ಧಾರವಾಡ: ಮೊಬೈಲ್ ಎಸ್‌ಎಂಎಸ್ ಮೂಲಕ ಕೃಷಿ ಮಾರುಕಟ್ಟೆಯಲ್ಲಿ ಉತ್ಪನ್ನಗಳ ದೈನಂದಿನ ಬೆಲೆ ಏರಿಳಿತದ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ರೈತರಿಗೆ ಪರಿಚಯಿಸಲು ಧಾರವಾಡ ಕೃಷಿ ವಿಶ್ವವಿದ್ಯಾಲಯ ಈ ಬಾರಿಯ ಕೃಷಿ ಮೇಳದಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು.
ಆಧುನಿಕ ಸಂಪರ್ಕ ವ್ಯವಸ್ಥೆ ಬಳಸಿ ರೈತರಿಗೆ ಸಹಾಯ ಮಾಡುವ ಮಹತ್ತರ ಉದ್ದೇಶ ಹೊಂದಿರುವ ಈ ಯೋಜನೆಯ ಅನುಷ್ಠಾನ ಜವಾಬ್ದಾರಿಯನ್ನು ವಿವಿಯ ಮಾರುಕಟ್ಟೆ ವಿಭಾಗಕ್ಕೆ ವಹಿಸಿಕೊಂಡಿದೆ.
ಮೇಳದ ವಸ್ತುಪ್ರದರ್ಶನದಲ್ಲಿ ಮಾರುಕಟ್ಟೆ ವಿಭಾಗದ ಮಳಿಗೆಗೆ ಭೇಟಿ ನೀಡುತ್ತಿದ್ದ ರೈತರಿಂದ ಅವರ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನೋಂದಣಿ ಮಾಡಿಸಿಕೊಳ್ಳುತ್ತಿದ್ದ ಅಲ್ಲಿನ ಸ್ವಯಂ ಸೇವಕರು ರೈತರಿಗೆ ಈ ವ್ಯವಸ್ಥೆಯ ಕುರಿತು ಮಾಹಿತಿ ನೀಡುತ್ತಿದ್ದರು.
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ದೈನಂದಿನ ವ್ಯವಹಾರದ ವೇಳೆ ಧಾನ್ಯಗಳ ಬೆಲೆಯಲ್ಲಿ ಉಂಟಾಗುವ ಏರುಪೇರಿನ ಕುರಿತು ನಿಗಾ ವಹಿಸುವ ಕೃಷಿ ವಿವಿಯ ಮಾರುಕಟ್ಟೆ ವಿಭಾಗದ ಅಧಿಕಾರಿಗಳು ಬೆಳೆಯ ಬೆಲೆ ಹೆಚ್ಚಳವಾಗುತ್ತಿದ್ದಂತೆಯೇ ಎಸ್‌ಎಂಎಸ್ ಮೂಲಕ ರೈತರಿಗೆ ಮಾಹಿತಿ ನೀಡುತ್ತಾರೆ.
ಇದರೊಂದಿಗೆ ಸಂಬಂಧಿಸಿದ ಉತ್ಪನ್ನಕ್ಕೆ ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದೆ ಎಂಬುದನ್ನು ರೈತರಿಗೆ ತಿಳಿಸುತ್ತಾರೆ. ರೈತರ ನೋಂದಣಿ ಮಾಡಿಕೊಳ್ಳುವಾಗ ಅವರ ಮೊಬೈಲ್ ಸಂಖ್ಯೆಯೊಂದಿಗೆ ಅವರು ಮುಖ್ಯವಾಗಿ ಬೆಳೆಯುವ ಬೆಳೆಯ ಕುರಿತು ಈ ಕೇಂದ್ರದಲ್ಲಿ ವಿವರ ಪಡೆಯಲಾಗುತ್ತದೆ. ಆ ಬೆಳೆಗೆ ಸರ್ಕಾರದಿಂದ ನೀಡುವ ಬೆಂಬಲ ಬೆಲೆಯ ಕುರಿತು ರೈತರಿಗೆ ತಿಳಿಸಲಾಗುವುದು.
ಸಂಜೆಯ ವೇಳೆಗೆ ಲಭ್ಯ: ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ನಿತ್ಯ ಮಧ್ಯಾಹ್ನ 12 ಗಂಟೆಗೆ ಟೆಂಡರ್ ಆಗಲಿದ್ದು, ರಾಷ್ಟ್ರೀಯ ಮಾಹಿತಿ ವ್ಯವಸ್ಥೆ (ಎನ್‌ಐಎಸ್) ಮೂಲಕ ಸಂಬಂಧಿಸಿದ ಎಪಿಎಂಸಿಗಳೊಂದಿಗೆ ಸಂಪರ್ಕ ಸಾಧಿಸಿ ಬೆಳೆಗಳ ಬೆಲೆ ವಿವರ ಪಡೆದು ಸಂಜೆ 4 ಗಂಟೆಯೊಳಗೆ ರೈತರಿಗೆ ಎಸ್‌ಎಂಎಸ್ ಕಳುಹಿಸಲಾಗುವುದು.
