ ಅಂಗಡಿಯನ್ನು ಬಂಧಿಸಿದರು. ಇವರ ಮೇಲೆ 420 ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಇನ್ನೂ ಹಲವರಿಗಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿ.ಎಸ್ಸಿ. ಹಾಗೂ ಬಿ.ಕಾಂ. ಪರೀಕ್ಷೆಯ ನಂತರ ಮೌಲ್ಯಮಾಪನವಾಗುವ ಮುನ್ನವೇ ವಿದ್ಯಾರ್ಥಿಗಳ ಮನೆಗೆ ಉತ್ತರ ಪತ್ರಿಕೆಗಳೇ ಹೋಗಿ ಬಂದಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ಪ್ರಕರಣವು ಇನ್ನೂ ಹಲವು ಹಿರಿ ತಲೆಗಳನ್ನು ಬಲಿಪಡೆಯಬಹುದು ಶಂಕಿಸಲಾಗುತ್ತಿದೆ.

ಈ ಸಂಬಂಧ `ಪ್ರಜಾವಾಣಿ'ಯೊಂದಿಗೆ ಮಾತನಾ ಡಿದ ಡಾ.ದುರ್ಗಾದಾಸ್, `ದುಡ್ಡಿಗಾಗಿ ಉತ್ತರ ಪತ್ರಿಕೆಯನ್ನೇ ಹೊರತಂದು ಬರೆಸುವುದನ್ನು ಕುಲಪತಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಎರಡು ದಿನಗಳಲ್ಲಿ ಅವರೊಂದಿಗೆ ಮತ್ತೆ ವಿವರವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.