
ಧಾರವಾಡ: `ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಥೆ ಅತ್ಯಂತ ಜನಪ್ರಿಯ ಪ್ರಕಾರ. ಕಥೆಗಳು ಓದುವವರ ತಿಳಿವಳಿಕೆ, ಅರಿವನ್ನು ವಿಸ್ತಾರಗೊಳಿಸುವುದರ ಜೊತೆ ಜೀವ ನೀಡುವ ಶಕ್ತಿ ಇದೆ' ಎಂದು ಹಿರಿಯ ಕಥೆಗಾರ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಅಭಿಪ್ರಾಯಪಟ್ಟರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ಪತ್ರಕರ್ತ ಕುಮಾರ ಬೇಂದ್ರೆ ಅವರ ಕಥಾಸಂಕಲನ `ಗಾಂಧಿ ವೃತ್ತದ ದಂಗೆ' ಬಿಡುಗಡೆಗೊಳಿಸಿ ಅವರು ಮಾತನಾಡಿದರು.
`ಪ್ರತಿಯೊಬ್ಬ ಕಥೆಗಾರ ತನ್ನ ವೈಯಕ್ತಿಕ ಅನುಭವಗಳನ್ನು ಸಾರ್ವತ್ರೀಕರಣಗೊಳಿಸಿ ಕಥೆ ಸೃಷ್ಟಿಸುತ್ತಾನೆ.
ಓದುಗ ತನ್ನ ಓದುವ ಸುಖಕ್ಕಾಗಿ ಕಥೆಗಳನ್ನು ಓದುತ್ತಾನೆ. ಹೀಗೆ ಓದುವ ಮೂಲಕ ಬೇರೊಬ್ಬರ ಪ್ರಪಂಚವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಹೀಗೆ ನಿರಂತರ ನಡೆಯುವ ಶೋಧನೆಯ ಫಲವಾಗಿ ಕಥೆಗಳು ಹುಟ್ಟುತ್ತವೆ. ಕನ್ನಡ ಸಾಹಿತ್ಯದಲ್ಲಿ ಕಥೆಗಳಿಗೆ ಒಂದು ವಿಶಿಷ್ಟ ಪರಂಪರೆ ಇದೆ' ಎಂದರು.
`ಕಥೆಗಳ ಸ್ವರೂಪ ಭಾವಗೀತೆ ಮತ್ತು ಪ್ರಬಂಧ ಪ್ರಕಾರಗಳಿಗೆ ತುಂಬಾ ಹತ್ತಿರವಾದದ್ದು. ಕಥೆಗಳಲ್ಲಿ ಸೀಮಿತ ಚೌಕಟ್ಟಿನಲ್ಲಿ ರೂಪಿಸುವ ಸವಾಲು ಕಥೆಗಾರನ ಮುಂದಿರುವುದರಿಂದ ಚಿಕ್ಕ, ಚಿಕ್ಕ ಸಂಗತಿಗಳನ್ನು, ಬದುಕಿನ ಮಗ್ಗಲುಗಳನ್ನು ಆ ಚೌಕಟ್ಟಿನಲ್ಲಿಯೇ ಕೇಂದ್ರೀಕರಿಸುತ್ತಾನೆ. ಹೀಗಾಗಿ ಕಥೆಗಳಿಗೆ ತೀವ್ರತೆ ಸಾಧ್ಯವಾಗುತ್ತದೆ.
ನವೋದಯ, ನವ್ಯ, ಬಂಡಾಯದ ಕಾಲಘಟ್ಟದಲ್ಲಿ ಕಥೆಗಳ ಆಶಯ, ಸಂರಚನೆ ಬದಲಾವಣೆ ಹೊಂದುತ್ತ ಬಂದವು. ಪ್ರಸ್ತುತ ಸಂದರ್ಭದಲ್ಲಿ ಎಲ್ಲ ಕಾಲಘಟ್ಟಗಳ ಉತ್ತಮ ಅಂಶಗಳನ್ನು ಸ್ವೀಕರಿಸುತ್ತ, ಹೊಸತನ ಸೃಷ್ಟಿಸುತ್ತ ಕಥಾಪರಂಪರೆಯನ್ನು ಮುಂದುವರಿಸಬೇಕಿದೆ. ಸಮಕಾಲೀನ ಸಂವೇದನೆಗಳನ್ನು ಕಥಾ ಅನುಭವವನ್ನಾಗಿಸಿಕೊಳ್ಳಬೇಕಿದೆ' ಎಂದು ಹೇಳಿದರು.
ಕೃತಿ ಪರಿಚಯಿಸಿದ ಚನ್ನಪ್ಪ ಅಂಗಡಿ, `ಪ್ರಾಚೀನ ಮೌಖಿಕ ಪರಂಪರೆಯೇ ಆಧುನಿಕ ಕಥಾ ಪರಂಪರೆಗೆ ದ್ರವ್ಯ. ಪ್ರಸ್ತುತ ಅನ್ಯಶಿಸ್ತೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತಮ್ಮ ವಿಭಿನ್ನ ಅನುಭವಗಳನ್ನು ಕ್ರೋಢೀಕರಿಸಿಕೊಂಡು ಕಥಾ ರಚನೆಯಲ್ಲಿ ತೊಡಗಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಕುಮಾರ ಬೇಂದ್ರೆ ಅವರ ಕಥೆಗಳು ಆಶಾಭಾವನೆ ಮೂಡಿಸುತ್ತವೆ' ಎಂದರು.
ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಾಹಿತ್ಯ ಮಂಟಪದ ಸಂಚಾಲಕ ಮೋಹನ ನಾಗಮ್ಮನವರ, ಶಿವಣ್ಣ ಬೆಲ್ಲದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.