ADVERTISEMENT

ಕಿಮ್ಸ್‌ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ

ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಯುವಕರಿಬ್ಬರು ನುಗ್ಗಿದ ಆರೋಪ; ಧರಣಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 10:12 IST
Last Updated 7 ಮಾರ್ಚ್ 2018, 10:12 IST
ಕಿಮ್ಸ್‌ ಮುಖ್ಯ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಸಮಾಧಾನ ಮಾಡಲು ಯತ್ನಿಸಿದ ವಿದ್ಯಾನಗರ ಠಾಣೆ ಎಸ್‌ಐ ಎಸ್‌.ಪಿ. ನಾಯಕ
ಕಿಮ್ಸ್‌ ಮುಖ್ಯ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಸಮಾಧಾನ ಮಾಡಲು ಯತ್ನಿಸಿದ ವಿದ್ಯಾನಗರ ಠಾಣೆ ಎಸ್‌ಐ ಎಸ್‌.ಪಿ. ನಾಯಕ   

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ಸಂಸ್ಥೆಯ (ಕಿಮ್ಸ್) ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಮಂಗಳವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಮುಖಕ್ಕೆ ಬಣ್ಣ ಬಳಿದುಕೊಂಡಿದ್ದ ಇಬ್ಬರು ಯುವಕರು ಅನಧಿಕೃತ ಪ್ರವೇಶ ಮಾಡಿದ್ದರು. ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು, ತರಗತಿ ಬಹಿಷ್ಕರಿಸಿ ಕಿಮ್ಸ್‌ ಆಡಳಿತ ಮಂಡಳಿ ಕಚೇರಿ ಎದುರು ಧರಣಿ ನಡೆಸಿದರು.

‘ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ತಾರಸಿ ಮೇಲಿಂದ ಕೊಠಡಿಯ ಕಾರಿಡಾರ್‌ನಲ್ಲಿ ಇಬ್ಬರು ಯುವಕರು ಬಂದಿದ್ದರು. ಅವರನ್ನು ಕಂಡು ಭಯಭೀತರಾದ ವಿದ್ಯಾರ್ಥಿನಿಯರು ಕಿರುಚಿಕೊಂಡಾಗ ಅವರು ಓಡಿಹೋದರು. ಯುವಕರನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.

ಕಿಮ್ಸ್‌ನ ಹಿರಿಯ ವೈದ್ಯ ಡಾ.ಶಿವಪ್ಪ ಅನೂರ ಶೆಟ್ರು ಅವರು, ಸಮಸ್ಯೆ ಆಲಿಸಲು ಬಂದರು. ಕಿಮ್ಸ್ ನಿರ್ದೇಶಕರೇ ಬರಬೇಕು ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು. ಈ ದೃಶ್ಯಾವಳಿಯನ್ನು ಸೆರೆಹಿಡಿಯಲು ಮುಂದಾದ ಮಾಧ್ಯಮದವರಿಗೆ ವಿರೋಧ ವ್ಯಕ್ತಪಡಿಸಿದ ಅನೂರ ಶೆಟ್ರು, ವಿಡಿಯೊ ಚಿತ್ರೀಕರಣ ಮಾಡದಂತೆ ತಾಕೀತು ಮಾಡಿದರು.

ADVERTISEMENT

‘ಇದು ಕಾಲೇಜಿನ ಸಮಸ್ಯೆ. ನಾವೇ ಬಗೆಹರಿಸಿಕೊಳ್ಳುತ್ತೇವೆ. ಮಾಧ್ಯಮದಲ್ಲಿ ಇದೆಲ್ಲಾ ಬರುವುದು ಬೇಡ’ ಎಂದು ಶೆಟ್ರು ತಿಳಿಸಿದರು. ಇದಕ್ಕೆ ವಿದ್ಯಾರ್ಥಿಗಳು ಸಹ ದನಿಗೂಡಿಸಿದರು. ಈ ವೇಳೆ ಮಾಧ್ಯಮದವರು ಮತ್ತು ಅನೂರ ಶೆಟ್ರು ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಕಿಮ್ಸ್‌ ಸಭಾಂಗಣಕ್ಕೆ ಕರೆದೊಯ್ದ ಅನೂರ ಶೆಟ್ರು, ಅವರೊಂದಿಗೆ ಮಾತುಕತೆ ನಡೆಸಿದರು. ಸಭಾಂಗಣಕ್ಕೆ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಯಿತು.

‘ಇಬ್ಬರು ಯುವಕರು, ‘ಅರ್ಚನಾ’ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿರುವ ಬಗ್ಗೆ ರಾತ್ರಿಯೇ ವಾರ್ಡನ್‌ ದೂರು ನೀಡಿದ್ದಾರೆ. ಬೆಳಿಗ್ಗೆ ಬಗೆಹರಿಸುವುದಾಗಿ ಹೇಳಿದ್ದೆ. ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ‌ಆಧರಿಸಿ ತನಿಖೆ ನಡೆಸುವಂತೆ ಕಿಮ್ಸ್‌ ಆಡಳಿತ ಮಂಡಳಿ ಮತ್ತು ಪೊಲೀಸರಿಗೆ ತಿಳಿಸಿದ್ದೇನೆ’ ಎಂದು ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್‌ ಸುದ್ದಿಗಾರರಿಗೆ ತಿಳಿಸಿದರು.  ‘ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‌ಗಳಿಗೆ ಹೆಚ್ಚಿನ ಭದ್ರತಾ ಸಿಬ್ಬಂದಿ ಹಾಕಲಾಗುವುದು. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು’ ಎಂದು ಬಂಟ್‌ ತಿಳಿಸಿದರು.
***
ಸೌಲಭ್ಯಗಳ ಕೊರತೆ: ದೂರು
‘ಕಿಮ್ಸ್‌ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಕುಡಿಯುವ ನೀರು, ವಿದ್ಯುತ್‌ ಮತ್ತು ಶೌಚಾಲಯ ವ್ಯವಸ್ಥೆ ಸರಿ ಇಲ್ಲ. ಮೂಲ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಸಭೆಯಲ್ಲಿ ವಿದ್ಯಾರ್ಥಿನಿಯರು ದೂರಿದರು ಎನ್ನಲಾಗಿದೆ.

‘ಹಾಸ್ಟೆಲ್‌ಗೆ ಯುವಕರಿಬ್ಬರು ನುಗ್ಗಿದ್ದರು ಎಂಬ ವಿಷಯಕ್ಕಿಂತ ಮೂಲ ಸೌಕರ್ಯಗಳ ಕುರಿತೇ ಹೆಚ್ಚು ದೂರುಗಳು ಕೇಳಿಬಂದವು. ಅದನ್ನು ಬಗೆಹರಿಸುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.