ADVERTISEMENT

ಉದ್ಯಮಕ್ಕೆ ಉತ್ತೇಜನವಿಲ್ಲ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 8:55 IST
Last Updated 17 ಮಾರ್ಚ್ 2012, 8:55 IST

ಕೇಂದ್ರ ಅರ್ಥ ಸಚಿವ ಪ್ರಣವ್ ಮುಖರ್ಜಿ ಶುಕ್ರವಾರ ಮಂಡಿಸಿದ ಬಜೆಟ್ ಉದ್ದಿಮೆದಾರರ ಪಾಲಿಗೆ ಯಾವುದೇ ರೀತಿಯಲ್ಲಿ ಉತ್ತೇಜನಕಾರಿಯಾಗಿಲ್ಲ. ಸೇವಾ ತೆರಿಗೆಯನ್ನು ಶೇ 10ರಿಂದ 12ಕ್ಕೆ ಏರಿಸಿದ್ದು ಜನಸಾಮಾನ್ಯರ ಮೇಲೆ ಹೊರೆಯಾಗುತ್ತದೆ. ಆದಾಯಕರ ಪರಿಹಾರದ ದೃಷ್ಟಿಯಿಂದಲೂ ಬಜೆಟ್ ನಿರಾಶೆಗೊಳಿಸಿದೆ. ಚಿಕ್ಕ ಕೈಗಾರಿಕೆಗಳಿಗೆ ಅಬಕಾರಿ ಸುಂಕ ವಿನಾಯಿತಿ ಮಿತಿ ಹೆಚ್ಚಳವಾಗಿಲ್ಲ. ವಿದ್ಯುತ್ ವಲಯಕ್ಕೆ ತೆರಿಗೆಮುಕ್ತ ಬಾಂಡ್‌ಗೆ ನಿರ್ಧರಿಸಿದ್ದು, ಕಲ್ಲಿದ್ದಲು ಮೇಲಿನ ತೆರಿಗೆಗೆ ವಿನಾಯಿತಿ ಘೋಷಿಸಿದ್ದು ಸ್ವಾಗತಾರ್ಹ. ವಿಮಾನ ಉದ್ಯಮ ಚೇತರಿಕೆಗೂ ಅವಕಾಶ ಕಲ್ಪಿಸಲಾಗಿದೆ. ಪ್ಯಾಕ್ ಮಾಡಿದ ಸಿಮೆಂಟ್‌ಗೆ ಸುಂಕದ ಪರಿಹಾರ ಒದಗಿಸಿದ್ದು ಒಳ್ಳೆಯ ಬೆಳವಣಿಗೆ. ಕಪ್ಪು ಹಣ ಹೊರತೆಗೆಯಲು ಶ್ವೇತಪತ್ರ ಮಂಡಿಸುವ ನಿರ್ಧಾರವೂ ಮೆಚ್ಚುವಂತಹದ್ದು. ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ರೂ 50 ಕೋಟಿ ಪ್ರೋತ್ಸಾಹ ಧನ ನೀಡಿದ್ದು ಖುಷಿ ತಂದಿದೆ. ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸುವ ನಿರ್ಧಾರವೂ ಸದುದ್ದೇಶದಿಂದ ಕೂಡಿದೆ.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ.ಜವಳಿ, ಉಪಾಧ್ಯಕ್ಷರಾದ ವಸಂತ ಲದ್ವಾ, ಅಂದಾನಪ್ಪ ಸಜ್ಜನರ, ಮಹೇಂದ್ರ ಲದ್ದಡ, ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ, ಜೊತೆ ಕಾರ್ಯದರ್ಶಿ ಸಿ.ಎನ್. ಕರಿಕಟ್ಟಿ

ಹಣದುಬ್ಬರದ ಭೀತಿ
ಕೃಷಿ ಸಬ್ಸಿಡಿ ಹಣವನ್ನು ರೈತರು ಹಾಗೂ ಎಲ್‌ಪಿಜಿ-ಸೀಮೆಎಣ್ಣೆ ಸಬ್ಸಿಡಿಯನ್ನು ಗ್ರಾಹಕರ ಖಾತೆಗಳಿಗೆ ನೇರವಾಗಿ ತುಂಬುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಮಾಡಲಾಗಿದ್ದು, ಸಬ್ಸಿಡಿ ದುರುಪಯೋಗ ತಡೆಯುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿಮಾನಯಾನ ಉದ್ಯಮದಲ್ಲಿ ಶೇ 49ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಒದಗಿಸಿಕೊಟ್ಟಿದ್ದು, ಈ ಉದ್ಯಮದ ಬೆಳವಣಿಗೆಗೆ ಪೂರಕವಾಗಿದೆ.

ವಿದ್ಯುಚ್ಛಕ್ತಿ ಉತ್ಪಾದನೆಗೆ ತೆರಿಗೆ ಮುಕ್ತ ರೂ ಹತ್ತು ಸಾವಿರ ಮೊತ್ತದ ಬಾಂಡ್ ಬಿಡುಗಡೆ ಮಾಡುವ ಉದ್ದೇಶ ಹೊಂದಿರುವುದೂ ಉತ್ತೇಜನಕಾರಿಯಾಗಿದೆ. ಗ್ರಾಮೀಣ ಬ್ಯಾಂಕ್‌ಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ನಬಾರ್ಡ್‌ಗೆ ರೂ ಹತ್ತು ಸಾವಿರ ಕೋಟಿ ನೀಡಿರುವುದು ಒಳ್ಳೆಯ ಬೆಳವಣಿಗೆ. ಕಿಸಾನ್ ಕಾರ್ಡ್‌ಗಳನ್ನು ಎಟಿಎಂಗಳಲ್ಲಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಿದಂತಾಗಿದೆ.

ನೇರ ತೆರಿಗೆ ನಿಯಮಾವಳಿ ಅನುಷ್ಠಾನ ಮತ್ತೆ ಮುಂದಕ್ಕೆ ಹೋಗಿದ್ದು ದುರದೃಷ್ಟಕರ. ಬೆಲೆ ಏರಿಕೆ ಇನ್ನಷ್ಟು ಹೆಚ್ಚುವ ಭೀತಿ ಇದ್ದೇ ಇದೆ. ಹಲವು ಯೋಜನೆಗಳಿಗೆ ಒದಗಿಸಿದ ಹಣ ದುರುಪಯೋಗವಾಗುವ ಸಾಧ್ಯತೆ ಇದೆ. ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವಂತಹ ಯಾವುದೇ ಪ್ರಸ್ತಾವವನ್ನು ಬಜೆಟ್ ಒಳಗೊಂಡಿಲ್ಲ. ರಾಜಕೀಯಪ್ರೇರಿತ ಕತ್ತಿ ಅಲಗಿನ ಮೇಲೆ ನಡೆಯುವ ಸರ್ಕಸ್‌ಅನ್ನು ಸಚಿವರು ಮಾಡಿದ್ದು, ಆರ್ಥಿಕ ವ್ಯವಸ್ಥೆಗೆ ಉತ್ತೇಜನ ಕೊಡುವಂತಹ ಕೆಲಸ ಆಗಿಲ್ಲ. ಹಣದುಬ್ಬರಕ್ಕೂ ಬಜೆಟ್ ದಾರಿಮಾಡಿಕೊಡುವ ಭೀತಿ ಇದೆ.
ಎಸ್.ಬಿ. ಶೆಟ್ಟಿ, ಲೆಕ್ಕ ಪರಿಶೋಧಕ

