ADVERTISEMENT

ಉಳುಕಿದ ಕಾಲಲ್ಲೇ ಊರು ಸುತ್ತಿದ ಅಬ್ಬಯ್ಯ

ಕಾಂಗ್ರೆಸ್‌ ಅಭ್ಯರ್ಥಿ ಪ್ರಚಾರದ ಅಬ್ಬರ

ಬಸವರಾಜ ಸಂಪಳ್ಳಿ
Published 5 ಮೇ 2018, 11:18 IST
Last Updated 5 ಮೇ 2018, 11:18 IST

ಹುಬ್ಬಳ್ಳಿ: ಚುನಾವಣೆ ಪ್ರಚಾರ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಉಳುಕಿಸಿಕೊಂಡಿರುವ ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಅವರು, ವಿಶ್ರಾಂತಿ ಪಡೆಯುವಂತೆ ವೈದ್ಯರು ನೀಡಿದ ಸಲಹೆಯ ನಡುವೆಯೂ ಬಿಡುವಿಲ್ಲದ ಪ್ರಚಾರ ನಡೆಸುತ್ತಿದ್ದಾರೆ.

ಪ್ರಚಾರಕ್ಕೆ ಕೇವಲ ಒಂದು ವಾರ ಬಾಕಿ ಇರುವುದರಿಂದ ವಿಶ್ರಾಂತಿ ತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ. ಎಡಗಾಲಲ್ಲಿ ನೋವಿದ್ದರೂ ಲೆಕ್ಕಿಸದೇ ಚುನಾವಣಾ ಕಾರ್ಯದಲ್ಲಿ ನಿರತವಾಗಿರುವ ಅವರೊಂದಿಗೆ ಶುಕ್ರವಾರ ‘ಪ್ರಜಾವಾಣಿ’ ಸುತ್ತಾಡಿದಾಗ ಕಂಡು ಬಂದ ಅವರ ದಿನಚರಿ ಇಂತಿದೆ.

ಎಂದಿನಂತೆ ದಿನಪತ್ರಿಕೆಗಳ ಮೇಲೆ ಕ್ಷಣಹೊತ್ತು ಕಣ್ಣಾಡಿಸಿದ ಅಬ್ಬಯ್ಯ, ಬೆಳಂಬೆಳಿಗ್ಗೆಯೇ ಮನೆಗೆ ಬಂದಿದ್ದ ಕಾರ್ಯಕರ್ತರು, ಮುಖಂಡರು, ಸ್ನೇಹಿತರೊಂದಿಗೆ ಆ ದಿನದ ಚುನಾವಣಾ ಕಾರ್ಯಕ್ರಮಗಳ ತಯಾರಿಯನ್ನು ವಿಚಾರಿಸಿದರು.

ADVERTISEMENT

ಬಳಿಕ ಮನೆ ಮುಂಭಾಗದ ವರಾಂಡದಲ್ಲಿ ತಮಗಾಗಿ ಕಾದುಕುಳಿತಿದ್ದ ಕ್ಷೇತ್ರದ ಜನರನ್ನು ಭೇಟಿಯಾಗಿ ಅವರ ಅಹವಾಲು ಆಲಿಸಿದರು.

ಗಂಗಾಧರ ನಗರದ ಸೆಟ್ಲಮೆಂಟ್‌ನಿಂದ ಬಂದಿದ್ದ ಶಂಕ್ರಮ್ಮ ಜಾಧವ, ಹೃದ್ರೋಗದಿಂದ ಬಳಲುತ್ತಿರುವ ತನ್ನ ಮೂರು ವರ್ಷದ ಮಗ ರೋಹನ್‌ ಜಾಧವನನ್ನು ತೋರಿಸಿ, ‘ಈಗಾಗಲೇ ಇವನಿಗೆ ಒಮ್ಮೆ ಹಾರ್ಟ್‌ ಆಪರೇಷನ್‌ ಆಗಿದೆ. ಇದೀಗ ಮತ್ತೊಂದು ಆಪರೇಷನ್‌ ಮಾಡಿಸಬೇಕಿದೆ. ಮುಂದಿನ ವಾರ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಬೇಕಾಗಿದೆ. ನನಗೆ ಏನಾದರೂ ಸಹಾಯ ಮಾಡಿ’ ಎಂದು ಶಾಸಕರ ಬಳಿ ಕಣ್ಣೀರಿಟ್ಟಳು.

ಮಗುವನ್ನು ನೋಡಿದ ಅಬ್ಬಯ್ಯ ಒಂದಷ್ಟು ಹಣವನ್ನು ಆಕೆಯ ಕೈಯಲ್ಲಿಟ್ಟು ‘ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬನ್ನಿ, ಅಲ್ಲಿನ ವೈದ್ಯರಿಗೆ ಮಾತನಾಡುತ್ತೇನೆ’ ಎಂದು ಹೇಳಿ ಧೈರ್ಯ ತುಂಬಿ ಕಳುಹಿಸಿಕೊಟ್ಟರು.

