ADVERTISEMENT

ಕೋಳಿಕೆರೆ: ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 7:10 IST
Last Updated 6 ಡಿಸೆಂಬರ್ 2017, 7:10 IST

ಧಾರವಾಡ: ನಗರದ ಹೊಸಯಲ್ಲಾಪುರ ಪ್ರದೇಶದಲ್ಲಿರುವ ಕೋಳಿಕೆರೆಯನ್ನು ₹ 13 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೊದಲ ಹಂತದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೋಂದಿಗೆ ಮಾತಾಡಿದ ಅವರು, ‘ಕೋಳಿಕೇರಿ ಪ್ರಸಿದ್ಧ ಕೆರೆಯಾದರೂ ಇಲ್ಲಿನ ಕೆಲವೊಂದು ಸಮಸ್ಯೆಗಳು ಇಂದಿಗೂ ಹಾಗೇ ಇವೆ. 41.28 ಎಕರೆ ವಿಸ್ತೀರ್ಣದ ಬೃಹತ್ ಕೆರೆಗೆ ವಿವಿಧ ಕಡೆಗಳಿಂದ ಬಂದು ಸೇರುವ ಚರಂಡಿ ನೀರು ಹಾಗೂ ಸೂಕ್ತ ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಹಾಳಾಗಿವೆ. ಪರಿಸರ ವಾದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಅವರ ಸಹಕಾರದೊಂದಿಗೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದರು.

‘ಕೆರೆ ಅಭಿವೃದ್ಧಿಗೆ ಸಾಕಷ್ಟು ಜನ ಮುಂದೆ ಬಂದಿದ್ದು, ಅಂದಾಜು ₹ 13 ಕೋಟಿ ಅಗತ್ಯವಿದೆ. ಮಹಾನಗರ ಪಾಲಿಕೆ, ರಾಜ್ಯ ಹಣಕಾಸು ಯೋಜನೆ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ಮೂಲ ಸೌಕರ್ಯಗಳ ಹಣಕಾಸು ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ಈಗಾಗಲೇ ₹ 9 ಕೋಟಿ ಸಂಗ್ರಹಿಸಲಾಗಿದೆ. ಅದರಲ್ಲಿ ಮೊದಲ ಹಂತದ ಕಾಮಗಾರಿಯನ್ನು ₹ 3 ಕೋಟಿಯಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ಕೆರೆ ಒಡ್ಡು ನಿರ್ಮಾಣ, ನೀರಿನ ಹರಿಯುವಿಕೆ ಸೇರಿದಂತೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಕೆಲಗೇರಿ ಕೆರೆ, ಸಾಧನಕೆರೆ ಹಾಗೂ ಕೋಳಿಕೆರೆ ಅಭಿವೃದ್ಧಿಗೂ ಸ್ಮಾರ್ಟ್‌ ಸಿಟಿಯಲ್ಲಿ ವಿಶೇಷ ಅನುದಾನ ಮೀಸಲಿಡಲಾಗಿದೆ. ಕೆಲಗೇರಿ ಕೆರೆ ಅಭಿವೃದ್ಧಿಗೆ ಜಾಗದ ಸಮಸ್ಯೆ ಇದೆ. ಆದರೆ ಕೋಳಿಕೆರೆಗೆ ಹೊಂದಿಕೊಂಡಂತೆ 3 ಎಕರೆ ಜಾಗ ಲಭ್ಯವಿದ್ದು ಇಲ್ಲಿ ಉದ್ಯಾನ, ವಾಯುವಿಹಾರ ಪಥ ನಿರ್ಮಾಣ ಮಾಡಲು ಸಾಧ್ಯವಿದೆ. ಕುಟುಂಬ ಸಮೇತರಾಗಿ ಇಲ್ಲಿಗೆ ಜನರು ಬರುವಂತಹ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದರು.

ಇದೇ ಸಂದರ್ಭದಲ್ಲಿ ವಿಕಲಚೇತನರ ಹಾಗೂ ನಾಗರಿಕರ ಸಬಲಿಕರಣ ಇಲಾಖೆಯಿಂದ 11 ಅಂಗವಿಕಲರಿಗೆ ಯಂತ್ರಚಾಲಿತ ತ್ರಿಚಕ್ರ ಮೋಟಾರ್ ಸೈಕಲ್‌ಗಳನ್ನು ಫಲಾನುಭವಿಗಳಿಗೆ ಸಚಿವರು ವಿತರಿಸಿದರು. ಪಾಲಿಕೆ ನಾಮನಿರ್ದೇಶಿತ ಸದಸ್ಯ ಆನಂದ ಸಿಂಗನಾಥ, ಮಂಜುನಾಥ ಕದಂ, ಶಂಭು ಸಾಲ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.