ADVERTISEMENT

ಜಯಮೃತ್ಯುಂಜಯ ಸ್ವಾಮಿ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:57 IST
Last Updated 7 ನವೆಂಬರ್ 2017, 6:57 IST
ವೀರಶೈವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಶಹರ ಠಾಣೆ ಪೊಲೀಸ್‌ ಅಧಿಕಾರಿಗೆ ದೂರು ಸಲ್ಲಿಸಿದರು (ಎಡಚಿತ್ರ). ನವಲಗುಂದದಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು
ವೀರಶೈವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಶಹರ ಠಾಣೆ ಪೊಲೀಸ್‌ ಅಧಿಕಾರಿಗೆ ದೂರು ಸಲ್ಲಿಸಿದರು (ಎಡಚಿತ್ರ). ನವಲಗುಂದದಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು   

ಹುಬ್ಬಳ್ಳಿ: ನಗರದಲ್ಲಿ ಭಾನುವಾರ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಸಮಾವೇಶದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವೀರಶೈವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ದುರ್ಗದ ಬೈಲ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ವೀರಶೈವರ ಆರಾಧ್ಯ ದೈವ ಪಂಚಾಚಾರ್ಯರ ಬಗ್ಗೆ ಸ್ವಾಮೀಜಿ ನಾಲಿಗೆ ಹರಿಬಿಟ್ಟಿದ್ದಾರೆ. ಹಾಗಾಗಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ಐದು ಸಾವಿರ ವರ್ಷಗಳಿಂದ ಅಸ್ತಿತ್ವದಲ್ಲಿರುವ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಹುನ್ನಾರಗಳು ಇತ್ತೀಚೆಗೆ ನಡೆಯುತ್ತಿದ್ದು, ಧರ್ಮದ ಮಧ್ಯೆ ಬಿರುಕು ಮೂಡಿಸುತ್ತಿರುವ ಸಚಿವರಾದ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರ ವರ್ತನೆ ಖಂಡನೀಯ ಎಂದು ಸಮಾಜದ ಕಾರ್ಯದರ್ಶಿ ಚನ್ನಯ್ಯ ಚೌಕಿಮಠ ಟೀಕಿಸಿದರು.

‘ಕಲಬುರ್ಗಿ ನಗರದ ಸುಲಫಲಮಠದ ಸಾರಂಗದೇವ ಸ್ವಾಮೀಜಿ ಹಾಗೂ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಬಂಗಾರೇಶ ಹಿರೇಮಠ ಮಾತನಾಡಿದರು.

ADVERTISEMENT

ಗಡಿಪಾರಿಗೆ ಒತ್ತಾಯ
ನವಲಗುಂದ: ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಅವರ ಹೇಳಿಕೆ ಖಂಡಿಸಿ ಸ್ಥಳೀಯ ವೀರಶೈವ ಲಿಂಗಾಯತ ಸಮಾಜದವರು ಸೋಮವಾರ ಪ್ರತಿಭಟನೆ ನಡೆಸಿದರು. ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೀಲಮ್ಮನ ಕೆರೆಯ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಮೀಜಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

‘ಕಾವಿ ಧರಿಸಿರುವ ಸ್ವಾಮೀಜಿಗಳ ಬಾಯಲ್ಲಿ ಇಂತಹ ಮಾತುಗಳು ಬರಬಾರದು. ಸ್ವಾಮೀಜಿಯಾಗಲು ಅವರು ಯೋಗ್ಯರಲ್ಲ. ತಕ್ಷಣವೇ ಪೀಠ ತ್ಯಾಗ ಮಾಡಬೇಕು. ವೀರಶೈವ ಹಾಗೂ ಲಿಂಗಾಯತ ಸಮಾಜ ಬೇರೆ ಬೇರೆ ಎಂದು ಒಡಕು ಮೂಡಿಸುತ್ತಿರುವುದು ಸರಿಯಲ್ಲ. ವೀರಶೈವ ಸಮಾಜವನ್ನು ಅವಮಾನಿಸಿರುವ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಬಳಿಕ ಠಾಣೆಗೆ ತೆರಳಿ ಶ್ರೀಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದರು. ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಶ್ರೀಶೈಲ ಮೂಲಿಮನಿ, ಶಶಿಧರ ಭರತಭೋಜನಮಠ, ಕೊಟ್ರೇಶ ಹಿರೇಮಠ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.