ಮೇದಾರ ಸಮಾಜದ ಮುಖಂಡರು ಸಮಾಜದ ಪರವಾಗಿ ತಾವೇ ಮಾಡಿಕೊಂಡು ಬಂದಿದ್ದ ಪ್ರಚಾರ ಕರಪತ್ರವನ್ನು ತೋರಿಸಿದರು. ‘ಸಮಾಜಕ್ಕೆ ಅಬ್ಬಯ್ಯ ಅವರಿಂದ ಸಹಾಯವಾಗಿದ್ದನ್ನು ನೆನೆದ ಅವರು, ಸಮಾಜಕ್ಕೆ ಇನ್ನಷ್ಟು ಸೌಲಭ್ಯ ಒದಗಿಸಬೇಕು’ ಎಂದು ಮುಖಂಡರಾದ ಶಂಕರ ಮಿಶ್ರಿಕೋಟಿ ಮನವಿ ಮಾಡಿದರು.

‘ಮೇದಾರ ಸಮಾಜದ ಬೇಡಿಕೆಗಳಿಗೆ ಮುಂದೆಯೂ ಸ್ಪಂದಿಸುತ್ತೇನೆ. ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ’ ಎಂದರು.

ಅಷ್ಟರಲ್ಲೇ ಅಬ್ಬಯ್ಯ ಪುತ್ರ ಗೌತಮ, ಪುತ್ರಿ ಆಕಾಂಕ್ಷಾ ‘ಚಪಾತಿ ತಿನ್ನಲು ಅಮ್ಮ ಕರೆಯುತ್ತಿದ್ದಾರೆ ಬನ್ನಿ’ ಎಂದು ಕರೆದುಕೊಂಡು ಹೋದರು. ಪತ್ನಿ ವೃಂದಾ ಅವರು ಬಡಿಸಿದ ಕಾಳು ಪಲ್ಲೆ, ಚಪಾತಿ ತಿಂದು, ಒಂದು ಲೋಟ ಜ್ಯೂಸ್‌ ಕುಡಿದು ಹೊರಬಂದರು.

ಅಷ್ಟೊತ್ತಿಗೆ, ಅವರ ಕಾಲೇಜು ಗೆಳೆಯ, ಕೆನಡಾದ ಟೊರೆಂಟೊದಲ್ಲಿ ನೆಲೆಸಿರುವ ಸರಾಫ್‌ಕಟ್ಟಿಯ ಮುಕಂದ ಮತ್ತು ಸ್ಮಿತಾ ದಂಪತಿ ಮನೆಗೆ ಆಗಮಿಸಿದರು. ಖುಷಿಯಿಂದ ಅವರನ್ನು ಸ್ವಾಗತಿಸಿ, ಕುಶಲೋಪರಿ ವಿಚಾರಿಸಿದರು. ‘ಚುನಾವಣೆಗೆ ಆಲ್‌ ದಿ ಬೆಸ್ಟ್‌’ ಎಂದು ಶುಭ ಕೋರಿದ ಅವರು, ಸಹೋದರನ ಮದುವೆಗೆ ಬರುವಂತೆ ಸ್ಮಿತಾ ಕರೆಯೋಲೆ ನೀಡಿದರು.

ಪ್ರಚಾರಕ್ಕೆ ಹೊರಡಲು ಅಣಿಯಾದ ಪ್ರಸಾದ ಅವರ ಉಳುಕಿದ ಕಾಲಿಗೆ ಅವರ ಸಹೋದರ ಕೇಶವ ಅಬ್ಬಯ್ಯ ಬ್ಯಾಂಡೇಜ್‌ ಸುತ್ತಿದರು. ಬಳಿಕ ತಾಯಿಯ ಕಾಲಿಗೆ ನಮಸ್ಕರಿಸಿ ಕಾರನ್ನೇರಿ ನೇರವಾಗಿ ಪ್ರಚಾರಕ್ಕೆ ತೆರಳಿದರು.

ಅರಳಿಕಟ್ಟಿ ಕಾಲೊನಿ, ಬುದ್ಧ ವಿಹಾರ ಮಾರ್ಗ, ಗುಡ್ ಶೆಡ್ ರಸ್ತೆ , ವಲ್ಲಭಭಾಯ್‌ ನಗರ, ದರ್ವೇಶ ನಗರ, ಹರಿಶ್ಚಂದ್ರ ಕಾಲೊನಿ, ಅರಳಿಕಟ್ಟಿ ಕಾಲೊನಿ, ಕುಲಕರ್ಣಿ ಹಕ್ಕಲ, ಶಂಕರ ಚಾಳ, ರಾಜಗೋಪಾಲ ಪ್ರದೇಶಗಳ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಮಂಟೂರು ರಸ್ತೆಯಲ್ಲಿರುವ ಕ್ರೈಸ್ತ ಸಹೋದರರ ಪ್ರಾರ್ಥನಾ ಮಂದಿರಕ್ಕೆ ತೆರಳಿ, ಧರ್ಮಗುರು ನೆರೆಲ್ಲಾ ಸೊಲ್ಮನ್‌ ಅವರ ಆಶೀರ್ವಾದ ಪಡೆದರು. ಬಳಿಕ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ, ವಿಶ್ರಾಂತಿ ಪಡೆದರು. ಸಂಜೆ 4ಕ್ಕೆ ವಿವಿಧ ಸಮಾಜದ ಮುಖಂಡರನ್ನು ಭೇಟಿ ಮಾಡಿದರು. ಪಕ್ಷದ ಮುಖಂಡ ರೊಂದಿಗೆ ಚರ್ಚಿಸಿದರು. ರಾತ್ರಿ 12 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.