ADVERTISEMENT

ಎರಡು ಬಾರಿ ಹುಡುಕಿದರೂ ಏನೂ ಸಿಗಲಿಲ್ಲ!

ಸೀರೆ ಕಂಡರೂ `ಬೇರೆಡೆ ಸಾಗಿಸಿ' ಎಂದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 6:56 IST
Last Updated 8 ಏಪ್ರಿಲ್ 2013, 6:56 IST

ಧಾರವಾಡ: ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ವಿನಯ ಕುಲಕರ್ಣಿ ಅವರ ಟೈವಾಕ್ ಕಂಪೆನಿ ಬಳಿಯ ಹಾಲಿನ ಡೇರಿ ಮೇಲೆ ಚುನಾವಣಾ ವೀಕ್ಷಕರು ಭಾನುವಾರ ಎರಡು ಬಾರಿ ದಾಳಿ ನಡೆಸಿದರೂ ಏನೂ ಸಿಗಲಿಲ್ಲ.

ಈ ಬಗ್ಗೆ ಮೊದಲು ಮಾಹಿತಿ ಪಡೆದ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಅವರು ಪಾಲಿಕೆಯ ವಲಯಾಧಿಕಾರಿ ಜಿ.ಕೆ.ಮರಳಿಹಳ್ಳಿ ನೇತೃತ್ವದ ಚುನಾವಣಾ ವಿಚಕ್ಷಕ ದಳದ ತಂಡಕ್ಕೆ ಮಾಹಿತಿ ರವಾನಿಸಿ, ತಪಾಸಣೆ ನಡೆಸುವಂತೆ ಆದೇಶಿಸಿದರು.

ಬಳಿಕ ಅಲ್ಲಿಗೆ ತೆರಳಿದ ತಂಡಕ್ಕೆ ತಪಾಸಣೆ ವೇಳೆ ಹಲವು ಸೀರೆಗಳು ಕಂಡು ಬಂದರೂ ಅವುಗಳನ್ನು ವಶಕ್ಕೆ ತೆಗೆದುಕೊಳ್ಳದೇ ಸ್ಥಳಾಂತರಿಸುವಂತೆ ಕೆಲ ಅಧಿಕಾರಿಗಳು ಸೂಚಿಸಿದರು ಎಂದು ಮೂಲಗಳು ಖಚಿತಪಡಿಸಿವೆ.

ಆ ಬಳಿಕ ಅಲ್ಲಿಂದ ಹೊರಟ ತಂಡಕ್ಕೆ ಮಾಧ್ಯಮ ಪ್ರತಿನಿಧಿಗಳು ಎದುರಾಗಿದ್ದಾರೆ. ಡೇರಿಯಿಂದ ದೂರ ಬಂದು ನಿಂತ ಮರಳಿಹಳ್ಳಿ, `ಡೇರಿಯಲ್ಲಿ ಏನೂ ಇಲ್ಲ' ಎಂದು ಹೇಳಿದರು. ಇದಾದ ಅರ್ಧ ಗಂಟೆ ಬಳಿಕ ಮತ್ತೆ ಮಾಧ್ಯಮದವರನ್ನು ಕರೆದುಕೊಂಡು ಡೇರಿಗೆ ತೆರಳಿ, ಅಲ್ಲಿ ತಪಾಸಣೆ ಮಾಡುವಂತೆ ಮಾಡಿದರು. \ನಿರೀಕ್ಷೆಯಂತೆ ಅಲ್ಲಿ ಮತದಾರರಿಗೆ ಹಂಚಲು ತಂದ ಯಾವ ವಸ್ತುಗಳೂ ದೊರೆಯಲಿಲ್ಲ!

`ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹಾಲಿನ ಡೇರಿಯ ಆವರಣದಲ್ಲಿ ಸೀರೆ ಹಂಚುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಎರಡು ಬಾರಿ ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದೆವು. ತಪಾಸಣೆ ಸಂದರ್ಭದಲ್ಲಿ ಕೆಲವು ಮಹಿಳೆಯರೂ ಇದ್ದರು. ಅವರನ್ನು ವಿಚಾರಿಸಿದಾಗ ಎಮ್ಮೆ ಖರೀದಿಗೆ ಬಂದಿದ್ದೇವೆ ಎಂದರು. ಸೋಮಾಪುರದಿಂದ ಜೀಪ್‌ನಲ್ಲಿ ಅವರನ್ನು ಕರೆತರಲಾಗಿತ್ತು. ಉಪವಿಭಾಗಾಧಿಕಾರಿ ಕರ್ಜಗಿ ಅವರು, ಅಲ್ಲಿಯೇ ನಿಂತು ಮರು ಪರಿಶೀಲನೆ ಮಾಡಲು ಹೇಳಿದ್ದರಿಂದ ಮತ್ತೊಮ್ಮೆ ತಪಾಸಣೆ ನಡೆಸಿದ್ದೇವೆ' ಎಂದು ಜಿ.ಕೆ.ಮರಳಿಹಳ್ಳಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.