ಜನಸಾಮಾನ್ಯರಿಗೆ ನಿರಾಸೆ
ಈ ಬಾರಿಯ ಬಜೆಟ್, ಕೈಗಾರಿಕಾ ವಲಯಕ್ಕೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ನಿರಾಸೆ ಉಂಟುಮಾಡಿದೆ. ಆದಾಯ ತೆರಿಗೆ ಮಿತಿಯಲ್ಲಿ ಸ್ವಲ್ಪ ಹೆಚ್ಚಳ ಮಾಡಿದ್ದು ಉದ್ಯೋಗಸ್ಥ ಜನರಿಗೆ ಅಲ್ಪ ಸಮಾಧಾನ ತಂದಿದ್ದು ಸಂಪನ್ಮೂಲಗಳ ಅಭಿವೃದ್ಧಿಗಾಗಿ ಕೈಗೊಂಡಿರುವ ವಿಧಾನಗಳು ಶ್ಲಾಘನೀಯ. ಜಿ.ಎಸ್.ಟಿ ನೆಟ್‌ವರ್ಕಿಂಗ್ ಮಾಡುವುದಕ್ಕೆ ಸಂಬಂಧಿಸಿದ ಘೋಷಣೆ ಹಾಗೂ ವಿದೇಶಿ ನೇರ ಬಂಡವಾಳಕ್ಕೆ ವಾಯುಯಾನವನ್ನು ಅಳವಡಿಸುವ ನಿರ್ಧಾರ ಒಳ್ಳೆಯದು.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಘಟಕದ ಅಧ್ಯಕ್ಷ ಸುರೇಶ ಚೆನ್ನಿ, ಕಾರ್ಯದರ್ಶಿ ಹಿತೇಶ್ ಮೋದಿ ಸದಸ್ಯರಾದ ಎಸ್.ಆರ್.ಬಂಡಿವಾಡ, ಶೇಷಗಿರಿ ಕುಲಕರ್ಣಿ, ಎನ್.ಎ. ಚರಂತಿಮಠ, ಎಂ.ಬಿ. ನಟರಾಜ, ಸಿ.ಆರ್.ಧವಳಗಿ

ನೌಕರ ವರ್ಗಕ್ಕೆ ನಿರಾಸೆ
ತೆರಿಗೆ ವಿನಾಯಿತಿ ಮೊತ್ತವನ್ನು ಕೇವಲ ರೂ 20 ಸಾವಿರದಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ನೌಕರ ವರ್ಗಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಆದಾಯ ತೆರಿಗೆ ವಿನಾಯಿತಿಯನ್ನು ಕನಿಷ್ಠ ರೂ ಮೂರು ಲಕ್ಷಕ್ಕೆ ಹೆಚ್ಚಿಸುತ್ತಾರೆ ಎಂಬ ನಿರೀಕ್ಷೆ ಬಲವಾಗಿತ್ತು. ಎಲ್ಲರ ನಿರೀಕ್ಷೆಯನ್ನೂ ಸಚಿವರು ಹುಸಿಗೊಳಿಸಿದ್ದಾರೆ. ಬೆಲೆ ಏರಿಕೆ ತಡೆಗೂ ಯಾವುದೇ ನಿಶ್ಚಿತ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ನೌಕರರಿಗೆ ನಿರಾಸೆಯೇ ಗತಿಯಾಗಿದೆ.
ಪ್ರೊ.ಆನಂದ ಮುಳಗುಂದ, ಪ್ರಾಚಾರ್ಯರು, ಜೆ.ಜಿ. ಕಾಮರ್ಸ್ ಕಾಲೇಜು

ಕೃಷಿಗೆ ಮಹತ್ವ ಸಿಕ್ಕಿದೆ
ಉದ್ಯೋಗಿಗಳಿಗೆ ಸ್ವಲ್ಪವಾದರೂ ವಿನಾಯಿತಿ ಸಿಕ್ಕಿದೆ. ಕೃಷಿಗೆ ಮಹತ್ವ ಸಿಕ್ಕಿದೆ. ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗುವುದು ಮುಖ್ಯ. ಚಾಚೂತಪ್ಪದೆ ಅನುಷ್ಠಾನಕ್ಕೆ ಬರುವುದು ತೆರಿಗೆ ಸಂಗ್ರಹ ಒಂದೇ. ಬೆಲೆ ಏರಿಕೆಯಿಂದ ಬಸವಳಿದ ನಾವು ಆರ್ಥಿಕ ಸುಧಾರಣೆಗಳ ಮೂಲಕ ಒಂದಿಷ್ಟಾದರೂ ನಿಟ್ಟುಸಿರು ಬಿಡುವಂತಹ ಯೋಜನೆಗಳನ್ನು ಸಚಿವರು ಹಾಕಿಕೊಳ್ಳಬೇಕಿತ್ತು.
ಸತೀಶ್ಚಂದ್ರ ಶೆಟ್ಟಿ, ಖಾಸಗಿ ಉದ್ಯೋಗಿ

ಹಳೆಯದನ್ನೇ ಹಿಂಜಿದ್ದಾರೆ
ಜನರ ಅಪೇಕ್ಷೆ ಬಹಳ ಇತ್ತು. ಅರ್ಧದಷ್ಟೂ ಈಡೇರಿಲ್ಲ. ಸಾಮಾನ್ಯರಿಗೆ ತೆರಿಗೆ ಭಾರ ಹೇರಿದ್ದರೆ, ಕಷ್ಟದಲ್ಲಿರುವ ಉದ್ಯಮಕ್ಕೆ ಮರುಚೇತನ ನೀಡುವಂತಹ ಕೆಲಸವೂ ಆಗಿಲ್ಲ. ಯುವಕರನ್ನು ಉದ್ಯಮ ರಂಗಕ್ಕೆ ಆಕರ್ಷಿಸುವಂತಹ ಯಾವುದೇ ಕ್ರಮ ಬಜೆಟ್‌ನಲ್ಲಿ ಇಲ್ಲ. ಹಳೆಯದನ್ನೇ ಹಿಂಜಿದ್ದಾರೆಯೇ ಹೊರತು ಹೊಸದೇನಿಲ್ಲ. ಶಿಕ್ಷಣ ರಂಗವನ್ನೂ ಕಡೆಗಣಿಸಲಾಗಿದೆ. ಬಜೆಟ್ ನಿರಾಸೆ ತಂದಿದೆ.
ಶಂಕರಣ್ಣ ಮುನವಳ್ಳಿ, ಉದ್ಯಮಿ

ಉಳಿತಾಯಕ್ಕೆ ಉತ್ತೇಜನವಿಲ್ಲ
ಆದಾಯ ತೆರಿಗೆ ವಿನಾಯಿತಿ ನಿರೀಕ್ಷೆ ಹುಸಿಯಾಗಿದೆ. 20 ಸಾವಿರ ಹೆಚ್ಚಳದಿಂದ ಏನೂ ಪ್ರಯೋಜನ ಇಲ್ಲ. 80 (ಸಿ) ತೆರಿಗೆ ವಿನಾಯಿತಿ ಮಿತಿಯನ್ನು ಮೂರು ಲಕ್ಷಕ್ಕೆ ಹೆಚ್ಚಿಸುತ್ತಾರೆ ಎಂಬ ಭರವಸೆಯೂ ಹುಸಿಯಾಗಿದೆ. ಹಾಗೆ ಮಾಡಿದ್ದರೆ ಒಂದೆಡೆ ಉಳಿತಾಯಕ್ಕೆ ಉತ್ತೇಜನ ಸಿಗುತ್ತಿತ್ತು. ಇನ್ನೊಂದೆಡೆ ಸರ್ಕಾರಕ್ಕೂ ಬಂಡವಾಳ ಹರಿದುಬರುತ್ತಿತ್ತು. ಜನಸಾಮಾನ್ಯರಿಗೂ ತೆರಿಗೆಯಿಂದ ಒಂದಿಷ್ಟು ರಿಯಾಯಿತಿ ಸಿಗುತ್ತಿತ್ತು. ಬಜೆಟ್‌ನಲ್ಲಿ ಈ ಕುರಿತು ಯಾವುದೇ ಕೆಲಸ ಆಗಿಲ್ಲ.
ಸುನಿಲ್ ಕಾಮತ್, ಸರ್ಕಾರಿ ನೌಕರ

