ADVERTISEMENT

ಕರಡಿ ಮಜಲಿಗೆ ಮನಸೋತ ವಿದ್ಯಾರ್ಥಿಗಳು

ವಿಕ್ರಂ ಕಾಂತಿಕೆರೆ
Published 11 ಸೆಪ್ಟೆಂಬರ್ 2011, 5:50 IST
Last Updated 11 ಸೆಪ್ಟೆಂಬರ್ 2011, 5:50 IST

ಕರಡಿ ಮಜಲಿನ ವಾದನದ ಲಯಬದ್ಧ ಮೇಳಕ್ಕೆ ಅವರ ಮೈಮನ ಪುಳಕಗೊಂಡಿತ್ತು. ಜಾನಪದ ಹಾಡುಗಳು ಅವರಿಗೆ `ಹೊಸ ಬಗೆಯ~ ಅನುಭವ ನೀಡಿದವು. ಒಗಟುಗಳು, ನುಡಿಗಟ್ಟಿಗಳನ್ನೊಳಗೊಂಡ ನೀತಿ ಮಾತುಗಳು ಅವರಿಗೆ ಬೋರ್ ಎನಿಸಲಿಲ್ಲ. ಕಾರಣ, ಅಲ್ಲಿ ಎಲ್ಲವೂ ಸಹಜವಾಗಿತ್ತು, ಎಲ್ಲದಕ್ಕೂ ಮಣ್ಣಿನ ಗುಣದ ಸ್ಪರ್ಶವಿತ್ತು.
ಇಂಥ ವಿಶಿಷ್ಟ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ. 

ಮೊದಲ ಕಾರ್ಯಕ್ರಮ ನಡೆದದ್ದು ನಗರದ ಲ್ಯಾಮಿಂಗ್ಟನ್ ಶಾಲಾ ಆವರಣದಲ್ಲಿ ಬೆಳಿಗ್ಗೆ. ಮಧ್ಯಾಹ್ನ ಇನ್ನೊಂದು ಕಾರ್ಯಕ್ರಮಕ್ಕೆ ವೇದಿಕೆಯಾದದ್ದು ಶ್ರೀ ಕಾಡಸಿದ್ದೇಶ್ವರ ಕಲಾ ಕಾಲೇಜು ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆ. ಲ್ಯಾಮಿಂಗ್ಟನ್ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮ `ಶಾಲಾ ಅಂಗಳದಲ್ಲಿ ಜಾನಪದ~, ಕಾಡಸಿದ್ದೇಶ್ವರ ಕಾಲೇಜಿನಲ್ಲಿ ನಡೆದದ್ದು `ಕಾಲೇಜಿನತ್ತ ಜನಪದ~

ಎರಡೂ ಕಡೆಗಳಲ್ಲಿ ಕರಡಿ ಮಜಲು ವಾದನದ ಸೊಬಗನ್ನು ಉಣಬಡಿಸಿದವರು ಹಿರಿಯ ಕಲಾವಿದ, ವೆಂಕಪ್ಪ ಪುಲಿ ಅವರ ಗರಡಿಯಲ್ಲಿ ಪಳಗಿದ ಹುಬ್ಬಳ್ಳಿ ತಾಲ್ಲೂಕು ಮಾವನೂರ ಗ್ರಾಮದ ಕಲಾವಿದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಕಲಾವಿದರಿಗೆ ತರಬೇತಿ ನೀಡುವ ಜಾನಪದ ಅಕಾಡೆಮಿಯ ಯೋಜನೆಯಡಿ ರೂಪುಗೊಂಡ ಕಲಾವಿದರು ಎರಡೂ ಕಡೆಗಳಲ್ಲಿ ಭವಿಷ್ಯದ ಪ್ರಜೆಗಳ ಮನ ಗೆದ್ದರು, ಅವರಲ್ಲಿ ಜಾನಪದದ ಕುರಿತ ಆಸಕ್ತಿ ಕುದುರಿಸಿದರು.

ಲ್ಯಾಮಿಂಗ್ಟನ್ ಶಾಲೆಯ ತೆರೆದ ವೇದಿಕೆಯಲ್ಲಿ ಕಲಾವಿದರು ತನ್ಮಯರಾಗಿ ಕರಡಿ ನುಡಿಸುತ್ತಿದ್ದರೆ ಅವರಿಗೆ ಸಾಥ್ ನೀಡಿದ ದಿಮ್ಮು, ಪಗಡ, ಡೋಲ್, ಗುಳಿಗುಳಿ ಹಾಗೂ ತಾಳ ಕಲಾವಿದರು ಇಡೀ ವಾತಾವರಣವನ್ನೇ ಸಂಗೀತಮಯ ಮಾಡಿದಾಗ ಮೈದಾನದಲ್ಲಿ ಕುಳಿತಿದ್ದ ಮಕ್ಕಳು ಕುಳಿತಲ್ಲೇ ಕುಣಿದರು, ಕುಣಿಯುತ್ತ ತಾಳ ಹಾಕಿದರು.

