ADVERTISEMENT

ಜಿಮ್ಖಾನಾ: ಕಾಮಗಾರಿ ಪೂರ್ಣಗೊಳಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:08 IST
Last Updated 2 ಸೆಪ್ಟೆಂಬರ್ 2013, 6:08 IST

ಹುಬ್ಬಳ್ಳಿ: ಈ ಮೊದಲೇ ಗೊತ್ತುಮಾಡಿದ ವೇಳಾಪಟ್ಟಿಯಂತೆ ಜಿಮ್ಖಾನ ಮೈದಾನದಲ್ಲಿನ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಭಾನುವಾರ ನಡೆದ ಕರ್ನಾಟಕ ಜಿಮ್ಖಾನಾ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಮೈದಾನ ಹಾಗೂ ಸುತ್ತ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗಾಗಿ ಈಗಾಗಲೇ ್ಙ11 ಕೋಟಿ ವೆಚ್ಚವಾಗಿದ್ದು, ಕೊರತೆ ಬಿದ್ದಿರುವ ಹಣವನ್ನು ಸಂಘದ ಸದಸ್ಯರಿಂದಲೇ ಸಂಗ್ರಹಿಸುವಂತೆ ಸಭೆಯಲ್ಲಿ ಕೆಲವರು ಸಲಹೆ ನೀಡಿದರು. ಇದಕ್ಕೆ ಬಹುತೇಕ ಸದಸ್ಯರು ಒಪ್ಪಿಗೆ ನೀಡಿದರು.

ಪ್ರತಿಹೋರಾಟಕ್ಕೆ ಸಜ್ಜು:` ಹುಬ್ಬಳ್ಳಿ ಸ್ಪೋರ್ಟ್ಸ್ ಗ್ರೌಂಡ್ ಬಚಾವೊ ಸಮಿತಿ ಸದಸ್ಯರು ಆರೋಪ ಮಾಡುತ್ತಿರುವಂತೆ ಯಾವುದೇ ರಾಜಕೀಯ ಪಕ್ಷಗಳಿಗೆ ಸೀಮಿತವಾದ ಕ್ಲಬ್ ಇದಲ್ಲ. ಕ್ಲಬ್ ರಚನೆಗೆ ಅವಶ್ಯವಾದ ಎಲ್ಲ ಅನುಮತಿಯನ್ನು ನ್ಯಾಯಸಮ್ಮತವಾಗಿ ಪಡೆಯಲಾಗಿದೆ. ಜಿಲ್ಲಾಧಿಕಾರಿಗಳು, ಪೊಲೀಸರಿಗೆ ಎಲ್ಲ ದಾಖಲೆಗಳನ್ನೂ ನೀಡಲಾಗಿದೆ.  

ಹೀಗಿದ್ದೂ ಸದಸ್ಯರ ಬಗ್ಗೆ `ಭೂಗಳ್ಳರು' ಎಂತೆಲ್ಲ ಪದಪ್ರಯೋಗ ಮಾಡುತ್ತಿರುವುದು ಸರಿಯಲ್ಲ. ಈ ಕುರಿತು ಪ್ರತಿಹೋರಾಟ ರೂಪಿಸಬೇಕು. ಪಾಟೀಲ ಪುಟ್ಟಪ್ಪ ಮನೆಯ ಮುಂದೆ ಧರಣಿ ಕೂರಬೇಕು' ಎಂದು ಸಮಿತಿಯ ಕೆಲವು ಸದಸ್ಯರು ಸಭೆಯಲ್ಲಿ ಸಲಹೆ ನೀಡಿದರು.

ಈ ಕುರಿತು ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಸಭೆ ನಿರ್ಧರಿಸಿತು. ಮೈದಾನದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಯುವಿಹಾರಕ್ಕೆ ಉಚಿತ ಪ್ರವೇಶ ನೀಡಲು ಸಭೆ ತೀರ್ಮಾನ ಕೈಗೊಂಡಿತು ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಸುಭಾಷ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುನಿಲ್ ಕೊಠಾರಿ ಆಯವ್ಯಯ ಪತ್ರ ಮಂಡಿಸಿದರು. ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.