ADVERTISEMENT

ಕಾಯ್ದೆ ದುರ್ಬಲಗೊಳಿಸುವುದರ ಹಿಂದೆ ಕೇಂದ್ರದ ಹುನ್ನಾರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 8:36 IST
Last Updated 7 ಏಪ್ರಿಲ್ 2018, 8:36 IST

ಧಾರವಾಡ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ದುರ್ಬಲಗೊಳಿಸಿರುವುದರ ಹಿಂದೆ ದಲಿತರ ಹಕ್ಕುಗಳನ್ನು ಹತ್ತಿಕ್ಕುವ ಕೇಂದ್ರ ಸರ್ಕಾರದ ಹುನ್ನಾರ ಅಡಗಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿ ಕರ್ನಾಟಕ ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಶಿಕ್ಷಕೇತರ ನೌಕರರ ಸಂಘ ಸದಸ್ಯರು ಕವಿವಿ ಆವರಣದಲ್ಲಿ ಶುಕ್ರವಾರ ಧರಣಿ ನಡೆಸಿದರು.

ಮುಖಂಡ ರವಿ ಗಣಾಚಾರಿ ಮಾತನಾಡಿ, ‘ಸರ್ಕಾರಿ ನೌಕರರ ವಿರುದ್ಧ ಈ ಕಾಯ್ದೆಯಡಿ ಮೊಕದ್ದಮೆ ದಾಖಲಾದರೂ ಅವರನ್ನು ಬಂಧಿಸುವಂತಿಲ್ಲ ಹಾಗೂ ತನಿಖೆ ನಡೆಸುವ ತನಿಖಾಧಿಕಾರಿ, ತನಗೆ ಸರಿ ಅನಿಸಿದಲ್ಲಿ ಮಾತ್ರ ಬಂಧಿಸಬಹುದು ಎಂದು ಹೇಳಿದೆ. ಕಾಯ್ದೆ ದುರ್ಬಲಗೊಳಿಸಿದರೆ ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆ ನಡೆಯುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನ್ಯಾಯಾಲಯದ ಈ ಆದೇಶವನ್ನು ಒಕ್ಕೊರಲಿನಿಂದ ವಿರೋಧಿಸುತ್ತೇವೆ. ರಾಷ್ಟ್ರಪತಿ ಕೂಡಲೇ ಮಧ್ಯಪ್ರವೇಶಿಸಿ, ನ್ಯಾಯಾಲಯದ ತೀರ್ಪನ್ನು ಪುನರ್‌ ಪರಿಶೀಲಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಹಿತ ಕಾಯಲು ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

ಕೆ.ಎಸ್‌.ಮಾಳಗಿ, ಪಿ.ವೈ.ಮಾದರ, ಸಿ.ಬಿ.ಸಾವಳಗಿ, ಕೆ.ಎಂ.ಗೋಪಾಲ, ಸುರೇಶ ಎಸ್‌.ಬಾದಾಮಿ, ಕೆ.ಡಿ.ಪೂಜಾರ, ಎ.ಎಸ್‌.ಕಲ್ಲೋಳಿಕರ, ಎನ್‌.ಬಿ.ನಾರಕ್ಕನವರ, ಆರ್.ಬಿ.ಸಾತಪೋತೆ, ಎ.ಕೆ.ಮಲ್ಲಿಗವಾಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.