ಹುಬ್ಬಳ್ಳಿ: ‘ಕೃಷಿಕರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ ಹೇಳಿದರು. ಭಾನುವಾರ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜರುಗಿದ ಹುಬ್ಬಳ್ಳಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ಅಮೃತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರೈತರ ಬೆಳೆಗೆ ಬೆಲೆ ಕುಸಿದ ಸಂದರ್ಭದಲ್ಲಿ ಬೆಂಬಲ ಬೆಲೆ ನೀಡುವುದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿಯ ಆವರ್ತ ನಿಧಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ’ ಎಂದು ಅವರು ತಿಳಿಸಿದರು. ‘ಅಂತರ್ಜಲ ಕುಸಿತ ತಡೆಯುವುದಕ್ಕಾಗಿ ಹೂಳು ತೆಗೆದು ಕೆರೆಗಳನ್ನು ಪುನರುಜ್ಜೀವನಗೊಳಿಸಲು ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20-25 ಕೆರೆಗಳ ಹೂಳು ತೆಗೆಯುವ ಕೆಲಸವನ್ನು ಮಳೆಗಾಲದ ಮುಂಚೆ ಪೂರ್ಣಗೊಳಿಸಲಾಗುವುದು’ ಎಂದೂ ಅವರು ಹೇಳಿದರು.
‘ಸಹಕಾರಿ ರಂಗದ ಪಿತಾಮಹ ಕಣಗಿನಹಾಳದ ಸಿದ್ಧನಗೌಡ ಪಾಟೀಲರ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ‘ದೇಶದ ಶೇ. 31ರಷ್ಟು ರೈತರು ಮಾತ್ರ ಬ್ಯಾಂಕ್ ಸಾಲ ಪಡೆಯುವ ಸ್ಥಿತಿಯಲ್ಲಿದ್ದಾರೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಇನ್ನುಳಿದ ರೈತರನ್ನು ತಲುಪಿಲ್ಲ. ಹೀಗಾಗಿ ಸರ್ಕಾರದ ಸಾಲ ರಿಯಾಯಿತಿ ಸವಲತ್ತುಗಳು ಬಹುತೇಕ ರೈತರನ್ನು ತಲುಪುತ್ತಿಲ್ಲ’ ಎಂದು ಸಂಸದ ಪ್ರಹ್ಲಾದ ಜೋಶಿ ವಿಷಾದಿಸಿದರು.
‘ಈಗ ಶೇ. ಒಂದರ ಬಡ್ಡಿ ದರದಲ್ಲಿ ಬೆಳೆ ಸಾಲ ಮಾತ್ರ ನೀಡಲಾಗುತ್ತಿದ್ದು, ಇದನ್ನು ಟ್ರ್ಯಾಕ್ಟರ್ ಹಾಗೂ ಇತರೆ ಕೃಷಿ ಸಲಕರಣೆಗಳಿಗೂ ವಿಸ್ತರಿಸಬೇಕು’ ಎಂದು ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಹೇಳಿದರು. ಗದುಗಿನ ಜಗದ್ಗುರು ಡಾ. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ಕೃಷಿ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಗಂಗಾಧರ ವೀರಪ್ಪ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕರಾದ ಚಂದ್ರಕಾಂತ ಬೆಲ್ಲದ, ಮೋಹನ ಲಿಂಬಿಕಾಯಿ, ಶಂಕರ ಪಾಟೀಲ ಮುನೇನಕೊಪ್ಪ, ವೀರಭದ್ರಪ್ಪ ಹಾಲಹರವಿ, ಶ್ರೀನಿವಾಸ ಮಾನೆ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ್ರ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಬಿ.ಜಿ. ಅಸುಂಡಿ, ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ಅರವಿಂದ ಕಟಗಿ, ಅಮೃತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ವಿ.ಎಸ್. ಕೆಂಚನಗೌಡ್ರ, ಮೋಹನ ಅಸುಂಡಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.