ADVERTISEMENT

ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 10:15 IST
Last Updated 18 ಜುಲೈ 2012, 10:15 IST
ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ
ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ   

ಧಾರವಾಡ: ಹಿಂಗಾರು ಕೈಕೊಟ್ಟು, ಕಾಳುಗಳ ಬಿತ್ತನೆಗೆ ಸಮಸ್ಯೆಯಾಯಿತು ಎಂದು ರೈತರು ಮುನಿಸಿಕೊಂಡ ಬೆನ್ನಲ್ಲೇ ಮಂಗಳವಾರವೂ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು.

ಮಧ್ಯಾಹ್ನ 3.45ಕ್ಕೆ ಆರಂಭವಾಗಿ ಸಂಜೆ ಐದು ಗಂಟೆಯವರೆಗೂ ಸುರಿಯಿತು. ಸೋಮವಾರ ಮಳೆ ಸುರಿದಿದ್ದರಿಂದ ನಗರದ ತಗ್ಗು ದಿನ್ನೆಯ ರಸ್ತೆಗಳು ಇನ್ನಷ್ಟು ಆಳಕ್ಕಿಳಿದಿದ್ದವು. ಮಂಗಳವಾರದ ಮಳೆಯೂ ಈ ಕಂದಕಗಳು ಇನ್ನಷ್ಟು ಆಳಕ್ಕೆ ಹೋಗಲು ಕಾಣ್ಕೆ ನೀಡಿತು.

ಬಡಾವಣೆಗಳ ಕಚ್ಚಾರಸ್ತೆಗಳಲ್ಲಿ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆಯುಂಟು ಮಾಡಿತು. ನಗರದಲ್ಲಿ ಮಳೆ ಆರಂಭವಾಗಿದೆ ಎಂಬುದನ್ನು ಅರಿತ ಬೈಕ್ ಸವಾರರು ಕಳೆದ ಎರಡು ದಿನಗಳಿಂದ ಜೆರ್ಕಿನ್, ರೇನ್‌ಕೋಟ್‌ಗಳನ್ನು ಹೊರಕ್ಕೆ ತಂದಿದ್ದು ಕೆಲಸಕ್ಕೆ ಬಂತು.

ಮಳೆ ಬಂದ ಹಿನ್ನೆಲೆಯಲ್ಲಿ ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯನ್ನು ಕೆಲ ಹೊತ್ತಿನ ಮಟ್ಟಿಗೆ ಕಡಿತಗೊಳಿಸಲಾಗಿತ್ತು. ಮಳೆಯಿಂದಾಗಿ ಹಾನಿ ಸಂಭವಿಸಿದ ಬಗ್ಗೆ ಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ಯಾವುದೇ ದೂರುಗಳು ದಾಖಲಾಗಿರಲಿಲ್ಲ.

ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ 4.2 ಮಿಲಿ ಮೀಟರ್ ಮಳೆ ದಾಖಲಾಗಿತ್ತು.
ಸಂತಸ ತಂದ ಮಳೆ
ಅಳ್ನಾವರ: ಪ್ರಸಕ್ತ ಸಾಲಿನಲ್ಲಿ ಆಗಾಗ ಜಿಟಿ ಜಿಟಿಯಾಗಿ ಬಂದು ಮಾಯವಾಗಿದ್ದ ಮಳೆ ಮಂಗಳವಾರ ಬೆಳಿಗ್ಗೆಯಿಂದ ಬಿಟ್ಟು ಬಿಡದೆ ಸುರಿದು ಮಳೆಗಾಲ ಆರಂಭವಾದ ವಾತಾವರಣ ನಿರ್ಮಿಸಿತು.

ಸೋಮವಾರ ಕರಾವಳಿ ಭಾಗದಲ್ಲಿ ಮಳೆ ಸುರಿದು ಮಂಗಳವಾರ ಈ ಭಾಗಕ್ಕೆ ಆಗಮಿಸಬಹುದು ಎಂಬ ಜನರ ನಿರೀಕ್ಷೆ ನಿಜವಾಯಿತು. ಬೆಳಿಗ್ಗೆ 10.30ರ ವರೆಗೆ ಬಿಸಿಲಿತ್ತು. 11 ಗಂಟೆಗೆ ನಿಧಾನವಾಗಿ ಆರಂಭವಾದ ಮಳೆ ದಿನವಿಡೀ ತನ್ನ ಪ್ರಭಾವ ತೋರಿತು.

ಮಳೆಗಾಲದಲ್ಲಿಯು ಬಿಸಿಲಿನ ಬೇಗೆ ಅನುಭವಿಸಿದ ಇಲ್ಲಿಯ ರೈತರ ಪಾಲಿಗೆ ಮಂಗಳವಾರ ಮಳೆ ತುಂಬಾ ಹರ್ಷ ಮೂಡಿಸಿತು. ಮಳೆ ಮಾಯವಾಗಿ ಬೆಳೆದ ಭತ್ತ ಸರಿಯಾಗಿ ಹುಟ್ಟದೆ ಇದ್ದಾಗ ಸುರಿದ ಮಳೆಯಿಂದಾಗಿ ರೈತರಿಗೆ ಖುಷಿ ನೀಡಿದೆ.

ಇನ್ನು ಮಳೆ ಇಲ್ಲದೆ ಕಬ್ಬು ಹಳದಿ ಬಣ್ಣಕ್ಕೆ ತಿರುಗಿತ್ತು ಜೊತೆಗೆ ಬಿಳಿ ಉಣ್ಣೆ ರೋಗಕ್ಕೆ ತುತ್ತಾಗುವ ಭೀತಿ ರೈತರನ್ನು ಕಾಡುತ್ತಿತ್ತು. ಈ ಮಳೆ ಕಬ್ಬು ಬೆಳೆಗೆ ಕೂಡಾ ಅನುಕೂಲವಾಗಲಿದೆ. ಅಲ್ಲದೇ ಗೋವಿನಜೋಳ ಹಾಗೂ ಹತ್ತಿ ಬೆಳೆಗೆ ಕೂಡಾ ಈ ಮಳೆ ಸಹಕಾರಿಯಾಗಲಿದೆ.

ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಪಟ್ಟಣದ ಕುಡಿಯುವ ನೀರಿಗೆ ಬರಗಾಲ ಬಂದಿತ್ತು. ಬೇಸಿಗೆ ಕಾಲದಲ್ಲಿ ಎರಡು ದಿನಕ್ಕೆ ಒಮ್ಮೆ ನೀರು ಪಡೆದ ಇಲ್ಲಿನ ಜನತೆ ಮಳೆಗಾಲದಲ್ಲಿ ನಾಲ್ಕು ದಿನಕ್ಕೆ ಒಮ್ಮೆ ನೀರು ಪಡೆಯುವ ಅನಿವಾರ್ಯತೆ ಒದಗಿ ಬಂತು. ಇಂದಿನ ಮಳೆಯಿಂದ ನೀರು ಪೂರೈಕೆಯ ಪ್ರಮುಖ ಮೂಲವಾದ ಡವಗಿ ನಾಲಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆಯಾಗಿದ್ದು, ಕುಡಿಯುವ ನೀರಿನ ಬರ ತೀರಿಸುವ ಆಶಾಭಾವನೆ ತಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.