ಮಾತು ಕೃತಿಗೆ ಇಳಿದಿಲ್ಲ
ಮಹಿಳೆಯರಿಗೆ ಈ ಸಲದ ಬಜೆಟ್ ಏನನ್ನೂ ಕೊಟ್ಟಿಲ್ಲ. ಮಹಿಳಾ ಸಮುದಾಯಕ್ಕೆ ಆದಾಯ ತೆರಿಗೆ ಮಿತಿಯನ್ನು ಐದು ಲಕ್ಷಕ್ಕೆ ಹೆಚ್ಚಿಸಬೇಕಿತ್ತು. ಟಿವಿ-ಫ್ರಿಜ್‌ನಂತಹ ಸರಕುಗಳು ಈಗ ಐಷಾರಾಮಿಯಾಗಿ ಉಳಿಯದೆ ಬದುಕಿನ ಅಗತ್ಯಗಳಾಗಿವೆ. ಜೋಪಡಿಗೆ ಹೋದರೂ ಟಿವಿ ಇರುತ್ತದೆ. ಜನಸಾಮಾನ್ಯರಿಗೆ ಬೇಕಾದ ಇಂತಹ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹಾಕಬಾರದಿತ್ತು. ಬಡವರು ಮತ್ತು ಮಹಿಳೆಯರ ಬಗೆಗೆ ಕಾಳಜಿ ಮಾತುಗಳನ್ನು ಆಡುತ್ತಾರೆ. ಆದರೆ, ಮಾತು ಕೃತಿ ರೂಪಕ್ಕೆ ಇಳಿಯುವುದಿಲ್ಲ. ಬಜೆಟ್‌ನ ಹೊಡೆತ ಮೇಲ್ದರ್ಜೆ ಕುಟುಂಬಗಳಿಗೂ ಬೀಳುವುದಿಲ್ಲ. ಬಡತನ ರೇಖೆಗಿಂತ ಕೆಳಗಿರುವವರಿಗೂ ಅದರ ಬಿಸಿ ತಾಗುವುದಿಲ್ಲ. ಮಧ್ಯಮ ವರ್ಗದವರೇ ಅದರ ಫಲ ಉಣ್ಣಬೇಕಿದೆ.
ರಾಧಾ ಜಿ. ಭಟ್, ಗೃಹಿಣಿ

ಬೆಲೆ ಏರಿಕೆಗೆ ದಾರಿ
ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹದ್ದು ಏನಿಲ್ಲ. ಸೇವಾ ತೆರಿಗೆ ಹೆಚ್ಚಿಸಿದ್ದು ನೋವುಂಟು ಮಾಡಿದೆ. ಆದಾಯ ತೆರಿಗೆ ಸ್ಲ್ಯಾಬ್‌ನಲ್ಲೂ ಅಂತಹ ಬದಲಾವಣೆ ಏನೂ ಆಗಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಪೂರಕವಾಗಿ ಬಜೆಟ್ ಕೆಲಸ ಮಾಡಿದೆ. ಕೃಷಿ ವಿವಿಗೆ ರೂ 50 ಕೋಟಿ ಸಿಕ್ಕಿದ್ದು ಖುಷಿ ತಂದಿದೆ. ಆ ಹಣದ ಸದುಪಯೋಗ ಆಗುವಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು. ಸೇವಾ ತೆರಿಗೆಯನ್ನು ಶೇ 10ರಿಂದ ಶೇ 12ಕ್ಕೆ  ಹೆಚ್ಚಿಸಿರುವುದರಿಂದ ಜನಸಾಮಾನ್ಯರಿಗೆ  ಹೊರೆಯಾಗುವುದು ನಿಶ್ಚಿತ.
ಡಾ.ಎಂ.ಸಿ. ಸಿಂಧೂರ, ವೈದ್ಯರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.