ಧಾನ್ಯಗಳ ಬೆಲೆಯೊಟ್ಟಿಗೆ ಹೂವು, ಹಣ್ಣುಗಳ ಬೆಲೆಯನ್ನು ತಿಳಿಸಲಾಗುವುದು ಎನ್ನುತ್ತಾರೆ ಕೇಂದ್ರದ ಮುಖ್ಯಸ್ಥ ಡಾ.ಬಸವರಾಜ ಬಣಕಾರ.ಮೆಕ್ಕೆಜೋಳ ಈ ಭಾಗದಲ್ಲಿ ಬೆಳೆದರೂ ಹುಬ್ಬಳ್ಳಿ ಮಾರುಕಟ್ಟೆಗೆ ಹೋಲಿಸಿದರೆ ಫೌಲ್ಟ್ರಿಫಾರಂ ಉದ್ದಿಮೆ ಕೇಂದ್ರೀಕೃತವಾಗಿರುವ ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಬೆಲೆ ಹೆಚ್ಚಿರುತ್ತದೆ.
ರೈತರಿಗೆ ಹುಬ್ಬಳ್ಳಿಯ ಮಾರುಕಟ್ಟೆಯ ವಿವರದೊಟ್ಟಿಗೆ ಹೊರಗಿನ ಮಾರುಕಟ್ಟೆಗಳಲ್ಲಿನ ಬೆಲೆ ಮಾಹಿತಿ ನೀಡಿದರೆ ಅವರಿಗೆ ಮಾರಾಟದ ವೇಳೆ ತಮ್ಮ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ಪಡೆದಂತಾಗುತ್ತದೆ. ಇನ್ನು ಪುತ್ತೂರಿನ ಮಾರುಕಟ್ಟೆಯಲ್ಲಿ ಗೋಡಂಬಿಯ ಬೆಲೆ, ಮುಂಬೈ ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ದರ ಹೀಗೆ ಎಲ್ಲಾ ಮಾಹಿತಿ ಪಡೆಯಬಹುದು ಎಂದು ಹೇಳುತ್ತಾರೆ.
ತಾವು ಬೆಳೆಯುತ್ತಿರುವ ಬೆಳೆ ಹೊರತಾಗಿ ಆಸಕ್ತಿ ಇರುವ ಬೆಳೆಗಳ ಹೆಸರನ್ನು ರೈತರು ನೋಂದಣಿ ಮಾಡಿಸಿದರೆ ಆ ಬೆಳೆಗಳ ಬೆಲೆ ವಿವರವನ್ನು ನೀಡುವ ವ್ಯವಸ್ಥೆ ಕೇಂದ್ರ ಮಾಡುತ್ತದೆ. ಎಸ್‌ಎಂಎಸ್ ಮೂಲಕ ಬೆಳೆಯ ವಾಸ್ತವ ಬೆಲೆ ತಿಳಿಯುವುದರಿಂದ ರೈತರನ್ನು ಮಧ್ಯವರ್ತಿಗಳ ಶೋಷಣೆಯಿಂದ ಮುಕ್ತರಾಗಿಸಿ ನ್ಯಾಯಯುತ ಬೆಲೆ ಕೊಡಿಸುವುದು ಕೇಂದ್ರದ ಮುಖ್ಯ ಧ್ಯೇಯ.
ಇದರಿಂದ ಮಾರುಕಟ್ಟೆಯ ದೈನಂದಿನ ವಿದ್ಯಮಾನದ ಬಗ್ಗೆ ಗಮನ ನೀಡಲು ರೈತರಿಗೆ ಅನುಕೂಲವಾಗುತ್ತದೆ. ತಂತ್ರಜ್ಞಾನವನ್ನು ರೈತಸ್ನೇಹಿಯಾಗಿ ಬಳಸುವ ಈ ಯೋಜನೆಯಡಿ ಕೃಷಿ ಮೇಳದ ನಾಲ್ಕು ದಿನ 3 ಸಾವಿರಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿದ್ದಾರೆ.
ಮೇಳದ ನಂತರವೂ ಹೆಸರು ನೋಂದಾಯಿಸಲು ಇಚ್ಛಿಸುವ ರೈತರು ಡಾ.ಬಸವರಾಜ ಬಣಕಾರ ಮೊ.9448632398 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.