ADVERTISEMENT

ಚೈತ್ರ ಚಿನ್ನರ ಚಿಮ್ಮೇಳದಲ್ಲಿ `ಬಣ್ಣದ ನೋಟ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 5:30 IST
Last Updated 5 ಏಪ್ರಿಲ್ 2013, 5:30 IST

ಧಾರವಾಡ: `ಜಾತಿಯಾದರೇನು, ನೀತಿಯಾದರೇನು ನಮ್ಮಲ್ಲಿ ಹರಿಯುತ್ತಿರುವ ರಕ್ತ ಒಂದೇ. ನಾವೆಲ್ಲ ಮಾನವ ಕುಲದ ಸುಂದರ ಪುಷ್ಟಗಳು' ಎಂಬ ಸಂಭಾಷಣೆಗಳು ಅಲ್ಲಿ ಕೇಳಿ ಬರುತ್ತಿದ್ದವು. ದೊಡ್ಡ ಕಲಾವಿದರ ಎತ್ತರಕ್ಕೆ ಬೆಳೆಯದಿದ್ದರೂ ಕೇವಲ ಒಂಬತ್ತು ದಿನದಲ್ಲಿ ಸುಂದರ ನಾಟಕವನ್ನು ಪ್ರದರ್ಶನ ಮಾಡುವಷ್ಟು ಕಲೆಯನ್ನು ಆ ಪುಟಾಣಿಗಳು ಪಡೆದುಕೊಂಡಿದ್ದರು.

ಇಲ್ಲಿಯ ದಯಾನಂದ ಧಾಮದಲ್ಲಿ, ಹುಬ್ಬಳ್ಳಿ-ಧಾರವಾಡ ಸಮುದಾಯ ಘಟಕ ಹಾಗೂ ಏಮ್ ಫಾರ್ ಸೇವಾದ ವತಿಯಿಂದ ಕಳೆದ ಒಂಬತ್ತು ದಿನಗಳಿಂದ ಮಕ್ಕಳಿಗಾಗಿ ನಡೆದ `ಚೈತ್ರ ಚಿನ್ನರ ಚಿಮ್ಮೇಳ' ಎಂಬ ಬೇಸಿಗೆ ಶಿಬಿರವು ಗುರುವಾರ ಸಮಾರೋಪಗೊಂಡಿತು.

ಈ ಸಮಾರಂಭದಲ್ಲಿ ಮಕ್ಕಳು ಪ್ರದರ್ಶಿಸಿದ `ಬಣ್ಣದ ನೋಟಗಳು' ಎಂಬ ನಾಟಕದಲ್ಲಿ ಮಕ್ಕಳಿಂದ ಕೇಳಿ ಬಂದ ಸಂಭಾಷಣೆಗಳು, ಅಲ್ಲಿ ಸೇರಿದ್ದ ಪಾಲಕರ ಹಾಗೂ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಕೇವಲ ಒಂಬತ್ತು ದಿನಗಳಲ್ಲಿ ಈ ಮಕ್ಕಳು ಇಷ್ಟೊಂದು ತರಬೇತಿ ಪಡೆದುಕೊಂಡಿವೆಯೇ ಎಂದು ಅಚ್ಚರಿಯನ್ನೂ ಮೂಡಿಸಿದರು.

ಬಣ್ಣದ ನೋಟಗಳು ಎಂಬ ನಾಟಕದಲ್ಲಿ ಮೂರು ನಾಟಕಗನ್ನು ಒಟ್ಟಿಗೆ ಸೇರಿಸಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.
ಸಂದರ್ಭಕ್ಕೆ ತಕ್ಕ ಸಂಭಾಷಣೆ, ಆ ಸಂಭಾಷಣೆಗೆ ತಕ್ಕಂತೆ ಮಕ್ಕಳ ಮುಖದಲ್ಲಿ ಉಂಟಾಗುತ್ತಿದ್ದ ಹಾವಭಾವ ಎಲ್ಲರನ್ನು ಸೆಳೆಯಿತು. ಒಟ್ಟು 48 ಜನ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆದುಕೊಂಡರು. ಅಲ್ಲದೇ ಆ 48 ಜನ ಮಕ್ಕಳು ಒಂದೇ ನಾಟಕದಲ್ಲಿ ಭಾಗವಹಿಸಿ ನಾಟಕ ಯಶಸ್ವಿಯಾಗಿ ಪ್ರದರ್ಶನ ಮಾಡಿದ್ದು, ವಿಶೇಷವಾಗಿತ್ತು.

ನಂತರ ನಡೆದ ಸಮಾರೋಪದಲ್ಲಿ ಮಾತನಾಡಿದ ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ, `ನಾವು ಯಾವುದೇ ಒಂದು ಮಂದಿರಕ್ಕೆ ಹೋಗಿ ಸೇವೆ ಸಲ್ಲಿಸುವುದಕ್ಕಿಂತ ವೃದ್ಧಾಪ್ಯರ ಹಾಗೂ ಅನಾಥ ಮಕ್ಕಳ ಸೇವೆ ಮಾಡಿದರೆ ಆ ಸೇವೆ ನೇರವಾಗಿ ದೇವರಿಗೆ ಸಲ್ಲುತ್ತದೆ. ಈ ದಿನದಲ್ಲಿ ಮಕ್ಕಳ ಮನಸ್ಸು ಹೇಗೆ ಅರಳುವ ನಿಟ್ಟಿನಲ್ಲಿ ಮಕ್ಕಳನ್ನು ಮುಕ್ತವಾಗಿ ಬಿಟ್ಟು ಶಿಬಿರದ ನಿರ್ದೇಶಕರು ಮಕ್ಕಳಿಗೆ ತರಬೇತಿ ನೀಡಿದ್ದಾರೆ' ಎಂದರು.

ಸಮುದಾಯದ ಅಧ್ಯಕ್ಷ ಎಸ್.ಎಸ್.ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಚಿದ್ರೋಪಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕ್ಲಾಸಿಕ್ ಮ್ಯಾನೇಜಿಂಗ್ ಡೈರೆಕ್ಟರ್ ಲಕ್ಷ್ಮಣ ಉಪ್ಪಾರ ಶಿಬಿರದ ನಿರ್ದೇಶಕ ಲಕ್ಷ್ಮಣ ಪೀರಗಾರ, ಸಂತೋಷ ಹೆಗ್ಗೋಡ ಹಾಗೂ ಬಿ.ಐ.ಈಳಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.