ADVERTISEMENT

ಖಾತ್ರಿಯಾಗದ ಟಿಕೆಟ್: ಮಂಕಾದ ಪ್ರಚಾರ

ಬೆಂಗಳೂರು, ನವದೆಹಲಿಯಲ್ಲಿರುವ ಟಿಕೆಟ್‌ ಆಕಾಂಕ್ಷಿಗಳು, ನಾಯಕರಿಗೆ ತಲೆಬಿಸಿಯಾದ ಟಿಕೆಟ್‌ ಹಂಚಿಕೆ

ಬಸವರಾಜ ಹವಾಲ್ದಾರ
Published 11 ಏಪ್ರಿಲ್ 2018, 10:42 IST
Last Updated 11 ಏಪ್ರಿಲ್ 2018, 10:42 IST

ಹುಬ್ಬಳ್ಳಿ: ಚುನಾವಣೆ ದಿನಾಂಕ ಘೋಷಣೆಯ ಮುನ್ನ ಜೋರಾಗಿದ್ದ ಪ್ರಚಾರದ ಭರಾಟೆಯು ಚುನಾವಣೆ ಘೊಷಣೆಯಾಗುತ್ತಿದ್ದಂತೆಯೇ ಮಂಕಾಗಿದೆ. ಟಿಕೆಟ್‌ ಖಾತ್ರಿಯಾಗದ ಕಾರಣ ಆಕಾಂಕ್ಷಿಗಳು ಬೆಂಗಳೂರು ಹಾಗೂ ನವದೆಹಲಿ ತಿರುಗಾಡುತ್ತಿದ್ದಾರೆ. ಹೀಗಾಗಿ, ಕೆಲವು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ರಂಗೇರಿಲ್ಲ.

ಚುನಾವಣೆಗೂ ಘೋಷಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜಿಲ್ಲೆಯಲ್ಲಿ ಪ್ರಚಾರ ಮಾಡಿದ್ದರು. ಚುನಾವಣೆ ಘೋಷಣೆಯಾದ ಮೇಲೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಟಿಕೆಟ್‌ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಪ್ರಮುಖ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ.

ಕಾಂಗ್ರೆಸ್‌, ಬಿಜೆಪಿಯಲ್ಲಿ ಟಿಕೆಟ್‌ ಪೈಪೋಟಿ ಜೋರಾಗಿದೆ. ಕೆಲವು ಕಡೆ ಆಕಾಂಕ್ಷಿಗಳ ಸಂಖ್ಯೆ ಎರಡಂಕಿ ಮುಟ್ಟಿರುವುದು ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರ ತಲೆ ಬಿಸಿ ಹೆಚ್ಚಿಸಿದೆ.

ADVERTISEMENT

ಜೆಡಿಎಸ್‌ ಹಾಗೂ ಬಿಜೆಪಿ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ತಲಾ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿವೆ. ಕಾಂಗ್ರೆಸ್‌ ಇನ್ನೂ ಯಾವುದೇ ಕ್ಷೇತ್ರದ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಿಲ್ಲ.

ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಅದೇ ರೀತಿ ನವಲಗುಂದ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ಗೆ ಏಳಕ್ಕೂ ಹೆಚ್ಚು ಮಂದಿ ಪೈಪೋಟಿ ನಡೆಸಿದ್ದಾರೆ. ಬಂಡಾಯದ ಭೀತಿಯಿಂದಾಗಿ ನಾಯಕರು ಟಿಕೆಟ್‌ ಹಂಚಿಕೆ ವಿಷಯದಲ್ಲಿ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಮನೆ, ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದೇವೆ. ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಲು ಹೋಗುತ್ತಿಲ್ಲ. ಟಿಕೆಟ್‌ ಖಚಿತವಾಗದ್ದರಿಂದ ಖರ್ಚು ಭರಿಸುವುದು ಯಾರು? ಮತ ಯಾರಿಗೆ ಕೇಳಬೇಕು ಎಂಬ ಗೊಂದಲವಿದೆ. ಹಾಗಾಗಿ, ಕೆಲವರು ಮನೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಟಿಕೆಟ್‌ ಖಚಿತವಾದ ಮೇಲೆಯೇ ಮತ್ತೆ ಪ್ರಚಾರ ಬಿರುಸು ಪಡೆದುಕೊಳ್ಳಲಿದೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರೊಬ್ಬರು.

ಶೆಟ್ಟರ್ ಕ್ಷೇತ್ರ ವದಂತಿಗೆ ತೆರೆ:

ವಿಧಾನಸಭೆ ವಿರೋಧ ಪಕ್ಷ ನಾಯಕ ಜಗದೀಶ ಶೆಟ್ಟರ್‌ ಅವರನ್ನು ಈ ಬಾರಿ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರ ಬಿಟ್ಟು, ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ಮುಖಂಡರು ಸೂಚಿಸಿದ್ದಾರೆ ಎಂಬ ವದಂತಿಗೆ ತೆರೆ ಬಿದ್ದಿದೆ.ಐದು ಬಾರಿ ಗೆಲುವು ಸಾಧಿಸಿರುವ ಸೆಂಟ್ರಲ್‌ ಕ್ಷೇತ್ರದಿಂದಲೇ ಆರನೇ ಬಾರಿಗೆ ಶೆಟ್ಟರ್‌ ಕಣಕ್ಕೆ ಇಳಿಯುತ್ತಿದ್ದಾರೆ. ಜೆಡಿಎಸ್‌ನಿಂದ ರಾಜಣ್ಣಾ ಕೊರವಿ ಅಂತಿಮವಾಗಿದ್ದು, ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು ಎಂಬುದು ಖಚಿತವಾಗಿಲ್ಲ.


ಕಾಂಗ್ರೆಸ್‌ಗೆ ತಲೆ ನೋವು ಹೆಚ್ಚಿಸಿದ ನವಲಗುಂದ:

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರ ಸೇರ್ಪಡೆ ಕಾಂಗ್ರೆಸ್‌ ನಾಯಕರ ತಲೆ ನೋವು ಹೆಚ್ಚಿಸಿದೆ.
ಕರಿಗಾರ ಸೇರ್ಪಡೆ ವಿರೋಧಿಸಿ ನವಲಗುಂದ ಟಿಕೆಟ್‌ ಆಕಾಂಕ್ಷಿಗಳು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅವರಿಗೆ ದೂರು ನೀಡಿದ್ದಾರೆ. ಪರ್ಯಾಯ ಹಾದಿ ತುಳಿಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.ನವಲಗುಂದದಲ್ಲಿ ಸಭೆ ಸೇರಿದ್ದ ಆಕಾಂಕ್ಷಿಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಟಿಕೆಟ್‌ ನೀಡಬಾರದು. ನಮ್ಮಲ್ಲಿಯೇ ಒಬ್ಬರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದು ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕುಲಕರ್ಣಿ, ದೇಸಾಯಿ 4ನೇ ಬಾರಿ ಮುಖಾಮುಖಿ

ಹುಬ್ಬಳ್ಳಿ: ಹಂಗರಕಿ ದೇಸಾಯಿ ಮನೆತನದ ಸದಸ್ಯರೊಬ್ಬರು ಎಂಟನೇ ಬಾರಿಗೆ ಧಾರವಾಡ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. 1985 ರಿಂದ ಆರಂಭವಾದ ಚುನಾವಣೆ ಸ್ಪರ್ಧೆಯ ಯಾತ್ರೆ ಈಗಲೂ ಮುಂದುವರಿದಿದೆ.

1985 ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಹಂಗರಕಿ ದೇಸಾಯಿ ಮನೆತನದ ಎ.ಬಿ. ದೇಸಾಯಿ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿಯೇ ಅವರು ಗೆಲುವು ಸಾಧಿಸಿದ್ದರು. ನಂತರ ಜನತಾ ದಳ ಹಾಗೂ ಜೆಡಿಯು ನಿಂದ ನಾಲ್ಕು ಬಾರಿ ಸ್ಪರ್ಧಿಸಿ, ಸೋತಿದ್ದರು.

ಎ.ಬಿ. ದೇಸಾಯಿ ಅವರ ಪುತ್ರ ಅಮೃತ ದೇಸಾಯಿ 2008 ಹಾಗೂ 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಏಳು ಬಾರಿ ಜನತಾ ಪರಿವಾರದಿಂದ ಸ್ಪರ್ಧಿಸಿದ್ದ ಈ ಕುಟುಂಬದ ಸದಸ್ಯರೊಬ್ಬರು, ಮೊದಲ ಬಾರಿಗೆ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಿದ್ದಾರೆ.

ತಂದೆ–ಮಗನ ಸ್ಪರ್ಧೆ ಸಚಿವ ವಿನಯ ಕುಲಕರ್ಣಿ ಅವರು 2004ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು ಮೊದಲ ಯತ್ನದಲ್ಲಿಯೇ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಎ.ಬಿ. ದೇಸಾಯಿ ಅವರು ಜೆಡಿಯು ನಿಂದ ಸ್ಪರ್ಧಿಸಿದ್ದರು. 2008 ರಲ್ಲಿ ಜೆಡಿಎಸ್‌ನಿಂದ ಎ.ಬಿ. ದೇಸಾಯಿ ಅವರ ಪುತ್ರ ಅಮೃತ ದೇಸಾಯಿ ಸ್ಪರ್ಧಿಸಿದ್ದರು.

ಸಚಿವ ವಿನಯ ಕುಲಕರ್ಣಿ ಅವರಿಗೆ ಇದು ನಾಲ್ಕನೇ ಚುನಾವಣೆ. ಎಲ್ಲ ಚುನಾವಣೆಗಳಲ್ಲಿ ಹಂಗರಕಿ ದೇಸಾಯಿ ಕುಟುಂಬದ ಸದಸ್ಯರೊಬ್ಬರು ಎದುರಾಳಿಯಾಗಿದ್ದಾರೆ ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.