ADVERTISEMENT

ಜಿಮ್ಖಾನಾ ಮೈದಾನ ವಿವಾದ: ಮೂಡದ ಒಮ್ಮತ

ಕ್ಲಬ್ ಪದಾಧಿಕಾರಿಗಳು - ಗ್ರೌಂಡ್ ಬಚಾವೋ ಸಮಿತಿ ನಡುವಿನ ಸಭೆ ವಿಫಲ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:15 IST
Last Updated 5 ಸೆಪ್ಟೆಂಬರ್ 2013, 6:15 IST

ಧಾರವಾಡ: ಹುಬ್ಬಳ್ಳಿಯ ದೇಶಪಾಂಡೆ ನಗರದ ಜಿಮ್ಖಾನಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ಪೊಲೀಸ್ ಕಮಿಷನರ್ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆ ಯಾವುದೇ ಒಮ್ಮತಕ್ಕೆ ಬರಲು ವಿಫಲವಾಯಿತು.

ಕಳೆದ ಹಲವು ದಿನಗಳಿಂದ ಜಿಮ್ಖಾನಾ ಮೈದಾನವನ್ನು ರಿಕ್ರಿಯೇಶನ್ ಕ್ಲಬ್ ಆಗಿ ಪರಿವರ್ತನೆ ಮಾಡುತ್ತಿರುವುದನ್ನು ವಿರೋಧಿಸಿ ಅವಳಿ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ಮೈದಾನ ಬಚಾವೊ ಸಮಿತಿ ಮತ್ತು ಜಿಮ್ಖಾನಾ ಕ್ಲಬ್ ಪದಾಧಿಕಾರಿಗಳ ಸಭೆ ಆಯೋಜಿಸ ಲಾಗಿತ್ತು. ಸುಮಾರು 3 ಗಂಟೆಗಳ ಕಾಲ ನಡೆದ ಸಭೆ ಎರಡು ಬಣದ ವಾದ-ಪ್ರತಿವಾದಗಳಿಗೆ ಸಾಕ್ಷಿಯಾಯಿತು.

ಮೈದಾನ ಬಚಾವೊ ಸಮಿತಿಯ ವಕೀಲ ಬಿ.ಡಿ.ಹೆಗಡೆ, ನಡೆಯುತ್ತಿರುವ ಪ್ರತಿಭಟನೆ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇದೆ. ಸದ್ಯ ನಡೆಯುತ್ತಿರುವ ಚಟುವಟಿಕೆಗಳು ಸಂಸ್ಥೆಯ ಉದ್ದೇಶಗಳಿಗೆ ವ್ಯತಿರಿಕ್ತವಾಗಿವೆ. ಅಲ್ಲದೇ, ನಿರ್ಮಾಣವಾ ಗುತ್ತಿರುವ ಕ್ಲಬ್ ಸುತ್ತಮುತ್ತ ಶಾಲೆ, ದೇವಾಲಯಗಳು, ಆಸ್ಪತ್ರೆಗಳಿವೆ. ಇದು ನಿಯಮಗಳಿಗೆ ವಿರುದ್ಧವಾದುದು. ಅಲ್ಲದೇ 12 ಅಡಿ ಎತ್ತರದ ಕಂಪೌಂಡ್ ಗೋಡೆ ನಿರ್ಮಾಣ ಮಾಡಿರುವುದು ಒಳಗಡೆ ಏನು ನಡೆಯುತ್ತದೆ ಎನ್ನುವ ಆತಂಕವನ್ನು ಸಾರ್ವಜನಿಕರಿಗೆ ತಂದೊಡ್ಡಿದೆ.

1925ರಿಂದ 2008ರವರೆಗೆ ಜಿಮ್ಖಾನಾ ಸ್ಪೋರ್ಟ್ಸ್ ಕ್ಲಬ್ ಯಾವುದೇ ಚಟುವಟಿಕೆಗಳನ್ನು ನಡೆಸಿಲ್ಲ. ಕೇವಲ ಕೆಲವೇ ಜನರ ಮೋಜಿಗಾಗಿ ಲಕ್ಷಾಂತರ ಜನರಿಗೆ ಅನಾನುಕೂಲ ಆಗಬಾರದು.ಹೀಗಾಗಿ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.

