ADVERTISEMENT

ಎಚ್‌1ಎನ್‌1 ಚಿಕಿತ್ಸೆಗೆ ವಿಶೇಷ ವಾರ್ಡ್

ಕಿಮ್ಸ್‌: ಪ್ರಯೋಗಾಲಯವೇ ಇಲ್ಲ; ಕಿಟ್‌ ಪೂರೈಕೆ ಇಂದು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2015, 6:39 IST
Last Updated 11 ಫೆಬ್ರುವರಿ 2015, 6:39 IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಇಲ್ಲಿನ ಕಿಮ್ಸ್‌ನಲ್ಲಿ ಎಚ್‌1ಎನ್1 ಸೋಂಕು ಪೀಡಿತರ ಚಿಕಿತ್ಸೆಗೆ ವಿಶೇಷ ವಾರ್ಡ್‌ ಆರಂಭಿಸಲಾಗಿದೆ. ಆದರೆ ಸುಸಜ್ಜಿತ ಪ್ರಯೋಗಾಲಯ ಇಲ್ಲದ ಕಾರಣ ರೋಗ ದೃಢೀಕರಿಸಿಕೊಂಡು ಚಿಕಿತ್ಸೆ ನೀಡಲು ವೈದ್ಯರು ವಾರಗಟ್ಟಲೇ ಕಾಯಬೇಕಿದೆ.

ವಿಜಾಪುರ, ಗದಗ, ಧಾರವಾಡ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧೆಡೆ ಎಚ್1ಎನ್‌1 ಪ್ರಕರಣಗಳು ಕಂಡುಬಂದಿದ್ದು, ಕೆಲವೆಡೆ ಜೀವ ಹಾನಿಯಾಗಿರುವುದು ಸಾರ್ವ­ಜನಿಕರ ಆತಂಕಕ್ಕೆ ಕಾರಣವಾಗಿದೆ. ಹಾಲಿ ಕಿಮ್ಸ್‌ಗೆ ಚಿಕಿತ್ಸೆಗೆ ಬರುವ ವ್ಯಕ್ತಿಗಳಲ್ಲಿ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಅಂತಹವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಬೆಂಗಳೂರು, ಹೈದರಾಬಾದ್‌ ಅಥವಾ ಮಣಿಪಾಲದ ಪ್ರಯೋಗಾಲಯಗಳಿಗೆ ಕಳುಹಿಸ­ಬೇಕಾಗಿದೆ.


ಕಿಟ್‌ ಪೂರೈಕೆ ಇಲ್ಲ: ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಬಳಸುವ ಕಿಟ್‌ನ ಪೂರೈಕೆಯೂ ಕಿಮ್ಸ್‌ನಲ್ಲಿ ಇಲ್ಲ. ಕ್ಷಿಪ್ರ ಗತಿಯಲ್ಲಿ ಸೋಂಕು ಹರಡುತ್ತಿರುವ ಕಾರಣ ಆಸ್ಪತ್ರೆಯ ಆಡಳಿತ ಕಿಟ್‌ ತರಿಸಲು ಮುಂದಾಗಿದೆ. ‘ಮುಂಬೈನಿಂದ ಕಿಟ್ ತರಿಸಲು ಕ್ರಮ ಕೈಗೊಳ್ಳ­ಲಾಗಿದ್ದು, ಬಹುಶಃ ಬುಧವಾರ ಹುಬ್ಬಳ್ಳಿಗೆ ಬರಲಿವೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಮಧ್ಯೆ ಕಿಮ್ಸ್ ನಿರ್ದೇಶಕ ಡಾ.ಎಸ್.ಎಸ್.ಬಂಟ್ ರಜೆಯಲ್ಲಿದ್ದು, ಪ್ರಾಚಾರ್ಯ ಡಾ.ಯು.ಎಸ್‌.­ಹಂಗರಗಾ ಉಸ್ತು­ವಾರಿ ನೋಡಿಕೊಳ್ಳುತ್ತಿದ್ದಾರೆ. ಡಾ.ಬಂಟ್‌ ಸೋಮ­ವಾರ ಕರ್ತವ್ಯಕ್ಕೆ ಬರಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವಿಶೇಷ ವಾರ್ಡ್‌
‘ಎಚ್‌1ಎನ್‌1 ಸೋಂಕು ಪೀಡಿತರ ಚಿಕಿತ್ಸೆಗೆ ಮೂರು ಹಾಸಿಗೆಗಳ ವಿಶೇಷ ವಾರ್ಡ್ ಆರಂಭಿಸಲಾಗಿದೆ. ರೋಗದ ಲಕ್ಷಣಗಳು ಹಾಗೂ ಚಿಕಿತ್ಸೆಯ ಬಗ್ಗೆ ಈಗಾಗಲೇ ವೈದ್ಯರು ಹಾಗೂ ಶುಶ್ರೂಷಕ ಸಿಬ್ಬಂದಿಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವಷ್ಟು ಔಷಧಿಯನ್ನು, ವೈದ್ಯರು, ಶುಶ್ರೂಷಕ ಸಿಬ್ಬಂದಿಗೆ ಮುಖಗವುಸು, ಕೈಗವುಸುಗಳನ್ನು’ ಸಂಗ್ರಹಿಸಿಡ­ಲಾಗಿದೆ ಎಂದು ಅವರು ಹೇಳುತ್ತಾರೆ.

‘ಕಿಮ್ಸ್‌ನಲ್ಲಿ ಇಲ್ಲಿಯವರೆಗೂ ಎಚ್‌1ಎನ್‌1ನ ಯಾವುದೇ ಶಂಕಿತ ಪ್ರಕರಣಗಳು ಕಂಡಬಂದಿಲ್ಲ. ಆದರೆ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿ­ಕೊಳ್ಳಲಾಗಿದೆ’  ಎಂದು ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT