ADVERTISEMENT

ಗಾಂಧಿ ಸತ್ಯಾಗ್ರಹ ಅನುಸರಿಸಿದ ಬೇಂದ್ರೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 4:55 IST
Last Updated 4 ಅಕ್ಟೋಬರ್ 2012, 4:55 IST

ಮುಗದ (ತಾ.ಧಾರವಾಡ): ಮಹಾತ್ಮ ಗಾಂಧೀಜಿಯವರು ಕೈಕೊಂಡಿದ್ದ ರಾಷ್ಟ್ರೀಯ ಆಂದೋಲನವು ಸತ್ಯಾಗ್ರಹದ ಹಾದಿಯಲ್ಲಿ ಹೋಗುತ್ತಿದ್ದಾಗ ಬರಹದ ಮೂಲಕ ಕನ್ನಡ ಕವಿಗಳು ಓದು ಬಲ್ಲವರಲ್ಲಿ ಉಂಟು ಮಾಡುತ್ತಿದ್ದ ಜಾಗೃತಿ, ಆದರ್ಶದ ಪ್ರತಿಪಾದನೆ, ಮಾನವ ಹಕ್ಕುಗಳ ರಕ್ಷಣೆಯ ಕೂಗು- ಅಂದಿನ ಸಾಹಿತ್ಯದಲ್ಲಿ ದಾಖಲಾಗುತ್ತಿದ್ದವು. ನರಬಲಿ  ಎಂಬ ಚಿಂತನಶೀಲ ಕವಿತೆಯನ್ನು ದ.ರಾ.ಬೇಂದ್ರೆಯವರು 1930ರಲ್ಲಿ ಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸಿದರು~ ಎಂದು ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಹೇಳಿದರು.   

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಮುಗದ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲಿ ಮಂಗಳವಾರ ಗ್ರಾಮದಲ್ಲಿ ಏರ್ಪಡಿಸಿದ್ದ `ಬೇಂದ್ರೆ ಕಾವ್ಯಾನುಭವ~ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, `ಆ ಮೂಲಕ ಗಾಂಧೀಜಿ ಅವರ ಸತ್ಯಾಗ್ರಹವನ್ನು ಅನುಸರಿಸಿದರು.

1932ರಲ್ಲಿ ನರಬಲಿ ಕವನ ಗರಿ ಕವನ ಸಂಕಲನದಲ್ಲಿ ಮುದ್ರಿತವಾದಾಗ, ಬ್ರಿಟಿಷರು ರಾಜದ್ರೋಹದ ಆಪಾದನೆ ಹೊರಿಸಿ ಬೇಂದ್ರೆ ಅವರನ್ನು ಹಿಂಡಲಗಿ ಕೇಂದ್ರ ಕಾರಾಗೃಹಕ್ಕೆ ಒಯ್ದರು. ಮೂರು ತಿಂಗಳ ನಂತರ, ಕವಿಯನ್ನು ಆಪಾದನೆಯಿಂದ ಬಿಡುಗಡೆಗೊಳಿಸಬೇಕೆಂದು ನಿಶ್ಚಯಿಸಿ, ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲು ಯತ್ನಿಸಿದರು. ಸ್ವಾಭಿಮಾನಿ ಕವಿ ಮುಚ್ಚಳಿಕೆ ಬರಕೊಡಲಿಲ್ಲವಾದ್ದರಿಂದ ಮುಂದಿನ 8 ತಿಂಗಳ ಅವರಿಗೆ ನಜರಬಂದಿ ಶಿಕ್ಷೆ ವಿಧಿಸಿ ಮುಗದ ಗ್ರಾಮದಲ್ಲಿ ಉಳಿಯುವಂತೆ ಮಾಡಿದರು~ ಎಂದು ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ. ಅಧ್ಯಕ್ಷ ಬಾಬು ಯಲ್ಲಪ್ಪ ಕರೋನವರ ಗಾಂಧೀಜಿಯವರ ಆದರ್ಶಗಳ ಬಗ್ಗೆ ಮಾತನಾಡಿದರು. 

ಪ್ರೊ.ಎ.ಜಿ.ಸಬರದ ಬೇಂದ್ರೆಯವರ ಜಾನಪದ ಧಾಟಿಯ ಪದ್ಯಗಳನ್ನು ವಿಶ್ಲೇಷಿಸಿದರು.ಮುಕುಂದ ಕುಲಕರ್ಣಿಯವರು ಬೇಂದ್ರೆಯವರ ಪ್ರಮುಖ ಗೀತೆಗಳ ಗಾಯನ ನಡೆಸಿಕೊಟ್ಟರು, ತಬಲಾದಲ್ಲಿ ಸುರೇಶ ನಿಡಗುಂಡಿ, ಹಾರ‌್ಮೋನಿಯಂದಲ್ಲಿ ಬಾವಾಖಾನ್ ಇವರು ಸಾಥ್ ನೀಡಿದರು.

ಹನುಮಂತಪ್ಪ ಮಾವಳೇಕರ ಪ್ರೌಢಶಾಲಾ ವಿದ್ಯಾರ್ಥಿಗಳು ಗಾಂಧೀ ಸ್ಮೃತಿ ನಡೆಸಿಕೊಟ್ಟರು. ಗ್ರಾ.ಪಂ. ಉಪಾಧ್ಯಕ್ಷ ಹನುಮಂತಪ್ಪ ಹುಲಾ ಜನವರ, ಟಿ.ಎನ್.ನರೇಂದ್ರ, ಕೆ.ಎಸ್.ಡೊಳ್ಳಿನ, ಗಿಡ್ಡಪ್ಪ ಶಿವಳ್ಳಿ, ಪುಂಡಲಿಕ ಭೋವಿ, ಗ್ರಾಮ ಪಂಚಾಯತ ಕಾರ್ಯದರ್ಶಿ ಆರ್.ಎಸ್.ಪತ್ತಾರ, ಡಾ.ಹ.ವೆಂ.ಕಾಖಂಡಿಕಿ, ವೆಂಕಟೇಶ ದೇಸಾಯಿ ಹಾಜರಿದ್ದರು. ನರಸಿಂಹ ಪರಾಂಜಪೆ ಸ್ವಾಗತಿಸಿದರು, ಎಲ್.ಎಸ್. ನಾಯಕ ವಂದಿಸಿದರು. ಮುಕುಂದ ಕುಲಕರ್ಣಿ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.