ADVERTISEMENT

ಗಾಯಾಳುಗಳ ರಕ್ತ, ಲಾಲಾರಸ ಮಾದರಿ ಪರೀಕ್ಷೆ

ನೀರಲಕಟ್ಟಿ: ಹುಚ್ಚುಬೆಕ್ಕು ಕಡಿತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 9:45 IST
Last Updated 2 ಏಪ್ರಿಲ್ 2018, 9:45 IST

ಧಾರವಾಡ: ತಾಲ್ಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ಹುಚ್ಚು ಬೆಕ್ಕು ಕಡಿತದಿಂದ ಗಾಯಗೊಂಡವರ ರಕ್ತ ಹಾಗೂ ಲಾಲಾರಸದ ಮಾದರಿಯನ್ನು ಸಂಗ್ರಹಿಸಿ
ರುವ ಜಿಲ್ಲಾ ಆರೋಗ್ಯ ಇಲಾಖೆಯು ಹೆಚ್ಚಿನ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಿದೆ.ಫೆಬ್ರುವರಿ 3 ಹಾಗೂ 4ರಂದು ಗ್ರಾಮದಲ್ಲಿ ಹುಚ್ಚು ಬೆಕ್ಕೊಂದು 6 ಜನರನ್ನು ಕಚ್ಚಿ ಗಾಯಗೊಳಿಸಿತ್ತು. ಇದಾದ ಒಂದೂವರೆ ತಿಂಗಳ ನಂತರ ಮಾರ್ಚ್‌ 18ರಂದು ಗಿರಿಜಾ ಗಂಟಿ ಹಾಗೂ ಮಾರ್ಚ್‌ 26ರಂದು ಮಲ್ಲೇಶಪ್ಪ ಮಟಗಿ ಎಂಬುವವರು ಮೃತಪಟ್ಟಿದ್ದರು. ನಂತರ ಬೆಕ್ಕನ್ನು ಸಾಯಿಸಲಾಯಿತು. ಇದಾದ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಬೆಕ್ಕು ಕಡಿತಕ್ಕೆ ಒಳಗಾದ ಇತರ ನಾಲ್ವರು ಗಾಯಾಳುಗಳು ಟಿಟಿ ಚುಚ್ಚುಮದ್ದು ಪಡೆದಿದ್ದರು. ಆದರೆ, ಈ ಇಬ್ಬರು ಮೃತಪಟ್ಟ ನಂತರ ರ‍್ಯಾಬಿಪ್ಯೂರ್‌ (ರೇಬಿಸ್‌ ಚುಚ್ಚುಮದ್ದು) ಪಡೆಯಲು ಆರಂಭಿಸಿದ್ದಾರೆ.ಈ ಕುರಿತು ಮಾರ್ಚ್‌ 29ರಂದು ‘ರೇಬಿಸ್‌: ನೀರಲಕಟ್ಟಿಯಲ್ಲಿ ಇಬ್ಬರ ಸಾವು’ ಎಂಬ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸುವ ಮೂಲಕ ಜಿಲ್ಲಾ ಆರೋಗ್ಯ ಇಲಾಖೆಯ ಗಮನ ಸೆಳೆದಿತ್ತು.

ಈ ವರದಿ ಆಧರಿಸಿ ಗ್ರಾಮಕ್ಕೆ ದೌಡಾಯಿಸಿದ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮದಲ್ಲಿ ಹುಚ್ಚು ಬೆಕ್ಕು ಯಾರಿಗಾದರೂ ಅಥವಾ ಯಾವುದೇ ಪ್ರಾಣಿಗೆ ಕಚ್ಚಿದ್ದರೆ ಮಾಹಿತಿ ನೀಡಿ ಎಂದು ಡಂಗುರ ಸಾರಿದ್ದರು. ಬಳಿಕ ಹುಚ್ಚುಬೆಕ್ಕು ಕಡಿತಕ್ಕೊಳಗಾದವರ ರಕ್ತದ ಮಾದರಿ ಸಂಗ್ರಹಿಸಿದ್ದರು. ಜೊತೆಗೆ ಅವರ ಸಂಬಂಧಿಗಳಿಗೂ ರೇಬಿಸ್‌ ಚುಚ್ಚುಮದ್ದು ನೀಡಿ, ಇದೀಗ ಕೋಟೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಪಶು ಇಲಾಖೆ ಸಿಬ್ಬಂದಿ ಶನಿವಾರದಿಂದ ಗ್ರಾಮದಲ್ಲಿ 70ಕ್ಕೂ ಹೆಚ್ಚು ಬೀದಿ ನಾಯಿಗಳು ಮತ್ತು 20ಕ್ಕೂ ಹೆಚ್ಚು ಬೆಕ್ಕುಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿದ್ದಾರೆ.

ಪಶು ವೈದ್ಯಾಧಿಕಾರಿ ಡಾ.ರಮೇಶ ಹೆಬ್ಬಳ್ಳಿ, ‘ಗ್ರಾಮದಲ್ಲಿರುವ ಎಲ್ಲ ನಾಯಿ ಹಾಗೂ ಬೆಕ್ಕುಗಳಿಗೆ ಚುಚ್ಚುಮದ್ದು ನೀಡಲಾಗುತ್ತಿದೆ. ನಂತರ ಜಾನುವಾರುಗಳ ಸ್ಥಿತಿ ನೋಡಿ ಚುಚ್ಚುಮದ್ದು ನೀಡುವ ಕುರಿತು ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್‌.ಎಂ.ದೊಡ್ಡಮನಿ ಪ್ರತಿಕ್ರಿಯಿಸಿ, ‘ಶನಿವಾರ ಗಾಯಾಳುಗಳ ರಕ್ತ ಹಾಗೂ ಲಾಲಾರಸ ಮಾದರಿ ಸಂಗ್ರಹಿಸಿ ಕಿಮ್ಸ್‌ಗೆ ಕಳುಹಿಸಲಾಗಿದೆ. ಸೋಮವಾರ ಸಂಜೆಯ ಹೊತ್ತಿಗೆ ವರದಿ ಸಿಗುವ ಸಾಧ್ಯತೆ ಇದೆ. ಗ್ರಾಮದಲ್ಲಿ ಇಬ್ಬರ ಮೃತಪಟ್ಟಿರುವುದು ರೇಬಿಸ್‌ನಿಂದಲೋ ಅಥವಾ ಬೇರಾವ ಕಾರಣಕ್ಕೆ ಎಂಬುದನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು’ ಎಂದು ಹೇಳಿದರು.

ಗ್ರಾಮದ ರಾಜು ಅಂಬಣ್ಣವರ ಪ್ರತಿಕ್ರಿಯಿಸಿ, ‘ಬೆಕ್ಕು ಕಚ್ಚಿದ ದಿನವೇ ಟಿಟಿ ಚುಚ್ಚುಮದ್ದು ಬದಲು ರೇಬಿಪ್ಯೂರ್‌ ಚುಚ್ಚುಮದ್ದು ನೀಡಿದ್ದರೆ ಜನರಲ್ಲಿ ಆತಂಕ ಕಡಿಮೆಯಾಗುತ್ತಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.