ADVERTISEMENT

ಕ್ರೀಡಾಂಗಣ ಕಾಮಗಾರಿ `ಓಟ'ಕ್ಕೆ ಮತ್ತೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 5:45 IST
Last Updated 18 ಜುಲೈ 2013, 5:45 IST

ಹುಬ್ಬಳ್ಳಿ: ಕೊನೆಗೂ ಅಳ್ನಾವರ ಭಾಗದ ಕ್ರೀಡಾಪಟುಗಳ ಬಹುದಿನದ ಕನಸು ನನಸಾಗುವ ಕಾಲ ಬಂದಿದೆ. ಪಟ್ಟಣದಿಂದ ಎರಡು ಕಿಮೀ ದೂರದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣದ ಕಾಮಗಾರಿ ಮುಂದುವರಿಸಲು ಅಡ್ಡಿಯಾಗಿದ್ದ ಅನುದಾನದ ಕೊರತೆ ಈಗ ನೀಗಿದೆ. ಮೂರನೇ ಹಂತದ ಅನುದಾನ ಜುಲೈ ಒಂದರಂದು ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯ `ಓಟ' ಮುಂದುವರಿಸಲು ಭೂಸೇನಾ ನಿಗಮ ಸಜ್ಜಾಗಿದೆ.

ಹಳಿಯಾಳ ರಸ್ತೆಯ ಅರಣ್ಯ ಇಲಾಖೆಯ ಡಿಪೋ ಇದ್ದ ಜಾಗದಲ್ಲಿ ವರ್ಷಗಳ ಹಿಂದೆ ಕ್ರೀಡಾಂಗಣ ನಿರ್ಮಿಸುವ ನಿರ್ಧಾರ ಪ್ರಕಟಗೊಂಡಾಗ ಜನರು ಇಲ್ಲಿನ ಕ್ರೀಡಾ ಇತಿಹಾಸದಲ್ಲಿ ಹೊಸ ಶಾಖೆ ಆರಂಭವಾಗುವ ಕನಸು ಹೊತ್ತಿದ್ದರು. ಒಟ್ಟುರೂ75 ಲಕ್ಷ ಮೊತ್ತದ ಯೋಜನೆಗೆ ಮೊದಲ ಹಂತದ ರೂ 25 ಲಕ್ಷವನ್ನು 2011ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಲಾಗಿತ್ತು.

ಗುಡ್ಡ ಅಗೆದು ಬೇಲಿ ಹಾಕಿ ಪೆವಿಲಿಯನ್ ಮತ್ತು 200 ಮೀಟರ್ಸ್‌ ಟ್ರ್ಯಾಕ್ ನಿರ್ಮಿಸಲು ಸೂಚಿಸಲಾಗಿತ್ತು. ಕಾಮಗಾರಿ ಆರಂಭಗೊಂಡ ಒಂದು ವರ್ಷದ ನಂತರ ಮತ್ತೆರೂ25 ಲಕ್ಷ ಬಿಡುಗಡೆ ಮಾಡಲಾಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಮೊದಲ ಹಂತದ ಕಾಮಗಾರಿ ಮುಗಿದಿತ್ತು. ನಂತರ ಕಾಮಗಾರಿಯನ್ನು ಮುಂದುವರಿಸಲು ಹಣಕಾಸಿನ ತೊಡಕು ಎದುರಾಯಿತು. ಈಗ ಈ ಅಡ್ಡಿ ನಿವಾರಣೆಯಾಗಿದ್ದು, ಕಾಮಗಾರಿ ಮುಂದುವರಿಸಲು ಹಸಿರುನಿಶಾನೆ ಸಿಕ್ಕಂತಾಗಿದೆ.

`ಜುಲೈ ಒಂದರಂದುರೂ20 ಲಕ್ಷ ಬಿಡುಗಡೆಯಾಗಿದ್ದು ಕಾಮಗಾರಿ ಮುಂದುವರಿಸುವಂತೆ ತಕ್ಷಣ ಭೂಸೇನಾ ನಿಗಮಕ್ಕೆ ಸೂಚನೆ ನೀಡಲಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಮುಗಿಯಲಿದೆ' ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ `ಪ್ರಜಾವಾಣಿ'ಗೆ ತಿಳಿಸಿದರು.

`ಹಣ ಬಿಡುಗಡೆಯಾದ ತಕ್ಷಣ ಕೆಲಸ ಆರಂಭಿಸಲು ಮುಂದಾಗಿದ್ದೇವೆ. ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸುವ ಭರವಸೆ ಇದೆ' ಎಂಬುದು ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಎಸ್.ಎ. ಪಾಟೀಲ ಹೇಳಿದರು.

`ಮೊದಲು 200 ಮೀಟರ್ಸ್‌ ಟ್ರ್ಯಾಕ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. ಈ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಜಿಲ್ಲಾಡಳಿತ, ಟ್ರ್ಯಾಕ್‌ನ ಉದ್ದವನ್ನು 400 ಮೀಟರ್ಸ್‌ಗೆ ಪರಿವರ್ತಿಸುವಂತೆ ಸೂಚಿಸಿತು. ಇದು ಸ್ವಲ್ಪ ಗೊಂದಲಕ್ಕೆ ಎಡೆ ಮಾಡಿತು. ಈಗ 400 ಮೀಟರ್ಸ್‌ ಟ್ರ್ಯಾಕ್ ಕಾಮಗಾರಿ 99 ಶೇಕಡಾ ಮುಕ್ತಾಯಗೊಂಡಿದೆ' ಎಂದರು.

`ಕ್ರೀಡಾಂಗಣದೊಳಗೆ ಆಲದ ಮರ ಮತ್ತು ವಿದ್ಯುತ್ ಕಂಬವೊಂದಿದೆ. ಇದನ್ನು ತೆಗೆಸುವಂತೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಪತ್ರ ಬರೆಯಲಾಗಿದೆ. ಆದರೆ ಪೂರಕ ಸ್ಪಂದನೆ ಸಿಕ್ಕಿಲ್ಲ. ಮೈದಾನದಲ್ಲಿ ಕಟ್ಟಿ ನಿಲ್ಲುವ ನೀರನ್ನು ಹೊರಹಾಕಲು ಚರಂಡಿ ನಿರ್ಮಿಸಬೇಕಾಗಿದೆ. ಇದಕ್ಕೂ ಪ್ರಸ್ತಾವ ಕಳುಹಿಸಿ ಎಂಟು ತಿಂಗಳು ಕಳೆದಿವೆ. ಇದಕ್ಕೂ ಸ್ಪಂದನೆ ಸಿಕ್ಕಿಲ್ಲ' ಎಂಬ ದೂರನ್ನೂ ಅವರು ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.