ಉತ್ತರ ಕರ್ನಾಟಕದ ಪ್ರಮುಖ ವಾದ್ಯವಾದ ಕರಡಿ ಮಜಲನ್ನು ಮದುವೆ ಮತ್ತಿತರ ಸಮಾರಂಭಗಳಲ್ಲಿ ನುಡಿಸಲಾಗುತ್ತದೆ. ಮದುವೆಯಲ್ಲಿ ಬೀಗರನ್ನು ಎದುರುಗೊಳ್ಳುವ ಸಂದರ್ಭದಲ್ಲಿ ಕರಡಿಯ `ಧೃತ್~ ಗತಿಯ ನಡೆ ವಿಶಿಷ್ಟ ಅನುಭವ ನೀಡುತ್ತದೆ. ಈ ಸಂದರ್ಭದಲ್ಲಿ ಅಲ್ಲಿ ಚುರುಮುರಿಯನ್ನು ತೂರಲಾಗುತ್ತದೆ. ಚುರುಮುರಿ ಮೈಮೇಲೆ ಬಿದ್ದ ಕೂಡಲೇ ಕಲಾವಿದರ ಉತ್ಸಾಹ ಇಮ್ಮಡಿಯಾಗುತ್ತದೆ.

ಲ್ಯಾಮಿಂಗ್ಟನ್ ಶಾಲೆಯಲ್ಲಿ ಈ ಪ್ರಯೋಗ ಕೂಡ ನಡೆಯಿತು. ವಾದ್ಯದ ನಾದಕ್ಕೆ ಮನಸೋತ ಮಕ್ಕಳೇ ಚುರುಮುರಿ ತೆಗೆದುಕೊಂಡು ಬಂದು ತೂರಿದರು, ಇದು ಕಲಾವಿದರ ಹುಮ್ಮಸ್ಸನ್ನು ಹೆಚ್ಚಿಸಿತು. ವೇದಿಕೆಯಲ್ಲಿ ಗಂಧರ್ವ ಲೋಕವೇ ಸೃಷ್ಟಿಯಾಯಿತು.

ಕಾಲೇಜಿನಲ್ಲೂ ಪ್ರತಿಕ್ರಿಯೆ ಭಿನ್ನವಾಗಿರಲಿಲ್ಲ. ರಾಕ್ ಸಂಗೀತ ಗುಂಯ್‌ಗುಟ್ಟುವ ಯುವಕರು ಕರಡಿಯ `ಡಂಕಣಕ, ಡಂಕಣಕ~ ನಾದಕ್ಕೆ ತಲೆದೂಗಿದರು, ನಂತರ ಜಾನಪದ ಅಕಾಡೆಮಿಯ ಸದಸ್ಯ ರಾಮು ಮೂಲಗಿ ಹಾಡಿದ ಜಾನಪದ ಹಾಡುಗಳಿಗೆ ಮನಸೋತರು.

ಸಮಾರಂಭದಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಜಾನಪದ ಹಾಡುಗಳಲ್ಲಿ ಬರುವ ರಸಿಕತನ, ಪ್ರೇಮಸಲ್ಲಾಪ ಇತ್ಯಾದಿಗಳನ್ನು ವಿವರಿಸಿ ಕಚಗುಳಿ ಇಟ್ಟರು.

ಅಕಾಡೆಮಿ, ಗುರು-ಶಿಷ್ಯ ಪರಂಪರೆ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ವಿವಿಧ ಜಾನಪದ ಕಲೆಗಳಲ್ಲಿ ತರಬೇತಿ ನೀಡುತ್ತಿದ್ದು, ಈ ಬಾರಿ ರಾಜ್ಯದ ಆರು ಕಡೆಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿಯಲ್ಲಷ್ಟೇ ತರಬೇತಿ ನೀಡಿದ್ದು ಶಿವಮೊಗ್ಗದಲ್ಲಿ ಡೊಳ್ಳು, ಬೆಂಗಳೂರು ಗ್ರಾಮಾಂತರದಲ್ಲಿ ಕರಗ, ಕೋಲಾರದಲ್ಲಿ ಗೀತಗಾಯನ, ಚಾಮರಾಜನಗರದಲ್ಲಿ ಕಂಸಾಳೆ ಹಾಗೂ ಮಂಡ್ಯದಲ್ಲಿ ಸೋಬಾನೆ ಪದಗಳ ತರಬೇತಿ ನೀಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.