ಕ್ಲಬ್ ಪರವಾಗಿ ಮಾತನಾಡಿದ ರಮೇಶ ಶೆಟ್ಟಿ, `1915ರಲ್ಲಿಯೇ ಈ ಜಾಗೆಯನ್ನು ಜಿಮ್ಖಾನಾ ಸಂಸ್ಥೆಗೆ ನೀಡಲಾಗಿದೆ. 85 ವರ್ಷ ಮೈದಾನವನ್ನು ಸಂಸ್ಥೆಯೇ ನಿರ್ವಹಣೆ ಮಾಡಿಕೊಂಡು ಬಂದಿದೆ. ಬದಲಾಗುತ್ತಿರುವ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗಳನ್ನು ವಿಸ್ತರಿಸಬೇಕು. ಉತ್ತಮ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ 2009ರಲ್ಲಿ ಸದಸ್ಯರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಕೋರಿದ್ದರು. ಸರ್ಕಾರದಿಂದ ಹಣಕಾಸು ಸಹಾಯ ಅಪೇಕ್ಷಿಸದೇ ಸದಸ್ಯರ ವಂತಿಗೆಯಿಂದ ಕ್ರೀಡಾಸಂಕೀರ್ಣ ಸೇರಿದಂತೆ ಉತ್ಕೃಷ್ಟ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕಾರ್ಯಾರಂಭ ಮಾಡಲಾಗಿದೆ.

ಮೈದಾನ ನವೀಕರಣದ ಸಂದರ್ಭದಲ್ಲಿ ಸುರಕ್ಷತೆ ದೃಷ್ಟಿಯಿಂದ ಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಇದುವರೆಗೆ ಕ್ಲಬ್‌ನಲ್ಲಿ ಬಾರ್ ಆರಂಭಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ. ಒಂದು ವೇಳೆ ಸರ್ಕಾರ ಅನುಮತಿ ನೀಡದಿದ್ದರೆ ಬಾರ್ ಆರಂಭಿಸುವುದಿಲ್ಲ. ಕ್ಲಬ್ ಯಾವುದೇ ವ್ಯಕ್ತಿಯ ಹಕ್ಕುಗಳನ್ನು ಮೊಟಕುಗೊಳಿಸುತ್ತಿಲ್ಲ. ರಿಕ್ರಿಯೇಶನ್ ಕ್ಲಬ್ ಆರಂಭಿಸು ತ್ತಿರುವುದು ಅಭಿವೃದ್ಧಿಯ ಭಾಗವೇ ಹೊರತು ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ' ಎಂದು ಸ್ಪಷ್ಟಪಡಿಸಿದರು.

ಜೊತೆಗೆ ನಂದಕುಮಾರ, ಡಾ.ಸುಭಾಸ ಜೋಶಿ ಹಲವು ವಿಷಯಗಳ ಕುರಿತು ಸ್ಪಷ್ಟನೆ ನೀಡಿದರು. ಇದನ್ನು ಒಪ್ಪದ ಮೈದಾನ ಬಚಾವೋ ಸಮಿತಿ ಸದಸ್ಯರು ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕು, ಆಡಳಿತ ಮಂಡಳಿಯನ್ನು ರದ್ದುಗೊಳಿ ಸುವಂತೆ ಒತ್ತಾಯಿಸಿದರು.

ಎರಡು ಕಡೆಯ ವಾದ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಾಧ್ಯವಾದರೆ ಎರಡು ಕಡೆಯವರು ಕುಳಿತು ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ಒಪ್ಪಂದಕ್ಕೆ ಬರಲು ಸಾಧ್ಯವಾದರೆ ಒಳ್ಳೆಯದು. ನಿಮ್ಮ ವಾದಕ್ಕೆ ಪೂರಕವಾಗಿ ದಾಖಲೆಗಳನ್ನು ಒದಗಿಸಿ, ಏನಾದರೂ ಲೋಪಗಳಾಗಿದ್ದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಅಲ್ಲದೇ, ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು. ಈ ಕುರಿತು ಪಾಟೀಲ ಪುಟ್ಟಪ್ಪ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಸಮಿತಿ ಅಧ್ಯಕ್ಷ ಸಿ.ಬಿ.ಎಲ್.ಹೆಗಡೆ, ಗಜಾನನ ಮಹಾಮಂಡಳದ ಡಿ.ಗೋವಿಂದರಾವ್, ಮನೋಜ ಹಾನಗಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.