ADVERTISEMENT

ಜನವರಿಗೆ ಬಿಆರ್‌ಟಿಎಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 6:41 IST
Last Updated 20 ಅಕ್ಟೋಬರ್ 2017, 6:41 IST

ಧಾರವಾಡ: ‘ಹುಬ್ಬಳ್ಳಿ-ಧಾರವಾಡ ಅವಳಿನಗರ ಮಧ್ಯದ ಬಹು ನೀರಿಕ್ಷೆಯ ತ್ವರಿತ ಸಾರಿಗೆ ಸೇವೆ (ಬಿಆರ್‌ಟಿಎಸ್) ಸಂಚಾರ ಜನವರಿಯಿಂದ ಆರಂಭವಾಗಲಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದರು.

‘ಯೋಜನೆಗೆ ಸಂಬಂಧಿಸಿದ ಎಲ್ಲ ಅಡಚಣೆಗಳನ್ನು ಬಗೆಹರಿಸಲಾಗಿದೆ. ಕೆಲವೇ ವಾರಗಳಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ’ ಎಂದು ಮಂಗಳವಾರ ಇಲ್ಲಿನ ಬಿಆರ್‌ಟಿಎಸ್ ಡಿಪೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅವಳಿ ನಗರಗಳಲ್ಲಿನ ಬಿಆರ್‌ಟಿಎಸ್ ಡಿಪೊ, ಬಸ್ ನಿಲ್ದಾಣ, ಮೇಲ್ಸೆತುವೆಗಳು, ಸೇತುವೆಗಳು ಮತ್ತಿತರ ಕಾಮಗಾರಿಗಳ ಪ್ರಗತಿ ಪರೀಶೀಲನೆ ಮಾಡಿದ್ದೇವೆ. ಈವರೆಗೆ ಒಟ್ಟು 35 ಕಿ.ಮೀ. ಉದ್ದದ ಯೋಜನೆಯಲ್ಲಿ 20 ಕಿ.ಮೀ. ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದೆ. ಇನ್ನೂ 6 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ.

ADVERTISEMENT

2 ಕಿ.ಮೀ ವಿಭಜಕ ರಸ್ತೆಯ ಕೆಲಸ ನಡೆಯುತ್ತಿದೆ. ಧಾರವಾಡ ಶಹರ ವ್ಯಾಪ್ತಿಯಲ್ಲಿನ 6 ಕಿ.ಮೀ ರಸ್ತೆಯಲ್ಲಿನ ಒಳಚರಂಡಿ, ವಿದ್ಯುತ್, ಕುಡಿಯುವ ನೀರು ಪೂರೈಕೆ, ಕೊಳವೆ ಮಾರ್ಗಗಳನ್ನು ಸ್ಥಳಾಂತರಿಸಲಾಗುತ್ತಿದೆ. ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ, ಬಸ್‌ಗಳಿಗೆ ಜಿಪಿಎಸ್ ಅಳವಡಿಕೆ, ಸ್ಮಾರ್ಟ ಕಾರ್ಡ್‌ಗಳ ಮೂಲಕ ಟಿಕೆಟ್ ವಿತರಣೆ ಸೇರಿದಂತೆ ಎಲ್ಲ ಆಧುನಿಕ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುವುದು’ ಎಂದರು.

‘ಬಿಆರ್‌ಟಿಎಸ್ ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜತೆ ಆದಾಯ ಹಂಚಿಕೆ, ಸಿಬ್ಬಂದಿಗಳ ನೇಮಕ, ತರಬೇತಿ ಮುಂತಾದ ವಿಷಯಗಳ ಕುರಿತು ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.

‘ನ್ಯಾಯಾಲಯದಲ್ಲಿನ ಪ್ರಕರಣಗಳ ವಿಚಾರಣೆ ಮತ್ತು ಧಾರವಾಡ ಹಳೇ ಬಸ್‌ನಿಲ್ದಾಣ ಕಾಮಗಾರಿಯ ಗುತ್ತಿಗೆದಾರರ ಬದಲಾವಣೆಯಿಂದ ಯೋಜನೆಯ ಆರಂಭ ವಿಳಂಬವಾಗಿದೆ. ಶೀಘ್ರದಲ್ಲಿಯೇ ಬಸ್ ಸಂಚಾರ ಆರಂಭಿಸುವ ಉದ್ದೇಶದಿಂದ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ನಿರ್ದೇಶನ ನೀಡಲಾಗಿದೆ’ ಎಂದು ಭರವಸೆ ನೀಡಿದರು.
ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ, ಡಿಜಿಎಂ ಬಸವರಾಜ ಕೇರಿ, ಸುನೀಲ ಅಭಯಂಕರ, ವಿ.ಎಸ್.ವಿ. ಪ್ರಸಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.