ADVERTISEMENT

ಊರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 8:25 IST
Last Updated 1 ಜೂನ್ 2011, 8:25 IST
ಊರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಊರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ   

ಹುಬ್ಬಳ್ಳಿ:ಜನರು ಊರ ಕೆರೆ ಎಂದೇ ಕರೆಯುವ, ದಶಕಗಳಷ್ಟು ಹಳೆಯ ಭೈರಿದೇವರಕೊಪ್ಪದ ಕೆರೆ ಅಭಿವೃದ್ಧಿ ಕಾಮಗಾರಿ ಮಂಗಳವಾರ ಆರಂಭಗೊಂಡಿತು.

37 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಗದೀಶ ಶೆಟ್ಟರ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯ ಕೆರೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 35 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ತಲಾ ಐದು ಕೋಟಿ ರೂಪಾಯಿ ಮಂಜೂರಾಗಿದೆ. ಈ ಹಣದಲ್ಲಿ ಒಟ್ಟು 115 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು 99 ಕೆರೆಗಳ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.

ಭೈರಿದೇವರಕೊಪ್ಪ ಕೆರೆ ಮೂರೂವರೆ ಎಕರೆ ವಿಸ್ತೀರ್ಣವಿದ್ದು ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕದ ಬಳಿ ಕೆರೆಯನ್ನು ಅಭಿವೃದ್ಧಿಪಡಿಲಾಗುವುದು ಎಂದು ತಿಳಿಸಿದ ಸಚಿವರು, ಧಾರವಾಡದ `ಬಾರೋ ಸಾಧನಕೇರಿಗೆ~ ಉದ್ಯಾನದಲ್ಲಿ ಮಾಡಿದಂತೆ ಉಣಕಲ್ ಹಾಗೂ ಇಂದಿರಾ ಗಾಜಿನ ಮನೆಯಲ್ಲಿ ಸಂಗೀತ ಕಾರಂಜಿಯನ್ನು ಅಳವಡಿಸಲಾಗುವುದು, ಇಂದಿರಾ ಗಾಜಿನ ಮನೆಯಲ್ಲಿ ಮಕ್ಕಳ ಮನರಂಜನಾ ರೈಲನ್ನು ಶೀಘ್ರ ಉದ್ಘಾಟಿಸಲಾಗುವುದು ಎಂದು ವಿವರಿಸಿದರು.

ಕನ್ನಡ ಭವನದ ಅಭಿವೃದ್ಧಿ ಕಾಮಗಾರಿ ವಿಳಂಬವಾಗಲು ಗುತ್ತಿಗೆದಾರರು ಕಾರಣ. ಹೀಗಾಗಿ ಅವರಿಗೆ ಹಣವನ್ನು ನೀಡಲಿಲ್ಲ. ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾಧಿಕಾರಿ ದರ್ಪಣ ಜೈನ್, ತಹಸೀಲ್ದಾರ ಎಸ್.ಎಸ್. ಬಿರಾದಾರ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎ. ವಾಲಿ ಮುಂತಾದವರು ಉಪಸ್ಥಿತಿರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.