ADVERTISEMENT

ಕಿಮ್ಸ್ ಗುತ್ತಿಗೆ ನೌಕರರ ಕಾಯಂ: ಭರವಸೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 10:15 IST
Last Updated 22 ಜನವರಿ 2011, 10:15 IST

ಹುಬ್ಬಳ್ಳಿ: ‘ಹಲವಾರು ವರ್ಷಗಳಿಂದ ಕಿಮ್ಸ್‌ದಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಎಕ್ಸರೇ ತಂತ್ರಜ್ಞರ ಕಾಯಮಾತಿಗೆ ಯತ್ನಿಸಲಾಗುತ್ತದೆ. ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಕಿಮ್ಸ್ ನಿರ್ದೇಶಕ ಡಾ. ಬಿ.ಎಸ್. ಮದಕಟ್ಟಿ ಭರವಸೆ ನೀಡಿದರು.

ಅಪಘಾತ ಚಿಕಿತ್ಸಾ ಕೇಂದ್ರಕ್ಕೆ 20 ಶುಶ್ರೂಷಕರನ್ನು ನೇಮಿಸಿಕೊಳ್ಳುವ ಸಲುವಾಗಿ ನಡೆಯುವ ಸಂದರ್ಶನವನ್ನು ರದ್ದುಗೊಳಿಸಬೇಕು ಮತ್ತು ತಮ್ಮನ್ನು ಕಾಯಂ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಎಕ್ಸರೆ ತಂತ್ರಜ್ಞರು ಕಿಮ್ಸ್ ನಿರ್ದೇಶಕರ ಕೊಠಡಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದಾಗ ಡಾ. ಮದಕಟ್ಟಿಯವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಯೋಜನೆಯನ್ವಯ ಅಪಘಾತ ಚಿಕಿತ್ಸಾ ಕೇಂದ್ರಕ್ಕೆ 20 ಶುಶ್ರೂಷಕರನ್ನು ನೇಮಿಸುವ ಸಂಬಂಧ ಶುಕ್ರವಾರ ಸಂದರ್ಶನವನ್ನು ನಿಗದಿಗೊಳಿಸಲಾಗಿದೆ. ಈ ನೇಮಕ ಕೇವಲ 11 ತಿಂಗಳು ಮಾತ್ರ. ನಂತರ ಅವರನ್ನು ಮರುನೇಮಕಗೊಳಿಸುವುದಿಲ್ಲ. ಈ ನೇಮಕಾತಿಗೂ ಗುತ್ತಿಗೆ ಆಧಾರದ ನೌಕರರಿಗೂ ಸಂಬಂಧ ಇರುವುದಿಲ್ಲ’ ಎಂದು ಅವರು ಹೇಳಿದರು.

‘ಹತ್ತು ವರ್ಷಗಳ ಹಿಂದೆ ವೃತ್ತಿ ತರಬೇತಿದಾರರಾಗಿ ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಎಕ್ಸರೆ ತಂತ್ರಜ್ಞರನ್ನು ರೂ. 1500 ಸಂಬಳಕ್ಕೆ ನೇಮಿಸಿಕೊಳ್ಳಲಾಯಿತು. ನಂತರ ಅವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಯಿತು.

ಈಗ ಅವರೆಲ್ಲ ಆರು ಸಾವಿರ ಸಂಬಳ ಪಡೆಯುತ್ತಿದ್ದಾರೆ. ಜೊತೆಗೆ ಅವರನ್ನೆಲ್ಲ ಕಾಯಂಗೊಳಿಸಬೇಕೆಂದು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತದೆ. ಅವರಿಗೆ ಅನ್ಯಾಯ ಮಾಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಕಿಮ್ಸ್ ಆಡಳಿತಾಧಿಕಾರಿ ಎಸ್.ಎ. ಮಠದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.